ಬುಧವಾರ, ಫೆಬ್ರವರಿ 1, 2023
16 °C

ತಂಬಾಕು ಉತ್ಪನ್ನ: ತೆರಿಗೆ ಹೆಚ್ಚಳಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸುವ ಮೂಲಕ ಯುವಜನರು ಧೂಮಪಾನದಂತಹ ವ್ಯಸನಗಳಿಗೆ ಒಳಪಡುವುದನ್ನು ತಡೆಯಬೇಕು ಎಂದು ತಂಬಾಕು ಮುಕ್ತ ಕರ್ನಾಟಕ ವೇದಿಕೆ (ಸಿಎಫ್‌ಟಿಎಫ್‌ಕೆ) ಹಾಗೂ ಕರ್ನಾಟಕ ನೋ ಫಾರ್ ಟೊಬ್ಯಾಕೊ (ಕೆಎನ್‌ಒಟಿ) ಸಂಸ್ಥೆ ಆಗ್ರಹಿಸಿವೆ. 

ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯದ ಎಲ್ಲ ಸಂಸದರಿಗೆ ಸಂಸ್ಥೆ ಪತ್ರ ಬರೆದಿವೆ. ‘ಯುವಜನರು ತಂಬಾಕು ಕಂಪನಿಗಳ ಪ್ರಮುಖ ಗುರಿಯಾಗಿದ್ದಾರೆ. ತಂಬಾಕು ಉತ್ಪನ್ನಗಳು ಕೈಗೆಟುಕದಂತೆ ಮಾಡಲು ತೆರಿಗೆ ಹೆಚ್ಚಳ ಅನಿವಾರ್ಯ. 2017ರಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದಾಗಿನಿಂದ ಸರ್ಕಾರವು ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿಲ್ಲ. ಸಿಗರೇಟ್‌ಗಳ ಮೇಲೆ ಪ್ರಸ್ತುತ ಶೇ 53ರಷ್ಟು ತೆರಿಗೆ ಹೊರೆ ಇದೆ. ಈ ಪ್ರಮಾಣ ಬೀಡಿಗಳ ಮೇಲೆ ಶೇ 22ರಷ್ಟು ಮತ್ತು ಹೊಗೆರಹಿತ ತಂಬಾಕಿನ ಮೇಲೆ ಶೇ 60ರಷ್ಟು ಇದೆ. ಇದನ್ನು ಹೆಚ್ಚಿಸಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿವೆ. 

ಆದಾಯ ದ್ವಿಗುಣ: ‘ತಂಬಾಕು ಬಳಕೆ ನಿಯಂತ್ರಿಸುವಲ್ಲಿ ತೆರಿಗೆ ಹೆಚ್ಚಳ ಅತ್ಯಂತ ಪರಿಣಾಮಕಾರಿ ವಿಧಾನವಾಗಿದ್ದರೂ ಅದನ್ನು ಸೂಕ್ತವಾಗಿ ಬಳಸಲಾಗುತ್ತಿಲ್ಲ. ತೆರಿಗೆಯನ್ನು ಮೂರು ಪಟ್ಟು ಹೆಚ್ಚಿಸಿದಾಗ ಆದಾಯವನ್ನು ದ್ವಿಗುಣಗೊಳಿಸಬಹುದು. ತಂಬಾಕು ಬಳಕೆಯನ್ನು ಅರ್ಧದಷ್ಟು ಕಡಿಮೆ ಮಾಡಬಹುದು. ತಂಬಾಕು ಉತನ್ನಗಳು ಕೈಗೆಟುಕದಂತೆ ಮಾಡಲು ಮತ್ತು ಅದರ ಬಳಕೆಯನ್ನು ತಗ್ಗಿಸಲು ತಂಬಾಕಿನ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲು ಇದು ಸಕಾಲ’ ಎಂದು ಕ್ಯಾನ್ಸರ್ ತಜ್ಞ ಮತ್ತು ರಾಜ್ಯ ಸರ್ಕಾರದ ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿ ಸದಸ್ಯ ಡಾ. ವಿಶಾಲ್ ರಾವ್ ತಿಳಿಸಿದ್ದಾರೆ.

‘ತಂಬಾಕು ಉತ್ಪನ್ನಗಳ ಸೇವನೆ ಕ್ಯಾನ್ಸರ್ ಕಾಯಿಲೆಗೆ ಆಹ್ವಾನ ನೀಡಲಿದೆ. ದೇಶದಲ್ಲಿ ವರದಿಯಾಗುತ್ತಿರುವ ಒಟ್ಟು ಕ್ಯಾನ್ಸರ್‌ ಪ್ರಕರಣಗಳಲ್ಲಿ ಶೇ 50ರಷ್ಟು ಪ್ರಕರಣಗಳು ತಂಬಾಕು ಸಂಬಂಧಿತ ಕ್ಯಾನ್ಸರ್‌ ಪ್ರಕರಣಗಳಾಗಿವೆ ಎನ್ನುವುದು ಅಧ್ಯಯನದಿಂದ ದೃಢಪಟ್ಟಿದೆ. ತಂಬಾಕು ಉತ್ಪನ್ನಗಳ ಬೆಲೆ ದೇಶದಲ್ಲಿ ಅತಿ ಕಡಿಮೆಯಿದೆ. ಎಲ್ಲ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಬೇಕು’ ಎಂದು ತಂಬಾಕು ಮುಕ್ತ ಕರ್ನಾಟಕ ವೇದಿಕೆಯ ಸಂಚಾಲಕ ಎಸ್.ಜೆ. ಚಂದರ್ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು