ಗುರುವಾರ , ಜನವರಿ 21, 2021
29 °C
ಜಾರಕಿಹೊಳಿ ಮೇಲೆ ಆಕ್ರೋಶ; ಸೋಮಶೇಖರ್‌ ನೇತೃತ್ವದಲ್ಲಿ ಸಭೆ

ಬಿಎಸ್‌ವೈಗೆ ‘ಜೈ’ ಎಂದ ‘ವಲಸಿಗ’ ಸಚಿವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿಗೆ ವಲಸೆ ಬಂದು ಸಚಿವರಾದ ಎಸ್‌.ಟಿ.ಸೋಮಶೇಖರ್‌ ಮತ್ತು ಇತರರು ಶುಕ್ರವಾರ ರಾತ್ರಿ ನಗರದ ಹೊಟೇಲ್‌ವೊಂದರಲ್ಲಿ ಸಭೆ ನಡೆಸಿ ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಚಿವರಾದ ಬೈರತಿ ಬಸವರಾಜು, ಶಿವರಾಮ ಹೆಬ್ಬಾರ, ಬಿ.ಸಿ.ಪಾಟೀಲ, ಗೋಪಾಲಯ್ಯ,  ಆನಂದ್‌ ಸಿಂಗ್, ನಾರಾಯಣಗೌಡ, ಶಾಸಕ ಮುನಿರತ್ನ ಮತ್ತು ಇತರರು ರಾತ್ರಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ಯಡಿಯೂರಪ್ಪ ಅವರ ಮೇಲೆ ವಿಶ್ವಾಸ ವ್ಯಕ್ತಪಡಿಸುವುದರ ಜತೆಗೆ, ರಮೇಶ ಜಾರಕಿಹೊಳಿ ಅವರ ಇತ್ತೀಚಿನ ನಡ ವಳಿಕೆ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

‘ನಮ್ಮ ಜತೆ ಬಂದ ಎಂ.ಟಿ.ಬಿ.ನಾಗರಾಜ್, ಎಚ್‌.ವಿಶ್ವನಾಥ್‌, ಆರ್‌.ಶಂಕರ್‌, ಮುನಿರತ್ನ ಅವರಿಗೆ ಮಂತ್ರಿ ಸ್ಥಾನ ಕೊಡಿಸುವುದಕ್ಕೆ ಓಡಾಡುವುದನ್ನು ಬಿಟ್ಟು, ಸಿ.ಪಿ.ಯೋಗೇಶ್ವರ್ ಅವರನ್ನು ಮಂತ್ರಿ ಮಾಡಲು ರಮೇಶ ಜಾರಕಿಹೊಳಿ ಓಡಾಡುತ್ತಿರುವುದು ಸರಿಯಲ್ಲ. ನಾವು ಯೋಗೇಶ್ವರ್ ಅಥವಾ ಜಾರಕಿಹೊಳಿ ನೋಡಿಕೊಂಡು ಬಿಜೆಪಿಗೆ ಬಂದಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಅನ್ಯಾಯವಾಗಿದ್ದಕ್ಕೆ ಆ ಪಕ್ಷಗಳನ್ನು ಬಿಟ್ಟು ಬಂದಿದ್ದೇವೆ. ನಮ್ಮ ಜತೆ ಬಂದವರಿಗೆ ಮಂತ್ರಿ ಸ್ಥಾನ ಕೊಡಿಸಲು ಅವರು ಪ್ರಯತ್ನಿಸಲಿ’ ಎಂಬ ಚರ್ಚೆ ನಡೆಯಿತು ಎಂದು ಗೊತ್ತಾಗಿದೆ.

‘ಕಳೆದ ಚುನಾವಣೆಯಲ್ಲಿ ಸೋತಿದ್ದ ಯೋಗೇಶ್ವರ್‌ ಅವರಿಗೆ ಮುಖ್ಯಮಂತ್ರಿಯವರು ವಿಧಾನಪರಿಷತ್‌ಗೆ ನೇಮಕ ಮಾಡಿದ್ದಾರೆ. ಇದಕ್ಕಿಂತ ಇನ್ನೇನು ಮಾಡಬೇಕು? ಆದರೆ, ವಿಶ್ವನಾಥ್‌ ಮತ್ತು ನಾಗರಾಜ್‌ ಬೇರೆ ಪಕ್ಷಗಳಿಂದ ಬಂದು ಚುನಾವಣೆಯಲ್ಲಿ ಸೋತಿದ್ದಾರೆ. ಇವರ ತ್ಯಾಗದಿಂದ ಸರ್ಕಾರ ರಚನೆಯಾಗಿದೆ ಎಂಬುದನ್ನು ಮರೆಯಬಾರದು’ ಎಂದು ಸಚಿವರು ಹೇಳಿದರು ಎನ್ನಲಾಗಿದೆ.

‘ಬಿಜೆಪಿ ಸರ್ಕಾರದ ರಚನೆಗೆ ರಾಜೀನಾಮೆ ನೀಡಿ ಬಂದ ಎಲ್ಲರೂ ಕಾರಣರು. ಆದರೆ, ಜಾರಕಿಹೊಳಿ ತಮ್ಮಿಂದಲೇ ಸರ್ಕಾರ ರಚನೆ ಆಯಿತು ಎಂಬ ರೀತಿಯಲ್ಲಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಪದೇಪದೇ ವರಿಷ್ಠ ರನ್ನು ಭೇಟಿ ಮಾಡಲು ದೆಹಲಿಗೆ ಹೋಗು ತ್ತಾರೆ. ನಾವೂ ದೆಹಲಿಗೆ ಹೋಗೋಣ. ನಮ್ಮ ತ್ಯಾಗವನ್ನು ಹೇಳಿಕೊಳ್ಳೋಣ’ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತ ವಾಯಿತು. ಈ ಸಭೆಗೆ ತಿರುಗೇಟು ನೀಡಿರುವ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಈ ರೀತಿ ಪ್ರತ್ಯೇಕ ಸಭೆಗಳನ್ನು ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ವಲಸಿಗರಿಗೂ ವರಿಷ್ಠರಿಂದ ಕಿವಿಮಾತು
‘ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅತಿಯಾಗಿ ಬೆಂಬಲಿಸಿಕೊಂಡು ಓಡಾಡಬೇಡಿ. ನಿಮ್ಮ ಬೇಡಿಕೆಗಳು ಏನಿವೆಯೋ ಅವುಗಳ ಬಗ್ಗೆ ಮಾತ್ರ ಮಾತನಾಡಿ’ ಎಂಬುದಾಗಿ ವಲಸೆ ಬಂದು ಸಚಿವರಾದವರಿಗೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ  ಎಂದು ಮೂಲಗಳು ಹೇಳಿವೆ.

**

ನಾನು ಸಚಿವ ಸ್ಥಾನಕ್ಕಾಗಿ ಯಾರ ಮೇಲೂ ಒತ್ತಡ ಹಾಕಿಲ್ಲ. ಕೊಡುವುದು ಬಿಡುವುದು ವರಿಷ್ಠರಿಗೆ ಬಿಟ್ಟಿದ್ದು. ಅವಕಾಶಕೊಟ್ಟರೆ ಸ್ವೀಕರಿಸುತ್ತೇನೆ.
-ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್‌ ಸದಸ್ಯ

**

ನಾನು 2023 ರವರೆಗೆ ಯಾವುದೇ ಗ್ರೂಪಿಸಂ ಮಾಡುವುದಿಲ್ಲ. ನಾಯಕತ್ವವನ್ನೂ ವಹಿಸುವುದಿಲ್ಲ. ನಮ್ಮದು ಸಾಮೂಹಿಕ ನಾಯಕತ್ವ.
-ರಮೇಶ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು