ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆಗೆ ‘ತ್ರಿ’ ಸೂತ್ರ

ಚುನಾವಣೆ ಗೆದ್ದು ಗದ್ದುಗೆ ಹಿಡಿಯಲು ಕಾಂಗ್ರೆಸ್‌ ನಾಯಕರ ತಯಾರಿ
Last Updated 4 ಜನವರಿ 2023, 22:39 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆ ಹಿಡಿಯಲು ನಾನಾ ತಂತ್ರಗಳ ಮೊರೆ ಹೋಗಿರುವ ಕಾಂಗ್ರೆಸ್‌ ನಾಯಕರು, ಕ್ಷೇತ್ರ ಗೆಲ್ಲುವ ಕಲಿಗಳ ಆಯ್ಕೆಗೆ ‘ತ್ರಿ’ ಸೂತ್ರ ಅಳವಡಿಸಲು ಮುಂದಾಗಿದ್ದಾರೆ.

ಚುನಾವಣೆಗೆ ಸಜ್ಜುಗೊಳ್ಳಲು, ರಾಜ್ಯ– ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಂದೋಲನ ಮಾದರಿಯಲ್ಲಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ನಾಯಕರು ಇದೇ 11ರಿಂದ 27ರವರೆಗೆ ‘ಪ್ರಜಾಧ್ವನಿ’ ಯಾತ್ರೆ ಕೈಗೊಳ್ಳಲಿದ್ದಾರೆ. ಯಾತ್ರೆಯ ಸಂದರ್ಭದಲ್ಲಿ ಅಥವಾ ಯಾತ್ರೆಯ ಮೊದಲ ಹಂತ ಮುಗಿಯುತ್ತಿದ್ದಂತೆ ಟಿಕೆಟ್‌ ಘೋಷಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೇಲೆ ಪಕ್ಷದ ನಾಯಕರು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ, ಜನವರಿ ಕೊನೆಯ ವಾರದಲ್ಲಿ 120ರಿಂದ 150 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ರಾಜ್ಯ ನಾಯಕರು ಚಿಂತಿಸಿದ್ದಾರೆ.

ಎಲ್ಲ ಹಾಲಿ ಶಾಸಕರು ಮತ್ತು 2018ರ ಚುನಾವಣೆಯಲ್ಲಿ 5 ಸಾವಿರಕ್ಕೂ ಕಡಿಮೆ ಮತಗಳ ಅಂತರದಿಂದ ಸೋಲುಂಡವರಿಗೆ, ಕ್ಷೇತ್ರವಾರು ನಡೆಸಿದ ಸರ್ವೆಯಲ್ಲಿ ಮತದಾರರ ಒಲವು ಗಳಿಸಿ ಗೆಲ್ಲುವ ಅಭ್ಯರ್ಥಿ ಗುರುತಿಸಿಕೊಂಡವರಿಗೆ, ನಿರ್ದಿಷ್ಟ ಕ್ಷೇತ್ರಗಳಲ್ಲಿ ವರ್ಚಸ್ಸು, ಸಾಮರ್ಥ್ಯ ಮತ್ತು ಮತದಾರರ ಮೇಲೆ ಪ್ರಭಾವ ಬೀರಬಲ್ಲವರಿಗೆ ಟಿಕೆಟ್‌ ಎಂಬ ಮೂರು ಸೂತ್ರಗಳನ್ನು ಪಾಲಿಸಿ ಟಿಕೆಟ್‌ ಹಂಚಿಕೆ ಮಾಡಲು ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ.

‘ಗೆಲುವೊಂದೇ ಮಾನದಂಡ ಎಂಬ ಗುರಿಯಿಟ್ಟು ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲು ಕಾಂಗ್ರೆಸ್‌ ನಾಯಕರು ಪಣ ತೊಟ್ಟಿದ್ದಾರೆ. ಆದರೆ, ಅನೇಕ ಕ್ಷೇತ್ರಗಳಲ್ಲಿ ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಬಣದ ಅಭ್ಯರ್ಥಿಗಳೆಂದು ಗುರುತಿಸಿಕೊಂಡವರು ಟಿಕೆಟ್‌ ಗಿಟ್ಟಿಸಿಕೊಳ್ಳಲು ಜಿದ್ದಿಗೆ ಬಿದ್ದಿದ್ದಾರೆ. ಆಪ್ತರ ಮೂಲಕ ಟಿಕೆಟ್‌ ಗಿಟ್ಟಿಸಿಕೊಳ್ಳಲು ತೆರೆಮರೆಯಲ್ಲಿ ಯತ್ನ ಆರಂಭಿಸಿದ್ದಾರೆ. ಈ ಬಣ ರಾಜಕೀಯ ಈಗಾಗಲೇ ವರಿಷ್ಠರ ಗಮನಕ್ಕೂ‌ ಬಂದಿದೆ. ಹೀಗಾಗಿ, ಟಿಕೆಟ್‌ ಹಂಚಿಕೆ ವಿಚಾರದಲ್ಲಿ ರಾಜ್ಯದವರೇ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೇಲುಗೈ ಸಾಧಿಸುವ ಸಾಧ್ಯತೆಯೇ ಹೆಚ್ಚು’ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದರು.

‘ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಪರಸ್ಪರ ಚೆನ್ನಾಗಿಯೇ ಇದ್ದಾರೆ. ಆದರೆ, ಅವರ ಸುತ್ತ ಇರುವವರ ಚಿತಾವಣೆ ಹೆಚ್ಚುತ್ತಿದೆ.‌ಇದರಿಂದಾಗಿ ಪಕ್ಷದಲ್ಲಿ ಬಣ ರಾಜಕೀಯದ ಜೊತೆಗೆ ಗೊಂದಲವೂ ಉಂಟಾಗುತ್ತಿದೆ. ರಾಜ್ಯದಲ್ಲಿ ಈ ಬಾರಿ ಗೆಲ್ಲುವ ಉತ್ತಮ ವಾತಾವರಣವಿದೆ. ಅದನ್ನು ಹಾಳು ಮಾಡಿಕೊಳ್ಳಬೇಡಿ ಎಂದು ವರಿಷ್ಠರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಕಡಿಮೆ ಅಂತರದಲ್ಲಿ ಗೆದ್ದವರಿಗೆ ಟಿಕೆಟ್‌ ಬಹುತೇಕ ಖಚಿತ. ಆದರೆ, ಚುನಾವಣೆಯ ಬಳಿಕ ಕ್ಷೇತ್ರದಿಂದ ದೂರವಾದವರು, ಮತದಾರರ ಸಂಪರ್ಕ ಕಳೆದುಕೊಂಡವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ವಿರಳ. ಒಂದು ಮನೆಯಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್‌ ಕೊಡುವ ಬಗ್ಗೆಯೂ ಚರ್ಚೆ ನಡೆದಿದೆ’ ಎಂದರು.

ಡಿಕೆಶಿ– ಸಿದ್ದರಾಮಯ್ಯ ಪೈಪೋಟಿಗೆ ಖರ್ಗೆ ತಡೆ?

‘ಸೀಟು ಹಂಚಿಕೆ ವೇಳೆ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ನಡುವೆ ಒಮ್ಮತ ಮೂಡದೆ, ಗೊಂದಲ ಉಂಟಾದರೆ ಪಕ್ಷದ ವರಿಷ್ಠರೇ ಅಭ್ಯರ್ಥಿ ಹೆಸರು ಅಂತಿಮಗೊಳಿಸಬಹುದು. ಅಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಡೀ ರಾಜ್ಯದ ರಾಜಕೀಯ ಚಿತ್ರಣದ ಸಂಪೂರ್ಣ ಅರಿವು ಇದೆ. ಅವರು ಮಧ್ಯಪ್ರವೇಶಿಸುವುದು ಖಚಿತ’ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದರು.

‘ಹಲವು ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಈಗಾಗಲೇ ಪೈಪೋಟಿ ಆರಂಭವಾಗಿದೆ. ಇತರ ಪಕ್ಷಗಳಿಂದ ವಲಸೆ ಬಂದವರೂ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ರಾಜ್ಯದಲ್ಲಿ ಚುನಾವಣೆ ಗೆದ್ದು ತೋರಿಸುವುದು ಮಲ್ಲಿಕಾರ್ಜುನ ಖರ್ಗೆ ಅವರ ಮುಂದಿರುವ ಗುರಿ ಮತ್ತು ಸವಾಲು. ಅಭ್ಯರ್ಥಿ ಆಯ್ಕೆಯ ಗೊಂದಲದಿಂದ ಕ್ಷೇತ್ರ ಕಳೆದುಕೊಳ್ಳಬಾರದೆಂಬ ಕಾರಣಕ್ಕೆ ಅವರು ಎಚ್ಚರಿಕೆಯ ನಡೆ ಇಡುವುದು ಖಚಿತ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT