ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕರ್ಮ ಸಮುದಾಯದ ಕುಲಶಾಸ್ತ್ರ ಅಧ್ಯಯನ: ಪೂಜಾರಿ ಭರವಸೆ

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ
Last Updated 24 ಜೂನ್ 2022, 18:42 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ವಿಶ್ವಕರ್ಮ ಸಮುದಾಯದ ಕುಲಶಾಸ್ತ್ರದ ಬಗ್ಗೆ ಅಧ್ಯಯನ ನಡೆಸಲು ಆದೇಶ ಹೊರಡಿಸಲಾಗುವುದು’ ಎಂದುಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.

ವಿಶ್ವಕರ್ಮ ಸಮಾಜದ ಸ್ವಾಮೀಜಿಗಳು ಹಾಗೂ ಮುಖಂಡರ ಸಮ್ಮುಖದಲ್ಲಿಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. ‘ಸಮುದಾಯದ ಆರ್ಥಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಲಾಗುವುದು. ಈ ಸಮಾಜ ನಡೆದು ಬಂದ ಬಗೆ, ಸಮಾಜ ಮುನ್ನಡೆಸಿದವರ ಮಾಹಿತಿ ಒಳಗೊಂಡಂತೆ ಸಮಗ್ರ ಅಧ್ಯಯನಕ್ಕೆ ಆದೇಶ ನೀಡಲಾಗುವುದು. ತಾಲ್ಲೂಕು ಕೇಂದ್ರಗಳಲ್ಲಿ ಸಮುದಾಯ ಭವನ ನಿರ್ಮಿಸಲು ನಿವೇಶನದ ಸಮಸ್ಯೆಯಿದೆ. ಸರ್ಕಾರಿ ನಿವೇಶನಗಳು ಲಭ್ಯವಿದ್ದರೆ ಭವನ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಜಿಲ್ಲಾ ಕೇಂದ್ರಗಳಲ್ಲಿ ಭವನ ನಿರ್ಮಿಸುವ ಪ್ರಸ್ತಾವ ಸರ್ಕಾರದ ಮುಂದಿದೆ’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ ಬೃಹತ್ ವಿಶ್ವಕರ್ಮ ಭವನ ನಿರ್ಮಾಣಕ್ಕೆ ಎರಡು ಎಕರೆ ಜಾಗ ಬೇಕಾಗುತ್ತದೆ. ನಿವೇಶನ ಗುರುತಿಸಿದಲ್ಲಿ ನನ್ನ ಅಧಿಕಾರಾವಧಿಯಲ್ಲಿಯೇ ಭವನದ ಶಂಕುಸ್ಥಾಪನೆಗೆ ಕ್ರಮವಹಿಸುತ್ತೇನೆ. ಕಲಬುರ್ಗಿಯಲ್ಲಿ ಎಂ.ಎಸ್. ಪಂಡಿತ್‌ ಅವರ ಹೆಸರಿನಲ್ಲಿ ಶಿಲ್ಪಕಲಾ ಕೇಂದ್ರ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮಠಗಳ ಅಭಿವೃದ್ಧಿಗೆ ಅನುದಾನ ನೀಡುವ ಬಗ್ಗೆಯೂ ಕ್ರಮವಹಿಸಲಾಗುವುದು’ ಎಂದು ಹೇಳಿದರು.

ಸಮುದಾಯದ ವಿವಿಧ ಬೇಡಿಕೆಗಳ ಪತ್ರವನ್ನು ಸಚಿವಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಸ್ತಾಂತರಿಸಿದನಿಗಮದ ಅಧ್ಯಕ್ಷ ಬಾಬು ಪತ್ತಾರ್, ‘ನಮ್ಮದು ಚಿಕ್ಕ ಸಮಾಜವಾದರೂ ದೇಶದ ವಾಸ್ತುಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅನನ್ಯ. ರಾಮ ಮಂದಿರ ನಿರ್ಮಾಣಕ್ಕೂ ಸಮುದಾಯದವರು ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಸಮುದಾಯದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು.ಜ್ಯುವೆಲ್ಲರಿ ಪಾರ್ಕ್ ನಿರ್ಮಾಣಕ್ಕೆಸಚಿವಸಂಪುಟದ ಅನುಮೋದನೆ ದೊರೆತಿದೆ. ಅದರ ನಿರ್ವಹಣೆಯನ್ನು ನಿಗಮಕ್ಕೆ ನೀಡಬೇಕು.ಉತ್ತರ ಕರ್ನಾಟಕ ಭಾಗದಲ್ಲಿ ಕಲಾ ಪ್ರದರ್ಶನ ಆಯೋಜನೆ,ರೈಲ್ವೆ ನಿಲ್ದಾಣ ಹಾಗೂ ವಿವಿಧೆಡೆ ವಸ್ತು ಪ್ರದರ್ಶನಕ್ಕೆ ಅವಕಾಶ ಸೇರಿದಂತೆ ವಿವಿಧ ಕಾರ್ಯಯೋಜನೆಗಳನ್ನು ಸರ್ಕಾರ ಹಮ್ಮಿಕೊಳ್ಳಬೇಕು’ ಎಂದರು.

‘ಮಠಗಳಿಗೆ ಆರ್ಥಿಕ ನೆರವು ನೀಡಿ’

‘ವಿಶ್ವಕರ್ಮ ಸಮುದಾಯ ಭಾರತೀಯ ಸಂಸ್ಕೃತಿಗೆ ದೊಡ್ಡ ಕೊಡುಗೆ ನೀಡಿದೆ. ವಿದೇಶಿಗರು ಇಲ್ಲಿನ ಶಿಲ್ಪ ಕಲಾ ಕೇಂದ್ರ ನೋಡಲು ಬರುತ್ತಾರೆ. ಈ ಸಮುದಾಯದವರಿಗೆಶೈಕ್ಷಣಿಕ ತರಬೇತಿ, ಮಾರುಕಟ್ಟೆ ನಿರ್ಮಾಣ ಸೇರಿದಂತೆ ವಿವಿಧ ಕಾರ್ಯಯೋಜನೆಯನ್ನು ಸರ್ಕಾರ ಹಮ್ಮಿಕೊಳ್ಳಬೇಕು. ಆಗ ಭಾರತೀಯ ಸಂಸ್ಕೃತಿಗೆ ಇನಷ್ಟು ಕೊಡುಗೆ ಸಿಗಲಿದೆ’ ಎಂದುಅರೇಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದರು.

‘ಸಮುದಾಯದ ಬಹುತೇಕ ಮಠಗಳು ಆರ್ಥಿಕವಾಗಿ ಸಬಲವಾಗಿಲ್ಲ. ಅಂತಹ ಮಠಗಳಿಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು. ಮಠಗಳ ಮೂಲಕ ಸಮುದಾಯದ ಅಭಿವೃದ್ಧಿ ಸಾಧ್ಯ. ಸಮುದಾಯದ ಮಠ ಇರುವ ಕಡೆ ಜಿಲ್ಲಾ ಕೇಂದ್ರದಲ್ಲಿ ಮಠಾಧಿಪತಿಗಳಿಗೆ ಕನಿಷ್ಠ ಒಂದು ಎಕರೆ ನಿವೇಶನ ನೀಡಬೇಕು. ಅಲ್ಲಿ ಶಿಕ್ಷಣ, ತರಬೇತಿ ಕೇಂದ್ರ ನಿರ್ಮಾಣಕ್ಕೆ ಸರ್ಕಾರ ಅನುವು ಮಾಡಿಕೊಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT