ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಮಾಹಿತಿ ಕಳವು: ಗುರುತಿನ ಚೀಟಿ ಕೊಟ್ಟಿದ್ದೇ ಅಧಿಕಾರಿಗಳು

‘ಚಿಲುಮೆ’ ಬಳಿ ಇದ್ದ 50 ‘ಬಿಎಲ್‌ಒ’ ಗುರುತಿನ ಚೀಟಿ ಜಪ್ತಿ
Last Updated 24 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಮನೆ ಮನೆಗೆ ಹೋಗಿ ಮತದಾರರ ಮಾಹಿತಿ ಸಂಗ್ರಹಿಸುತ್ತಿದ್ದ ‘ಚಿಲುಮೆ’ ಸಂಸ್ಥೆಯ ಪ್ರತಿನಿಧಿಗಳಿಗೆ ಬಿಬಿಎಂಪಿಯ ಕೆಲ ಅಧಿಕಾರಿಗಳೇ ‘ಮತಗಟ್ಟೆ ಹಂತದ ಅಧಿಕಾರಿ (ಬಿಎಲ್‌ಒ)’ ಗುರುತಿನ ಚೀಟಿ ಮಾಡಿಕೊಟ್ಟಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ. ಇದಕ್ಕೆ ಸಂಬಂಧಪಟ್ಟ ಪುರಾವೆಗಳಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

‘ಚಿಲುಮೆ’ ಸಂಸ್ಥೆ ವಿರುದ್ಧ ಹಲಸೂರು ಗೇಟ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಮುಖ ಆರೋಪಿ ರವಿಕುಮಾರ್ ಅವರನ್ನು ಬಂಧಿಸಿರುವ ಪೊಲೀಸರು, ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ದಾಬಸ್‌ಪೇಟೆಯ ರವಿಕುಮಾರ್, 2013ರಲ್ಲಿ ಚಿಲುಮೆ ಸಂಸ್ಥೆ ಸ್ಥಾಪಿಸಿದ್ದ. ಸಹೋದರ ಕೆಂಪೇಗೌಡ, ಪತ್ನಿ ಐಶ್ವರ್ಯ, ಸಂಬಂಧಿಕರೇ ಆದ ಪ್ರಜ್ವಲ್ ಹಾಗೂ ಇತರರ ಜೊತೆ
ಸೇರಿ ಸಂಸ್ಥೆಯಡಿ ನಾನಾ ಕೆಲಸ ಮಾಡುತ್ತಿದ್ದ. ಸಂಸ್ಥೆಯಿಂದಲೇ ನೂರಾರು ಕೋಟಿ ರೂಪಾಯಿ ಆಸ್ತಿ ಸಂಪಾದಿಸಿರುವ ಮಾಹಿತಿ ಇದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

50 ಗುರುತಿನ ಚೀಟಿ ಜಪ್ತಿ: ‘ಚಿಲುಮೆ ಸಂಸ್ಥೆಯ ಕಚೇರಿಗಳು ಹಾಗೂ ಆರೋಪಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ. 50ಕ್ಕೂ ಹೆಚ್ಚು ‘ಬಿಎಲ್‌ಒ’ ಗುರುತಿನ ಚೀಟಿಗಳು, ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್, ಹಾರ್ಡ್‌ಡಿಸ್ಕ್‌ ಹಾಗೂ ಇತರೆ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಆಧಾರ್ ಸಂಖ್ಯೆ ಜೋಡಣೆ ಕೆಲಸ ಕೈಗೊಳ್ಳಲು ಚಿಲುಮೆ ಸಂಸ್ಥೆಗೆ ಅನುಮತಿ ನೀಡಲಾಗಿತ್ತು. ಅನುಮತಿ ಪತ್ರ ಆಧರಿಸಿ
ಬಿಬಿಎಂಪಿಯ ಕೆಲ ಅಧಿಕಾರಿಗಳು, ಆರೋಪಿಗಳಿಗೆ ಬಿಎಲ್‌ಒ
ಗುರುತಿನ ಚೀಟಿಗಳನ್ನು ಮಾಡಿಕೊಟ್ಟಿದ್ದರು. ಈ ಸಂಬಂಧ ಆರೋಪಿಗಳು ಹೇಳಿಕೆ ನೀಡಿದ್ದಾರೆ’ ಎಂದು
ಹೇಳಿದರು.

‘ಅಧಿಕಾರಿಗಳು ಮಾಡಿಕೊಟ್ಟಿದ್ದ ಗುರುತಿನ ಚೀಟಿಗಳನ್ನೂ ಜಪ್ತಿ ಮಾಡಲಾಗಿದೆ. ಅದರಲ್ಲಿರುವ ಸಹಿ ಹಾಗೂ ಮೊಹರು ಅಸಲಿ ಎಂಬುದು ಪರಿಶೀಲನೆಯಿಂದ ಗೊತ್ತಾಗಿದೆ. ಉಳಿದಂತೆ ಕೆಲ ಗುರುತಿನ ಚೀಟಿಗಳನ್ನು ಆರೋಪಿಗಳೇ ಸೃಷ್ಟಿಸಿಕೊಂಡಿದ್ದರು. ಅದೇ ಚೀಟಿಗಳನ್ನು ಬಳಸಿ, ಮನೆ ಮನೆಗೆ ಹೋಗಿ ಮತದಾರರ ಎಲ್ಲ ಮಾಹಿತಿ ಕಲೆಹಾಕಿದ್ದರು’ ಎಂದು ಹೇಳಿದರು.

‘ಗುರುತಿನ ಚೀಟಿ ನೀಡಿದ್ದರು ಎನ್ನಲಾದ ಬಿಬಿಎಂಪಿ ಅಧಿಕಾರಿಗಳ ವಿಚಾರಣೆ ನಡೆಸಲಾಗುತ್ತಿದೆ. ಹಿರಿಯ ಅಧಿಕಾರಿಗಳ ಆದೇಶಗಳಿಗೆ ಅನುಗುಣವಾಗಿ ಕೆಲಸ ಮಾಡಿರುವುದಾಗಿ ಕೆಲವರು ಹೇಳುತ್ತಿದ್ದಾರೆ. ಅವರ ಮೇಲಿನ ಆರೋಪಕ್ಕೆ ಸಂಬಂಧಪಟ್ಟಂತೆ ಸದ್ಯಕ್ಕೆ ನಿಖರ ಪುರಾವೆಗಳು ಸಿಗುತ್ತಿಲ್ಲ.ಹೀಗಾಗಿ, ಕೃತ್ಯದಲ್ಲಿ ಅಧಿಕಾರಿಗಳ ಪಾತ್ರವೇನು ಎಂಬುದು ಸದ್ಯಕ್ಕೆ ಹೇಳಲಾಗದು’ ಎಂದು ಅವರು ತಿಳಿಸಿದರು.

‘ಚಿಲುಮೆ’ ಸಿಬ್ಬಂದಿ ಮನೆ ಮೇಲೆ ದಾಳಿ

ಬಂಧಿತ ರವಿಕುಮಾರ್ ನೀಡಿರುವ ಮಾಹಿತಿ ಆಧರಿಸಿ ಚಿಲುಮೆ ಸಂಸ್ಥೆಯ ಸಿಬ್ಬಂದಿಯಾದ ಮಾರುತಿ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದು, ಎರಡು ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಜಪ್ತಿ ಮಾಡಿದ್ದಾರೆ.

‘ಸಂಸ್ಥೆಯ ದಾಖಲೆಗಳನ್ನು ಸಿಬ್ಬಂದಿಗಳ ಮನೆಯಲ್ಲಿಟ್ಟಿರುವ ಬಗ್ಗೆ ರವಿಕುಮಾರ್ ಹೇಳಿದ್ದ. ನ್ಯಾಯಾಲಯದ ವಾರೆಂಟ್ ಪಡೆದು ಗುರುವಾರ ಶೋಧ ನಡೆಸಲಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಿ’

ಬೆಂಗಳೂರು: ‘ಮತದಾರರ ದತ್ತಾಂಶ ಕಳವು ಪ್ರಕರಣವನ್ನು ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ತಕ್ಷಣ ತನಿಖೆ ನಡೆಸಬೇಕು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಪಡಿಸಿದ್ದಾರೆ.

‘ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳು ಮಾಡಿದರೆ ಅದು ಪಕ್ಷಪಾತದಿಂದ ಕೂಡಿರುತ್ತದೆ’ ಎಂದೂ ಹೇಳಿದ್ದಾರೆ.

‘ಚಿಲುಮೆ ಸಂಸ್ಥೆಯ ಅಕ್ರಮಗಳ ಹಿಂದಿನ ರೂವಾರಿಗಳ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ? ಇಷ್ಟು ದಿನವಾದರೂ ಈ ಅಕ್ರಮ ಸಂಸ್ಥೆಯ ಹಣಕಾಸಿನ ವಹಿವಾಟಿನ ಮೇಲೆ, ಈ ಸಂಸ್ಥೆಗೆ ಹಣ ನೀಡಿದವರ ಮೇಲೆ ಸಿಬಿಐ, ಐಟಿ, ಇ.ಡಿ ಯಾಕೆ ದಾಳಿ ನಡೆಸಿಲ್ಲ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಚಿಲುಮೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ವಹಿಸಿರುವುದರ ಹಿಂದೆ ಬಿಬಿಎಂಪಿ, ಚುನಾವಣಾ ಆಯೋಗದ ಅಧಿಕಾರಿಗಳು ಇದ್ದಾರೆ. ಆಯೋಗದವರು ಬಿಬಿಎಂಪಿಗೆ ಈ ಬಗ್ಗೆ ಪತ್ರಗಳನ್ನೂ ಬರೆದಿದ್ದರು. ಆಯೋಗ ಈ ಅಕ್ರಮಕ್ಕೆ ಮೌನ ಸಮ್ಮತಿ ನೀಡಿದೆಯೇ? ಬೃಹತ್ ಹಗರಣ ನಡೆದಿದ್ದರೂ ಬಿಬಿಎಂಪಿ ಹಿರಿಯ ಅಧಿಕಾರಿಗಳು, ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಯಾಕೆ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ? ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿರುವ ಬಿಜೆಪಿ ಶಾಸಕರು, ಸಚಿವರ ಮೇಲೆ ಮತ್ತು ಬೆಂಗಳೂರು ಅಭಿವೃದ್ಧಿಯ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿ ಮೇಲೆ ಏಕೆ ಯಾವುದೇ ಕ್ರಮ ವಹಿಸಿಲ್ಲ?’ ಎಂದೂ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT