ಎಫ್‌ಡಿಎ: ವಾಣಿಜ್ಯ ತೆರಿಗೆ ಇನ್‌ಸ್ಪೆಕ್ಟರ್ ಮನೆಯಲ್ಲಿ ಪ್ರಶ್ನೆಪತ್ರಿಕೆ !

ಬೆಂಗಳೂರು: ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ವಾಣಿಜ್ಯ ತೆರಿಗೆ ಇಲಾಖೆ ಇನ್‌ಸ್ಪೆಕ್ಟರ್ ಜಿ.ಎಸ್.ಚಂದ್ರು ಹಾಗೂ ಸಹಚರರು, ಹಲವು ತಿಂಗಳಿನಿಂದ ತಯಾರಿ ಮಾಡಿಕೊಂಡಿದ್ದ ಸಂಗತಿ ಸಿಸಿಬಿ ತನಿಖೆಯಿಂದ ಬಯಲಾಗಿದೆ.
ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಉಲ್ಲಾಳ ಬಳಿಯ ಉಪಕಾರ್ ಲೇಔಟ್‌ನಲ್ಲಿರುವ ಚಂದ್ರಪ್ಪ ಮನೆ ಮೇಲೆ ಶನಿವಾರ ದಾಳಿ ಮಾಡಿರುವ ಸಿಸಿಬಿ ಪೊಲೀಸರು, ಅದೇ ಮನೆಯಲ್ಲೇ ಪ್ರಶ್ನೆಪತ್ರಿಕೆಗಳನ್ನು ಜಪ್ತಿ ಮಾಡಿದ್ದಾರೆ. ಚಂದ್ರು ಅಲಿಯಾಸ್ ಚಂದ್ರಪ್ಪ, ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ರಾಚಪ್ಪ, ಮಹೇಶ್ ಹಾಗೂ ಮೂವರು ಅಭ್ಯರ್ಥಿಗಳನ್ನು ಬಂಧಿಸಿದ್ದಾರೆ.
‘ಕೋರಮಂಗಲದಲ್ಲಿರುವ ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಇನ್‌ಸ್ಪೆಕ್ಟರ್ ಚಂದ್ರಪ್ಪ, ತನ್ನ ಸಹಚರರ ಜೊತೆ ಸೇರಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಸಂಚು ರೂಪಿಸಿದ್ದ. ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳನ್ನು ಸಂಪರ್ಕಿಸಿ, ಪ್ರಶ್ನೆಪತ್ರಿಕೆ ನೀಡುವ ಒಪ್ಪಂದ ಮಾಡಿಕೊಂಡು ಹಣ ಪಡೆದಿದ್ದ’ ಎಂದು ಸಿಸಿಬಿ ಮೂಲಗಳು ಹೇಳಿವೆ.
ಒಬ್ಬ ಅಭ್ಯರ್ಥಿಗೆ ₹ 10 ಲಕ್ಷ ನಿಗದಿ: ‘ಪ್ರಶ್ನೆ ಪತ್ರಿಕೆ ನೀಡುವುದಾಗಿ ಹೇಳಿದ್ದ ಆರೋಪಿಗಳು, ಒಬ್ಬ ಅಭ್ಯರ್ಥಿ ಕಡೆಯಿಂದ ₹ 10 ಲಕ್ಷ ಪಡೆದಿದ್ದರು. ಅಭ್ಯರ್ಥಿಗಳನ್ನು ತನ್ನ ಮನೆಗೆ ಕರೆಸಿಕೊಂಡಿದ್ದ ಚಂದ್ರು, ಅಲ್ಲಿಯೇ ಪರೀಕ್ಷೆಗೆ ಸಿದ್ಧತೆ ಮಾಡಿಸುತ್ತಿದ್ದ. ಪರೀಕ್ಷೆಗೂ ಮುನ್ನಾದಿನ ಪ್ರಶ್ನೆಪತ್ರಿಕೆ ನೀಡುವುದಾಗಿಯೂ ಭರವಸೆ ನೀಡಿದ್ದ’ ಎಂದು ಮೂಲಗಳು ತಿಳಿಸಿವೆ.
‘ಶನಿವಾರವೇ ಆರೋಪಿ ಕೈಗೆ ಪ್ರಶ್ನೆಪತ್ರಿಕೆ ಸಿಕ್ಕಿತ್ತು. ಅದನ್ನೇ ಮನೆಗೆ ತಂದಿದ್ದ ಚಂದ್ರು, ಅಭ್ಯರ್ಥಿಗಳಿಗೆ ಕೊಟ್ಟಿದ್ದ. ಅದನ್ನು ಮುಂದಿಟ್ಟುಕೊಂಡು ಸರಿ ಉತ್ತರಗಳನ್ನು ಸಿದ್ಧಪಡಿಸಿದ್ದ ಅಭ್ಯರ್ಥಿಗಳು, ಭಾನುವಾರದ ಪರೀಕ್ಷೆಗೆ ಸಿದ್ಧರಾಗಿದ್ದರು. ಪ್ರಶ್ನೆಪತ್ರಿಕೆ ಸೋರಿಕೆ ಮಾಹಿತಿ ಬರುತ್ತಿದ್ದಂತೆ ಮನೆ ಮೇಲೆ ದಾಳಿ ಮಾಡಿ ಶೋಧ ನಡೆಸಲಾಯಿತು. ಪ್ರಶ್ನೆಪತ್ರಿಕೆ ಹಾಗೂ ಅಭ್ಯರ್ಥಿಗಳ ಜೊತೆ ಆರೋಪಿಗಳೂ ಸಿಕ್ಕಿಬಿದ್ದರು’ ಎಂದೂ ಸಿಸಿಬಿ ಮೂಲಗಳು ಹೇಳಿವೆ.
‘ಆರೋಪಿ ಚಂದ್ರಪ್ಪ, ಕೆಲ ಅಧಿಕಾರಿಗಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ. ಆತನೇ ಪ್ರಶ್ನೆಪತ್ರಿಕೆ ಸೋರಿಕೆ ರೂವಾರಿ ಎಂಬುದು ಸದ್ಯಕ್ಕೆ ಗೊತ್ತಾಗಿದೆ. ಆತನ ಹಿಂದೆ ಹಲವರು ಇರುವ ಮಾಹಿತಿಯೂ ಇದ್ದು, ಅದೇ ಆಯಾಮದಲ್ಲಿ ತನಿಖೆಯೂ ಮುಂದುವರಿದಿದೆ’ ಎಂದು ಮೂಲಗಳು ಹೇಳಿವೆ.
ಎಫ್‌ಡಿಎ ಪರೀಕ್ಷೆ ಬರೆಯಬೇಕಿದ್ದ ಎಸ್‌ಡಿಎ: ‘ಬಂಧಿತ ರಾಚಪ್ಪ, ಸರ್ಕಾರದ ಇಲಾಖೆಯೊಂದರಲ್ಲಿ ಈಗಾಗಲೇ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಆಗಿ ಕೆಲಸ ಮಾಡುತ್ತಿದ್ದಾನೆ. ಆತನೂ ಎಫ್‌ಡಿಎ ಪರೀಕ್ಷೆ ಕಟ್ಟಿದ್ದ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದಕ್ಕಾಗಿ ಚಂದ್ರು ಜೊತೆ ಕೈ ಜೋಡಿಸಿದ್ದ’ ಎಂದೂ ಸಿಸಿಬಿ ಮೂಲಗಳು ತಿಳಿಸಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.