ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೂ, ಕಾಯ್ದೆ ಹಿಂಪಡೆದಿದ್ದಕ್ಕೂ ಸಂಬಂಧವಿಲ್ಲ: ಬಿ.ಎಸ್‌.ಯಡಿಯೂರಪ್ಪ

Last Updated 20 ನವೆಂಬರ್ 2021, 8:00 IST
ಅಕ್ಷರ ಗಾತ್ರ

ಗದಗ: ‘ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿರುವುದಕ್ಕೂ ಮುಂಬರುವ ಚುನಾವಣೆಗಳಿಗೂ ಯಾವುದೇ ಸಂಬಂಧವಿಲ್ಲ. ಅನ್ನದಾತರ ಬಗ್ಗೆ ಪ್ರಧಾನಿ ಮೋದಿ ಅವರಿಗೆ ನಿಜವಾದ ಕಾಳಜಿ ಇರುವುದರಿಂದಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಶಾಸಕ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಶುಕ್ರವಾರ ಗದಗ ನಗರದಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ‘ಪ್ರಧಾನಮಂತ್ರಿ ಮೋದಿ ಅವರು ಚುನಾವಣೆ ಬಗ್ಗೆ ಎಂದೂ ತಲೆಕೆಡಿಸಿಕೊಂಡವರಲ್ಲ. ಇನ್ನೂ 20 ವರ್ಷ ಅವರನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ. ಇದನ್ನು ಬೇಕಾದರೆ ನಾನು ಬರೆದುಕೊಡುತ್ತೇನೆ. ಎಲ್ಲರ ಬೆಂಬಲದೊಂದಿಗೆ ಮುಂದಿನ ಚುನಾವಣೆಗಳನ್ನು ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿದೆ’ ಎಂದು ಹೇಳಿದರು.

‘ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೆಲವರು ದುಂಡಾವರ್ತನೆ ತೋರಿದ್ದರು. ಆ ಸಮಯದಲ್ಲಿ ಪ್ರತಿಭಟನಕಾರರ ಬಗ್ಗೆ ಪ್ರಧಾನಿ ಮೋದಿ ಅವರು ಗೂಂಡಾಗಳು, ನಕ್ಸಲರು, ದಲ್ಲಾಳಿಗಳು ಎಂದು ಪ್ರತಿಕ್ರಿಯಿಸಿದ್ದು ನಿಜ. ಆದರೆ, ಯಾರೋ ಒಬ್ಬರು ಮಾಡಿದ ತಪ್ಪಿಗೆ ಎಲ್ಲ ರೈತರಿಗೆ ಶಿಕ್ಷೆ ಆಗಬಾರದು ಎಂಬ ಕಾಳಜಿಯಿಂದ ಈಗ ಪ್ರಧಾನಿ ಮೋದಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಹೇಳಿದರು.

‘ಪ್ರಧಾನಿ ಈ ತೀರ್ಮಾನ ತೆಗೆದುಕೊಳ್ಳುವುದು ಸ್ವಲ್ಪ ತಡವಾಗಿರುವುದು ನಿಜ. ಆದರೆ, ರೈತರ ಹೋರಾಟ ಮುಂದುವರಿಯಬಾರದು, ಅವರು ನೆಮ್ಮದಿಯಿಂದ ಇರಬೇಕು ಎಂಬ ಆಶಯದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರಕಿಸಿ ಕೊಡುವುದು, ಉತ್ಪನ್ನಗಳನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆ’ ಎಂದು ಹೇಳಿದರು.

‘ಬಿಟ್‌ಕಾಯಿನ್‌ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ. ಯಾರ ಬಳಿಯಾದರೂ ದಾಖಲೆಗಳು ಇದ್ದಲ್ಲಿ ಅವನ್ನು ಒದಗಿಸಿದರೆ ಯಾವುದೇ ಪಕ್ಷದವರಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧವಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT