ಮಂಗಳವಾರ, ಮಾರ್ಚ್ 21, 2023
23 °C
ಆ್ಯಪ್‌ ಬಂದ್ ಮಾಡಲು ಕೋರಿದ್ದ ದೂರು ತಿರಸ್ಕರಿಸಿದ್ದ ಕೇಂದ್ರ ಸೈಬರ್ ಅಪರಾದ ವಿಭಾಗ

ಅನಧಿಕೃತ ಟ್ಯಾಕ್ಸಿ ಆ್ಯಪ್‌ ಸ್ಥಗಿತಕ್ಕೆ ಕಾನೂನಿಲ್ಲ!

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಆ್ಯಪ್ ಆಧಾರಿತ ಟ್ಯಾಕ್ಸಿ ಕಂಪನಿಗಳು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ, ಆ್ಯಪ್‌ಗಳನ್ನು ಬಂದ್ ಮಾಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ.

ಅನಧಿಕೃತವಾಗಿ ಕಾರ್ಯಾಚಾರಣೆ ಮಾಡುತ್ತಿರುವ ಆ್ಯಪ್‌ಗಳನ್ನು ಬಂದ್ ಮಾಡಬೇಕು ಎಂಬ ರಾಜ್ಯ ಸರ್ಕಾರದ ಕೋರಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಅಗ್ರಿಗೇಟರ್ ಸೇವೆ ಒದಗಿಸುತ್ತಿರುವ ಕಂಪನಿಗಳ ಆ್ಯಪ್‌ಗಳನ್ನು ಬಂದ್‌ ಮಾಡಲು ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿ ಅವಕಾಶವಿಲ್ಲ ಎಂಬ ಉತ್ತರ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಓಲಾ, ಉಬರ್, ರ್‍ಯಾಪಿಡೊ ಸೇರಿ ಆ್ಯಪ್ ಆಧಾರಿತ ಕಂಪನಿಗಳು ನಗರದಲ್ಲಿ ಆಟೊ ಮತ್ತು ಬೈಕ್‌ ಸೇವೆ ಒದಗಿಸುತ್ತಿವೆ. ಈ ಸೇವೆ ನಿಯಮಬಾಹಿರವಾಗಿದೆ ಎಂದು ಸಾರಿಗೆ ಇಲಾಖೆಯೇ ಹೇಳಿತ್ತು. ಅಷ್ಟು ಮಾತ್ರವಲ್ಲದೇ, ಆ ಕಂಪನಿಗಳ ವಿರುದ್ಧ ಸೈಬರ್ ಅಪರಾಧ ಠಾಣೆಯಲ್ಲಿ ದೂರು ಸಲ್ಲಿಸುವುದಾಗಿಯೂ ಸಾರಿಗೆ ಆಯುಕ್ತರೇ ಇತ್ತೀಚೆಗೆ ಹೇಳಿದ್ದರು. ಈ ಎಲ್ಲಾ ಬೆಳವಣಿಗೆಗಳಿಗೂ ಮುನ್ನವೇ ಸಾರಿಗೆ ಇಲಾಖೆಯು ಕೇಂದ್ರ ಸೈಬರ್ ಭದ್ರತಾ ವಿಭಾಗಕ್ಕೆ ದೂರು ಸಲ್ಲಿಸಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ರ್‍ಯಾಪಿಡೊ ಕಂಪನಿಯ ಆ್ಯಪ್ ಸ್ಥಗಿತಗೊಳಿಸುವಂತೆ ಮನವಿ ಮಾಡಿತ್ತು.

‘ಈ ಸೆಕ್ಷನ್ ಅಡಿ ಆ್ಯಪ್ ಸ್ಥಗಿತಗೊಳಿಸಲು ಅವಕಾಶ ಇಲ್ಲ. ಸ್ಥಳೀಯವಾಗಿ ಎಫ್‌ಐಆರ್ ದಾಖಲಿಸಿ ನ್ಯಾಯಾಲಯದಿಂದ ಆದೇಶ ಪಡೆದುಕೊಳ್ಳಬಹುದು ಎಂದು ಸೂಚಿಸಿತ್ತು. ಕೇಂದ್ರದಿಂದ ಬಂದ ಈ ಉತ್ತರದಿಂದ ಅಧಿಕಾರಿಗಳು ಕೈ ಚೆಲ್ಲಿದರು. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕ್ರಮಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕುವ ಪ್ರಯತ್ನವನ್ನೇ ಮಾಡಲಿಲ್ಲ. ಸ್ಥಳೀಯವಾಗಿ ಎಫ್‌ಐಆರ್ ಕೂಡ ದಾಖಲಿಸಲಿಲ್ಲ. ಇದರಿಂದಾಗಿ ಅನಧಿಕೃತ ಸೇವೆ ರಾಜಾರೋಷವಾಗಿ ವಿಸ್ತಾರಗೊಂಡಿತು’ ಎಂದು ಸಾರಿಗೆ ತಜ್ಞರು ಹೇಳುತ್ತಾರೆ.

‘ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಸಂಬಂಧಿಸಿದ ನಿಯಮಗಳನ್ನು ಹಲವು ಬಾರಿ ಹುಡುಕಿದ್ದೇವೆ. ಅಗ್ರಿಗೇಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾಯ್ದೆಯಲ್ಲಿ ಅವಕಾಶವೇ ಇಲ್ಲ. ಹೀಗಾಗಿ, ಸೈಬರ್ ಅಪರಾಧ ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಕಾಯ್ದೆಗೆ ತಿದ್ದುಪಡಿ ತಂದು ಪ್ರಬಲಗೊಳಿಸುವ ಅಗತ್ಯವಿದೆ’ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮ–2016ರಲ್ಲಿ ಅಸ್ತಿತ್ವಕ್ಕೆ ಬಂದಿತು. ಅದಕ್ಕೂ ಮುನ್ನವೇ ಕಾರ್ಯಾಚರಣೆಯಲ್ಲಿದ್ದರೂ, ನಿಯಮ ಜಾರಿಗೆ ಬಂದ ಬಳಿಕವೇ ಓಲಾ ಮತ್ತು ಉಬರ್‌ ಕಂಪನಿಗಳಿಗೆ ಪರವಾನಗಿ ನೀಡಲಾಯಿತು. ಪರವಾನಗಿ ಇಲ್ಲದೆ ಕಾರ್ಯಾಚರಣೆಯಲ್ಲಿರುವ ಆ್ಯಪ್‌ಗಳ ವಿರುದ್ಧ ಕ್ರಮಕ್ಕೆ ದೂರು ನೀಡುತ್ತಲೇ ಇದ್ದೇವೆ. ಬಂದ್ ಮಾತ್ರ ಆಗಲಿಲ್ಲ’ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಸದ್ಯದಲ್ಲೇ ಬರಲಿವೆ ಇ–ಬೈಕ್‌ ಟ್ಯಾಕ್ಸಿ: ಪ್ರತಿಭಟನೆಗೆ ನಿರ್ಧಾರ

ನಗರದಲ್ಲಿ ಸದ್ಯದಲ್ಲೆ ಬೈಕ್‌ಗಳ ಟ್ಯಾಕ್ಸಿ ಸೇವೆ ಅಧಿಕೃತವಾಗಿ ಆರಂಭವಾಗಲಿದ್ದು, ಎಲೆಕ್ಟ್ರಿಕ್ ಬೈಕ್‌ಗಳು ರಸ್ತೆಗಿಳಿಯಲಿವೆ.

‘ಎಲೆಕ್ಟ್ರಿಕ್ ಬೈಕ್‌ ಸೇವೆ ಮಾತ್ರ ಒದಗಿಸಬೇಕು ಎಂಬ ಷರತ್ತು ವಿಧಿಸಿ ವಿಕೆಡ್‌ರೈಡ್ ಕಂಪನಿಗಷ್ಟೇ ಪರವಾನಗಿ ನೀಡಲಾಗಿದೆ’ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಹೇಮಂತಕುಮಾರ್ ತಿಳಿಸಿದರು.

‘ಈವರೆಗೆ ಅಕ್ರಮವಾಗಿದ್ದ ಬೈಕ್‌ ಟ್ಯಾಕ್ಸಿಯನ್ನು ಸಕ್ರಮ ಮಾಡಲು ಹೊರಟಿರುವುದು ಆಟೊ ಚಾಲಕರ ದುಡಿಮೆಗೆ ಮಾರಕವಾಗಲಿದೆ. 15 ಲಕ್ಷ ಆಟೊ ಚಾಲಕರು ಇದೇ ವೃತ್ತಿ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. 5 ಕಿಲೋ ಮೀಟರ್‌ಗೆ ₹25 ನಿಗದಿ ಮಾಡಿ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದರೆ, ಆಟೊರಿಕ್ಷಗಳನ್ನು ಹತ್ತುವವರು ಯಾರು’ ಎಂದು ಆಟೊ ಚಾಲಕರ ಒಕ್ಕೂಟದ ಸಂಚಾಲಕ ಎಂ.ಮಂಜುನಾಥ್ ಪ್ರಶ್ನಿಸಿದರು.

‘ಯುವ ಸಮೂಹ ಅದರಲ್ಲೂ ವಿದ್ಯಾರ್ಥಿಗಳು ಬೈಕ್ ಟ್ಯಾಕ್ಸಿಯಲ್ಲಿ ಬರುವ ಬಿಡಿಗಾಸಿನ ಆಸೆಗೆ ಓದು ನಿಲ್ಲಿಸಿ ಜೀವನ ಹಾಳು ಮಾಡಿಕೊಳ್ಳುವ ಸಾಧ್ಯತೆ ಇದೆ. ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಡಿ.29ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಸರ್ಕಾರ ಕೂಡಲೇ ತನ್ನ ನಿರ್ಧಾರ ಬದಲಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು