ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಂತ್ರರಾಗಿರುವ ಅಲೆಮಾರಿ ಗೊಲ್ಲ ಸಮುದಾಯ

ಗೋಹತ್ಯೆ ನಿಷೇಧ ಕಾಯ್ದೆಯಿಂದ ತೊಂದರೆ
Last Updated 19 ಜನವರಿ 2021, 19:23 IST
ಅಕ್ಷರ ಗಾತ್ರ

ಬಳ್ಳಾರಿ: ‘ದನ ಮೇಯಿಸುವುದನ್ನು ಬಿಟ್ಟರೆ ನಮಗೆ ಬೇರೆ ಕೆಲಸವಿಲ್ಲ. ನಮ್ಮೂರಲ್ಲಿ ನೀರಿಲ್ಲ, ಮೇವಿಲ್ಲ.ಹೀಗಾಗಿ ಅಲೆಮಾರಿ ಜೀವನವನ್ನೇ ನೆಚ್ಚಿಕೊಂಡು ಊರೂರು ತಿರುಗುತ್ತಿದ್ದೇವೆ. ನಮ್ಮನ್ನೂ ಎಸ್‌ಟಿ ಮೀಸಲಾತಿಗೆ ಸೇರಿಸಬೇಕು. ಗೋಹತ್ಯೆ ನಿಷೇಧ ಕಾಯ್ದೆಯಿಂದ ನಮ್ಮಂಥವರಿಗೆ ತೊಂದರೆಯಾಗಬಾರದು..’

ತಾಲ್ಲೂಕಿನ ಕೊಳಗಲ್ಲು ಗ್ರಾಮದ ಆಚೆಗೆ ಭತ್ತ ಕಟಾವು ಮಾಡಿದ್ದ ಖಾಲಿ ಜಮೀನಿನಲ್ಲಿ ನೂರಾರು ದನಗಳನ್ನು ಮೇಯಿಸಲು ಬಿಟ್ಟಿದ್ದ ಗಂಗಾವತಿ ತಾಲ್ಲೂಕಿನ ಕೃಷ್ಣಗೊಲ್ಲ ಸಮುದಾಯದ ಯಡ್ಡಳ್ಳಿಯ ಬಂಡೆ ವೆಂಕಪ್ಪ, ಮುತ್ಯಣ್ಣ, ನಾಗಪ್ಪ, ದುರ್ಗಪ್ಪ ಹೀಗೆ ಹೇಳಿ ನಿಟ್ಟು
ಸಿರು ಬಿಟ್ಟರು.ಅವರಂತೆಯೇ ಹತ್ತಾರು ಕುಟುಂಬಗಳ ಮಂದಿ ಸಾವಿರಾರು ದನಗಳನ್ನು ಮೇಯಿಸುತ್ತಿದ್ದಾರೆ.

ಸುಮಾರು ಹದಿನೈದು ದಿನದಿಂದ ಅವರು ಅಲ್ಲಿಯೇ ಕುಟುಂಬದ ಸದಸ್ಯರೊಂದಿಗೆ ಬೀಡು ಬಿಟ್ಟಿದ್ದಾರೆ. ಜಮೀನುಗಳ ಮಾಲೀಕರು ನೀಡುವ ಕಾಸು, ಧಾನ್ಯ ಬಿಟ್ಟರೆ ಹೆಚ್ಚಿಗೇನೂ ಗಳಿಸಲಾಗದು.

ಸ್ಥಳಕ್ಕೆ ಭೇಟಿ ನೀಡಿದ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ನಮ್ಮ ತಾತನ ಕಾಲದಿಂದ ಇದೇ ಕೆಲಸ ಮಾಡುತ್ತಿದ್ದೇವೆ. ಮಳೆಗಾಲ ಬಿಟ್ಟರೆ ಉಳಿದೆಲ್ಲ ಕಾಲವೂ ನಮ್ಮದು ಅಲೆಮಾರಿ ಜೀವನವೇ’ ಎಂದು ವಿವರಿಸಿದರು.

‘ಒಮ್ಮೆ ದನವೊಂದು ಕಾಯಿಲೆ ಬಂದು ಸತ್ತಿತ್ತು. ಬಳಿಕ ಬೇರೆಲ್ಲೂ ಜಾಗವಿಲ್ಲದೆ ಅದನ್ನು ಅರಣ್ಯ ಇಲಾಖೆಯ ಜಮೀನಿನಲ್ಲಿ ಹೂಳಿದ್ದೆವು. ಅದಕ್ಕೆ ಅನುಮತಿಯನ್ನು ಏಕೆ ಪಡೆದಿಲ್ಲ ಎಂದು ಅಧಿಕಾರಿಗಳು ನಮಗೆ ತೊಂದರೆ ಕೊಟ್ಟರು. ದನಗಳು ಸತ್ತರೆ ನಾವು ಎಲ್ಲಿ ಹೂಳಬೇಕು? ಕಾಡಲ್ಲದೆ ಬೇರೆ ಯಾವ ಜಾಗವಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಕಾಡುಗೊಲ್ಲರಿಗೆ ಎಸ್‌ಟಿ ಮೀಸಲಾತಿ ದೊರಕುತ್ತದೆ. ನಮಗೂ ಮೀಸಲಾತಿ ಏಕೆ ನೀಡಿಲ್ಲ’ ಎಂಬುದು ಅವರ ಪ್ರಶ್ನೆ. ‘ಗೋಹತ್ಯೆ ನಿಷೇಧಿಸಿದರೆ ನಮ್ಮಂಥವರಿಗೆ ತೊಂದರೆ. ಮುದಿ ಹಸುಗಳನ್ನು ಇಟ್ಟುಕೊಂಡು ನಾವೇನು ಮಾಡಲು ಸಾಧ್ಯ? ಹಾಗೆಂದು ಉಚಿತವಾಗಿ ಕೊಡಲೂ ಆಗುವುದಿಲ್ಲ. ಕಾಯ್ದೆಗಳು ಎಲ್ಲರಿಗೂ ಒಳ್ಳೆಯದು ಮಾಡುವಂತಿರಬೇಕು.ಗೋಹತ್ಯೆ ನಿಷೇಧ ಕಾಯ್ದೆ ನೆಪದಲ್ಲಿ, ಗೋವುಗಳನ್ನೇ ನೆಚ್ಚಿಕೊಂಡ ನಮ್ಮಂಥವರ ಬದುಕು ಅತಂತ್ರ ಆಗಬಾರದು’ ಎಂದು ಪ್ರತಿಪಾದಿಸಿದರು.

‘ಗೋವುಗಳೇ ನಮ್ಮ ಜೀವನ. ನಮಗೆ ಕಷ್ಟ ಬಂದರೂ ಒಂದೆರಡನ್ನು ಮಾರಿಯೇಮುಂದಿನ ದಾರಿ ನೋಡುತ್ತೇವೆ.ಅವು ಬದುಕಿದ್ದರೆ ನಮಗೆ ಬದುಕು. ಸತ್ತ ಮೇಲೆ ಅವುಗಳನ್ನು ಬೀದಿಪಾಲು ಮಾಡಲು ಆಗುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT