ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸು ಕಾಣುವ ಕಾಲ ಕಾಂಗ್ರೆಸ್‌ಗೆ ಮುಗಿದಿದೆ: ಬಿ.ಎಸ್‌. ಯಡಿಯೂರಪ್ಪ

ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಹೇಳಿಕೆ
Last Updated 4 ಫೆಬ್ರುವರಿ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಂಗ್ರೆಸ್‌ ಕನಸು ಕಾಣುವ ಕಾಲ ಮುಗಿದಿದೆ. ಅವರು ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಅರಮನೆ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಕಾಂಗ್ರೆಸ್‌ನಲ್ಲಿ ಅತೃಪ್ತಿ, ಅಸಮಾಧಾನ ತುಂಬಿ ತುಳುಕುತ್ತಿದೆ. ಪರಮೇಶ್ವರ, ಮುನಿಯಪ್ಪ ಅಸಮಾಧಾನಗೊಂಡಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಒಗ್ಗಟ್ಟಿನಿಂದ ಇದ್ದೇವೆ. ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿ, ನಾನು ಮತ್ತು ಅರುಣ್‌ಸಿಂಗ್‌ ಮೂರು ತಂಡಗಳಲ್ಲಿ ಯಾತ್ರೆ ಮಾಡುತ್ತೇವೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಪಕ್ಷದಲ್ಲಿ ನಾಯಕರು ಯಾರು? ರಾಹುಲ್‌ ಗಾಂಧಿ ನಾಯಕರೇ’ ಎಂದು ಪ್ರಶ್ನಿಸಿದ ಯಡಿಯೂರಪ್ಪ, ‘ವಿಶ್ವ ಮೆಚ್ಚಿದ ಮಹಾನ್‌ ನಾಯಕ ನರೇಂದ್ರ ಮೋದಿ, ಅಮಿತ್‌ ಶಾ ಅವರು ನಮ್ಮ ಜತೆ ಇರುವಾಗ ಕರ್ನಾಟಕ ಸೇರಿ ಮುಂಬರುವ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಜಯಭೇರಿ ಬಾರಿಸುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮಸ್ಯೆಗಳನ್ನು ಅರಿತು ಬಗೆಹರಿಸುವುದರ ಜತೆಗೆ ಚುನಾವಣೆಯಲ್ಲಿ ಎಲ್ಲ ಸಮುದಾಯಗಳನ್ನು ಒಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಸಬೇಕು ಎಂದರು.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್ ಮಾತನಾಡಿ, ಸಿದ್ದರಾಮಯ್ಯ ಆಡಳಿತದಲ್ಲಿ ಪಾಪ್ಯುಲರ್‌ ಫ್ರಂಟ್ ಆಫ್‌ ಇಂಡಿಯಾಗೆ ಇನ್ನಿಲ್ಲದಂತೆ ಪ್ರೋತ್ಸಾಹ ನೀಡಿ, ಹಿಂದೂಗಳನ್ನು ಕಡೆಗಣಿಸಿದ್ದರು. ಇದರ ಪರಿಣಾಮ ಹಿಂದೂ ಕಾರ್ಯಕರ್ತರ ಹತ್ಯೆ ನಿರಂತರವಾಗಿ ನಡೆದಿತ್ತು. ಅಲ್ಲದೇ, ಹಿಂದೂಗಳ ಅವಹೇಳನ ಮಾಡುತ್ತಾ ಬಂದಿದ್ದಾರೆ. ಇದರ ಪರಿಣಾಮ ಕಾಂಗ್ರೆಸ್‌ ಪಕ್ಷ ನೆಲಕಚ್ಚುವ ಸ್ಥಿತಿ ಬಂದಿದೆ
ಎಂದರು.

ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರ್ಕಾರವು ರೈತರು, ಮಹಿಳೆಯರು, ಜನಸಾಮಾನ್ಯರು ಸೇರಿ ಸರ್ವರ ಅಭ್ಯುದಯಕ್ಕಾಗಿ ಕೆಲಸ ಮಾಡಿದೆ. ಇದನ್ನು ಜನರಿಗೆ ತಲುಪಿಸಿದರೆ 150 ಸ್ಥಾನಗಳನ್ನು ಗೆಲ್ಲುವುದು ಖಚಿತ ಎಂದು ಅವರು ಹೇಳಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕರ್ನಾಟಕದ ಸಹ ಉಸ್ತುವಾರಿ ಡಿ.ಕೆ. ಅರುಣಾ, ಶಾಸಕ ಜಗದೀಶ ಶೆಟ್ಟರ್, ಸಂಸದ ಡಿ.ವಿ.ಸದಾನಂದ ಗೌಡ, ರಾಜ್ಯ ಪದಾಧಿಕಾರಿಗಳು, ಎಲ್ಲ ಜಿಲ್ಲೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಿದ್ದರು.

‘ಕಾಂಗ್ರೆಸ್‌ ಬೀದಿ ಕಾಳಗ ಆರಂಭ’

ಕಾಂಗ್ರೆಸ್‌ ಪಕ್ಷದ ಬಸ್‌ ಯಾತ್ರೆ ಜೊತೆಗೇ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹೋರಾಟ ತಾರಕಕ್ಕೇರಿದೆ. ಜಿ.ಪರಮೇಶ್ವರ ಮತ್ತು ಮುನಿಯಪ್ಪ ಅವರ ಅಸಮಾಧಾನದಿಂದ ಕಾಂಗ್ರೆಸ್ ಬಸ್‌ ಪಂಕ್ಚರ್‌ ಆಗುತ್ತಿದೆ. ಕಾಂಗ್ರೆಸ್‌ ಕಾಳಗ ಬೀದಿ ಕಾಳಗವಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಕಾಂಗ್ರೆಸ್‌ನ ಮುಖ್ಯಮಂತ್ರಿ ಆಕಾಂಕ್ಷಿ ಅಭ್ಯರ್ಥಿಯೊಬ್ಬರಿಗೆ ಕ್ಷೇತ್ರದ ಹುಡುಕಾಟ ಇನ್ನೂ ಮುಗಿದಿಲ್ಲ. ಮತ್ತೊಂದೆಡೆ ಜೆಡಿಎಸ್‌ನ ಪಂಚರತ್ನ ಯಾತ್ರೆ ವಿಜಯಪುರ ತಲುಪುವಾಗ ಹಾಸನದಲ್ಲಿ ಮನೆಯೊಳಗೆ ಜಗಳ ಆರಂಭವಾಗಿದೆ. ಹೀಗಾಗಿ ಜನರಿಗೆ ಬಿಜೆಪಿಯ ಮೇಲೆ ವಿಶ್ವಾಸ ಹೆಚ್ಚಾಗಿದೆ ಎಂದು ಅವರು ಹೇಳಿದರು.

21.01 ಲಕ್ಷ ಮನೆಗಳ ಸಂಪರ್ಕ

ಬೂತ್‌ ಮಟ್ಟದ ವಿಜಯ ಸಂಕಲ್ಪ ಅಭಿಯಾನದಲ್ಲಿ 38,272 ಬೂತ್‌ಗಳ ವ್ಯಾಪ್ತಿಯಲ್ಲಿ 21.01 ಲಕ್ಷಗಳ ಮನೆಗಳನ್ನು ಸಂಪರ್ಕಿಸಲಾಗಿದೆ ಎಂದು ಅಭಿಯಾನದ ಸಂಚಾಲಕರೂ ಆಗಿದ್ದ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು. ವಿಜಯ ಸಂಕಲ್ಪ ಅಭಿಯಾನದ ಭಾಗವಾಗಿ 12.37 ಲಕ್ಷ ಮನೆಗಳ ಮೇಲೆ,4.55 ಲಕ್ಷ ವಾಹನಗಳ ಮೇಲೆ ಬಿಜೆಪಿ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ. 1.88 ಲಕ್ಷಕ್ಕೂ ಹೆಚ್ಚು ಗೋಡೆ ಬರಹಗಳನ್ನು ಮತ್ತು 14,500 ಡಿಜಿಟಲ್‌ ಫೋಸ್ಟರ್‌ಗಳನ್ನು ಅಂಟಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT