ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಮೀಸಲಾತಿ ಹೋರಾಟ: ನಿಷೇಧಾಜ್ಞೆಗೂ ಜಗ್ಗದೆ ನುಗ್ಗಿ ಬಂದ ಸಮುದಾಯದ ಜನ

ವಿಧಾನಸೌಧ ಮುತ್ತಿಗೆಗೆ ಯತ್ನ: ಸ್ವಾತಂತ್ರ್ಯ ಉದ್ಯಾನದಲ್ಲಿ ಪಾದಯಾತ್ರೆ ಅಂತ್ಯ
Last Updated 21 ಫೆಬ್ರುವರಿ 2021, 20:47 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಸಮಾವೇಶ ನಡೆಸಿದ ಪಂಚಮಸಾಲಿ ಸಮುದಾಯದ ಜನ, ನಗರದಲ್ಲಿ ನಿಷೇಧಾಜ್ಞೆಗೂ ಜಗ್ಗದೇ ಏಕಾಏಕಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರು. ಅರಮನೆ ಮೈದಾನದಿಂದ ಹೊರಟ ಪಾದಯಾತ್ರೆಯನ್ನು ಕಾವೇರಿ ಜಂಕ್ಷನ್ ವೃತ್ತದಲ್ಲೇ ತಡೆದ ಪೊಲೀಸರು, ಜನರನ್ನು ಸ್ವಾತಂತ್ರ್ಯ ಉದ್ಯಾನದತ್ತ ಕಳುಹಿಸಿ ಮುತ್ತಿಗೆ ಯತ್ನ ವಿಫಲಗೊಳಿಸಿದರು.

‘ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪಾದಯಾತ್ರೆ ಅಂತ್ಯ’ ಎಂಬ ಘೋಷಣೆಯೊಂದಿಗೆ ಆರಂಭವಾಗಿದ್ದ ಪಾದಯಾತ್ರೆಯನ್ನು ಸಮಾವೇಶ ಸ್ಥಳದಲ್ಲೇ ಅಂತ್ಯಗೊಳಿಸಲು, ಪೊಲೀಸರು ನಗರದಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ಜಾರಿಗೊಳಿಸಿದ್ದರು. ಆದರೆ, ಸಮಾವೇಶ ಮುಗಿಯುತ್ತಿದ್ದಂತೆ ಸೇರಿದ್ದ ಜನರೆಲ್ಲ ಸ್ವಾಮೀಜಿಗಳು, ಮುಖಂಡರ ಜೊತೆ ವಿಧಾನಸೌಧದತ್ತ ಹೆಜ್ಜೆ ಹಾಕಿದರು.

ಮುನ್ಸೂಚನೆ ಇಲ್ಲದೇ ಪಾದಯಾತ್ರೆ ಹೊರಟ ಜನರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಯಿತು. ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮುಖಂಡರು, 25 ಸಾವಿರಕ್ಕೂ ಹೆಚ್ಚು ಮಂದಿ ಪಾದಯಾತ್ರೆಯಲ್ಲಿ ಸಾಗಿದರು.

ಸ್ಥಳಕ್ಕೆ ಬಂದ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ‘ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿದೆ. ದಯವಿಟ್ಟು ಪಾದಯಾತ್ರೆ ಇಲ್ಲಿಯೇ ಅಂತ್ಯಗೊಳಿಸಿ’ ಎಂದು ಕೋರಿದರು. ಇದಕ್ಕೆ ಸ್ವಾಮೀಜಿ ಹಾಗೂ ಮುಖಂಡರು ಸ್ಪಂದನೆ ನೀಡಲಿಲ್ಲ.

ವಿಂಡ್ಸರ್ ಮ್ಯಾನರ್ ಸೇತುವೆ ಸಮೀಪದ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿದ್ದ ಪೊಲೀಸರು, ಹೋರಾಟಗಾರರನ್ನು ತಡೆಯಲು ಮುಂದಾದರು. ಅದಕ್ಕೂ ಜಗ್ಗದ ಜನ, ಬ್ಯಾರಿಕೇಡ್‌ಗಳನ್ನು ತಳ್ಳಿ ಮುಂದಕ್ಕೆ ಸಾಗಿದರು. ಇದೇ ವೇಳೆ ಪೊಲೀಸರು ಹಾಗೂ ಹೋರಾಟಗಾರರು ಪರಸ್ಪರ ತಳ್ಳಾಡಿದರು. ನೂಕಾಟವೂ ನಡೆಯಿತು. ಬಸವೇಶ್ವರ ವೃತ್ತದ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಘೋಷಣೆಗಳನ್ನು ಹೋರಾಟಗಾರರು ಕೂಗಿದರು. ಮುಖ್ಯಮಂತ್ರಿಯವರ ವಿರುದ್ಧ ಧಿಕ್ಕಾರದ ಕೂಗು ಮೊಳಗಿಸಿದರು.

ಪರಿಸ್ಥಿತಿ ಕೈ ಮೀರುವ ಸೂಚನೆ ಅರಿತ ಪೊಲೀಸರು, ಗುಟ್ಟಹಳ್ಳಿ ಮುಖ್ಯರಸ್ತೆ ಕೆಳ ಸೇತುವೆಯಲ್ಲೇ ಪಾದಯಾತ್ರೆ ಮಾರ್ಗ ಬದಲಾವಣೆ ಮಾಡಿ ವಿಧಾನಸೌಧ ಮುತ್ತಿಗೆ ಯತ್ನವನ್ನು ವಿಫಲಗೊಳಿಸಿದರು. ರೈಲ್ವೆ ಪರ್ಯಾಯ ರಸ್ತೆ ಮೂಲಕ ಸಾಗಿದ ಪಾದಯಾತ್ರೆ, ಶಿವಾನಂದ ವೃತ್ತ, ಆನಂದರಾವ್ ವೃತ್ತದ ಮೂಲಕ ಸಾಗಿ ಸ್ವಾತಂತ್ರ್ಯ ಉದ್ಯಾನ ತಲುಪಿತು.

ಕೆಲವರು, ರಸ್ತೆಯಲ್ಲೇ ಮಲಗಿ ಹಾಗೂ ಉರುಳು ಸೇವೆ ಮಾಡಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ, ಈ ರಸ್ತೆಯಲ್ಲಿ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು. ಸಾರ್ವಜನಿಕರ ವಾಹನಗಳಿಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಯಿತು.

ಪಾದಯಾತ್ರೆ ಅಂತ್ಯ, ಧರಣಿ ಆರಂಭ: ಉದ್ಯಾನದಲ್ಲಿ ಸೇರಿದ ಜನ, ಮತ್ತೊಂದು ಬಹಿರಂಗ ಸಭೆ ನಡೆಸಿದರು. ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸವನಗೌಡ ಯತ್ನಾಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

‘ಸದ್ಯಕ್ಕೆ ಪಾದಯಾತ್ರೆ ಮುಗಿದಿದೆ. ಹೋರಾಟ ಮುಂದುವರಿಯಲಿದೆ. ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಮಾರ್ಚ್ 4ರವರೆಗೆ ಧರಣಿ ಮಾಡುತ್ತೇವೆ. ಸರ್ಕಾರ ಬಗ್ಗದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು’ ಎಂದು ಸಭೆಯಲ್ಲಿ ಘೋಷಿಸಲಾಯಿತು.

‘ಹೋರಾಟ ಹತ್ತಿಕ್ಕಲು ಸೆಕ್ಷನ್‌ 144’

‘ನಮ್ಮ ಹೋರಾಟ ನೋಡಿ ರಾಜ್ಯ ಸರ್ಕಾರವೇ ನಡುಗಿ ಹೋಗಿದೆ. ಹೋರಾಟ ಹತ್ತಿಕ್ಕುವುದಕ್ಕಾಗಿಯೇ ಈ ರಾಜ್ಯ ಸರ್ಕಾರ, ನಗರದಲ್ಲಿ 144 ಸೆಕ್ಷನ್‌ ಜಾರಿ ಮಾಡಿದೆ. ಇದಕ್ಕೆಲ್ಲ ನಾವು ಬಗ್ಗುವುದಿಲ್ಲ. ಸರ್ಕಾರದ ಈ ಕ್ರಮವನ್ನು ಉಗ್ರವಾಗಿ ಖಂಡಿಸುತ್ತೇನೆ’ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

‘ವಿಧಾನಸೌಧಕ್ಕೆ ಹೊರಟಿದ್ದ ಪಾದಯಾತ್ರೆ ಮಾರ್ಗವನ್ನು ಒತ್ತಾಯದಿಂದಲೇ ಬದಲಿಸಿ, ನಮ್ಮ ದಿಕ್ಕು ತಪ್ಪಿಸಲಾಗಿದೆ. ಇದನ್ನೆಲ್ಲ ಮೆಟ್ಟಿನಿಂತ ಜನ, ಪಾದಯಾತ್ರೆ ಮೂಲಕ ಉದ್ಯಾನಕ್ಕೆ ಬಂದು ಸೇರಿದ್ದರಿಂದ ಸರ್ಕಾರಕ್ಕೆ ಕಠಿಣ ಸಂದೇಶ ರವಾನೆಯಾಗಿದೆ. ಮುಂಬರುವ ಅಧಿವೇಶನದಲ್ಲಿ ನಮ್ಮ ಬೇಡಿಕೆ ಈಡೇರಬೇಕು. ಇಲ್ಲದಿದ್ದರೆ, ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ’ ಎಂದೂ ಎಚ್ಚರಿಸಿದರು.

‘ಜಿಲ್ಲಾವಾರು ಮುಖಂಡರ ನೇತೃತ್ವದಲ್ಲಿ ಧರಣಿ’

ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ನಡೆಯಲಿರುವ ಧರಣಿ ನೇತೃತ್ವವನ್ನು ಜಿಲ್ಲಾವಾರು ಮುಖಂಡರು ವಹಿಸಿಕೊಂಡಿದ್ದಾರೆ. ಪ್ರತಿದಿನ ಒಂದೊಂದು ಜಿಲ್ಲೆಯ ಮುಖಂಡರು ಹಾಗೂ ಸಮಾಜದ ಜನ, ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಧರಣಿಯಲ್ಲಿ ಪಾಲ್ಗೊಂಡವರಿಗೆ ಪ್ರಸಾದ ವ್ಯವಸ್ಥೆಯನ್ನೂ ಮಾಡಲಾಗಿದೆ. ಉಳಿದುಕೊಳ್ಳಲು ಕಲ್ಯಾಣ ಮಂಟಪಗಳ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಅನಿವಾರ್ಯವಿದ್ದವರು ವಾಪಸು ಊರಿಗೆ ಹೋಗಬಹದು. ಉಳಿದುಕೊಳ್ಳಲು ವ್ಯವಸ್ಥೆ ಇದ್ದವರು ಬೆಂಗಳೂರಿನಲ್ಲಿ ಉಳಿದುಕೊಳ್ಳಿ’ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಬಸವನಗೌಡ ಯತ್ನಾಳ, ‘ವಿಧಾನಸೌಧಕ್ಕೆ ಬಂದು ಶಾಸಕರ ಕೊಠಡಿಯಿಂದ ಕೊಠಡಿಯಿಂದ
ಅಲೆಯುವವರು ತಮ್ಮ ಕೆಲಸ ಮುಗಿದ ಮೇಲೆ ಧರಣಿ ಸ್ಥಳಕ್ಕೆ ಬಂದು ಕುಳಿತುಕೊಂಡು ಹೋಗಬೇಕು. ಸಮಾಜದ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT