ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳ ದತ್ತು ನೀತಿ ಸದೃಢಕ್ಕೆ ಚಿಂತನೆ: ಪ್ರೊ.ಎಂ.ಆರ್ ದೊರೆಸ್ವಾಮಿ

ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆ ಸಲಹೆಗಾರ
Last Updated 26 ಆಗಸ್ಟ್ 2020, 19:00 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ನೀತಿಗೆ ವಿಧಾನಸಭೆ ಸದಸ್ಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ವಿಧಾನಪರಿಷತ್‌ ಸದಸ್ಯರು, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರನ್ನು ಕೂಡಾ ಈ ನೀತಿಯ ಒಳಗೆ ತರಲು ಚಿಂತನೆ ನಡೆದಿದೆ’ ಎಂದು ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಈ ನೀತಿಯನ್ನು ಬಲಗೊಳಿಸುವ ಉದ್ದೇಶದಿಂದ ಚಿತ್ರೋದ್ಯಮ ಹಾಗೂ ಕಾರ್ಪೊರೇಟ್‌ ಮೂಲಗಳತ್ತ ಕೂಡಾ ಗಮನಹರಿಸಿದ್ದೇನೆ. ತಲಾ 100 ಶಾಲೆಗಳನ್ನು ದತ್ತು ತೆಗೆದುಕೊಳ್ಳುವಂತೆ ಆ ವಲಯದಲ್ಲಿ ಇರುವವರ ಬಳಿ ಮನವಿ ಮಾಡಲು ನಿರ್ಧರಿಸಿದ್ದೇನೆ’ ಎಂದರು.

‘ಶಾಸಕರು, ಸಚಿವರು, ವಿಶ್ವವಿದ್ಯಾಲಯಗಳಿಂದಷ್ಟೇ ಅಲ್ಲದೆ, ಮಾಧ್ಯಮ ರಂಗದಿಂದಲೂ ದತ್ತು ನೀತಿಗೆ ಈಗಾಗಲೇ ಪ್ರೋತ್ಸಾಹ ದೊರೆತಿದೆ’ ಎಂದರು.

‘ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್ ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ನೀತಿಯ ಅನುಷ್ಠಾನದ ಕಾರ್ಯಸೂಚಿ ರೂಪಿಸಲಾಗಿದೆ. ಅದರಂತೆ, ಇಲಾಖೆಯ ಅಧಿಕಾರಿಗಳು ಶಾಸಕರನ್ನು ಭೇಟಿ ಮಾಡಿ ಶಾಲೆಗಳನ್ನು ದತ್ತು ಪಡೆಯುವ ವಿಷಯ ತಿಳಿಸಿದ್ದಾರೆ. ನಾನು ಕೂಡಾ ಎಲ್ಲ ಶಾಸಕರಿಗೆ ಮೇ 29ರಂದು ಪತ್ರ ಬರೆದು ದತ್ತು ತೆಗೆದುಕೊಳ್ಳಲು ಮನವಿ ಮಾಡಿದ್ದೆ’ ಎಂದರು.

‘ಕೆಲವು ಶಾಸಕರು ತಮ್ಮ ಕ್ಷೇತ್ರದ ಎಲ್ಲ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಇನ್ನೂ ಕೆಲವು ಶಾಸಕರು 12 ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಎಲ್ಲ ಸಚಿವರು ತಲಾ ಐದು ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಒಪ್ಪಿದ್ದಾರೆ. ದತ್ತು ನೀತಿ ಸದೃಢಗೊಳಿಸಲು ಶಿಕ್ಷಣ ಸಂಸ್ಥೆಗಳನ್ನು ಕೂಡಾ ಈ ಕಾರ್ಯದಲ್ಲಿ ಸೇರಿಸಿರುವುದು ಮತ್ತೊಂದು ಹೊಸ ಆಯಾಮ’ ಎಂದೂ ಅವರು ಹೇಳಿದರು.

‘ಸುಮಾರು 25-30 ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷರು, ಕುಲಪತಿಗಳ ಜೊತೆ ಚರ್ಚಿಸಿದ ಫಲವಾಗಿ ಶಿಕ್ಷಣ ಸಂಸ್ಥೆಗಳು ತಲಾ 10 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಸಮ್ಮತಿಸಿವೆ. ಮೈಸೂರು. ತುಮಕೂರು, ಬೆಂಗಳೂರು ಉತ್ತರ, ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಗಳು ತಲಾ 10, ಪಿಇಎಸ್‌, ರೇವಾ, ಪ್ರೆಸಿಡೆನ್ಸಿ, ಸಿಎಂಆರ್‌, ಶರಣಬಸವ (ಕಲಬುರ್ಗಿ), ಕೆಎಲ್‌ಇ ಖಾಸಗಿ ವಿಶ್ವವಿದ್ಯಾಲಯಗಳು ತಲಾ 10, ನಿಟ್ಟೆ ಮತ್ತು ಶ್ರೀನಿವಾಸ ವಿಶ್ವವಿದ್ಯಾಲಯಗಳು ಹಾಗೂ ಸ್ವಾಯತ್ತ ಕಾಲೇಜು ಇಂಡಿಯನ್‌ ಅಕಾಡೆಮಿ ತಲಾ 5 ಶಾಲೆಗಳನ್ನು ದತ್ತು ಪಡೆದುಕೊಂಡಿವೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT