ಗುರುವಾರ , ಫೆಬ್ರವರಿ 25, 2021
28 °C
ಸಾವಿರಾರು ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ

ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಶಾಲೆಗಳು ಕುಡಿಯುವ ನೀರು ಮತ್ತು ಶೌಚಾಲಯದಂತಹ ಕನಿಷ್ಠ ಮೂಲಸೌಲಭ್ಯಗಳ ಕೊರತೆಗಳನ್ನು ಎದುರಿಸುತ್ತಿವೆ.

ಲಭ್ಯವಿರುವ ಅಂಕಿ–ಅಂಶಗಳ ಪ್ರಕಾರ, 16 ಶೈಕ್ಷಣಿಕ ಜಿಲ್ಲೆಗಳಲ್ಲಿ ಸುಮಾರು 6 ಸಾವಿರ ಶಾಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಇದ್ದರೆ, 9 ಸಾವಿರ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ.

‘ಶೌಚಾಲಯ ಮತ್ತು ಕುಡಿಯುವ ನೀರಿನ ಕೊರತೆ ಇರುವ ಸರ್ಕಾರಿ ಶಾಲೆಗಳ ಪಟ್ಟಿ ಕಳುಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲ ಉಪನಿರ್ದೇಶಕರಿಗೆ ಕೋರಿದ್ದೆವು. ಅದರಲ್ಲಿ 16 ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರು ಮಾಹಿತಿ ಕಳುಹಿಸಿಕೊಟ್ಟಿದ್ದಾರೆ. ಈ ಸೌಲಭ್ಯಗಳಿಲ್ಲದ ಶಾಲೆಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಅನನುಕೂಲವಾಗುತ್ತಿದೆ’ ಎಂದು ಸರ್ಕಾರದ ಶೈಕ್ಷಣಿಕ ಸಲಹೆಗಾರ ಪ್ರೊ. ಎಂ.ಆರ್. ದೊರೆಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ಒಯ್ಯಬೇಕಾಗಿದೆ. ಮಹಿಳಾ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಶೌಚಕ್ಕಾಗಿ ಶಾಲೆಯ ಪಕ್ಕದ ಮನೆಗಳಿಗೆ ತೆರಳಬೇಕಾದ ಸ್ಥಿತಿ ಇದೆ’ ಎಂದು ಅವರು ಹೇಳಿದರು.

‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯು ಹಲವು ಕಾರ್ಯಕ್ರಮದ ಅಡಿ ಈ ಸೌಲಭ್ಯಗಳನ್ನು ಒದಗಿಸುತ್ತಿದೆ. ಜಿಲ್ಲಾ ಉಪನಿರ್ದೇಶಕರಿಂದ ಸಂಗ್ರಹಿಸಿದ ಮಾಹಿತಿಯನ್ನು, ಪಂಚಾಯತ್‌ ರಾಜ್‌ ಇಲಾಖೆಗೆ ಕಳುಹಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಈ ಉದ್ದೇಶಕ್ಕೆ ಕೇಂದ್ರ ಮತ್ತು ರಾಜ್ಯಸರ್ಕಾರದಿಂದ ಸಾವಿರಾರು ಕೋಟಿ ರೂಪಾಯಿ ಅನುದಾನ ಸಿಗುತ್ತದೆ. ಅದು ಸರಿಯಾಗಿ ಅನುಷ್ಠಾನವಾಗಬೇಕಾಗಿದೆ. ಎಲ್ಲ ಶಾಲೆಗಳ ಮಾಹಿತಿ ಬರುವವರೆಗೂ ಕಾಯಬಹುದಿತ್ತು. ಆದರೆ, ಮಾರ್ಚ್‌ನಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತದೆ. ಅಷ್ಟರೊಳಗೆ ಸಾಧ್ಯವಾದಷ್ಟು ಕಾಮಗಾರಿ ಪೂರ್ಣಗೊಳ್ಳಲಿ ಎಂಬ ಉದ್ದೇಶದಿಂದ 16 ಜಿಲ್ಲೆಗಳಲ್ಲಿನ ಶಾಲೆಗಳ ಮಾಹಿತಿಯನ್ನುಇಲಾಖೆಗೆ ಕಳುಹಿಸಲಾಗಿದೆ’ ಎಂದರು.

ವರದಿ ತರಿಸಿಕೊಳ್ಳಲಾಗುವುದು: ‘ಶೌಚಾಲಯ ನಿರ್ಮಿಸಿಕೊಡುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯ ನೆರವು ಕೇಳಿದ್ದೇವೆ. ಸ್ವಚ್ಛ ಭಾರತ್ ಯೋಜನೆಯಡಿ 720 ಶೌಚಾಲಯ ನಿರ್ಮಾಣ ಮಾಡಲಾಗಿತ್ತು. ಎಲ್ಲ ಉಪನಿರ್ದೇಶಕರಿಂದ ಮತ್ತೆ ಮಾಹಿತಿ ತರಿಸಿಕೊಳ್ಳಲಾಗುವುದು. ಶೌಚಾಲಯ ದುರಸ್ತಿ, ನಿರ್ಮಾಣ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್‌ ತಿಳಿಸಿದರು.

‘ಎರಡೂವರೆ ತಿಂಗಳಲ್ಲಿ ನೀರು’

‘ಶಿಕ್ಷಣ ಇಲಾಖೆ ಮತ್ತು ಪ್ರೊ.ಎಂ.ಆರ್. ದೊರೆಸ್ವಾಮಿ ಅವರಿಂದ ಇಲಾಖೆಗೆ ಈ ಕುರಿತು ಪತ್ರ ಬಂದಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಜಲಜೀವನ್‌ ಯೋಜನೆಯಡಿ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು. ಎರಡೂವರೆ ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳಿಸುವ ಗುರಿ ಇದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಯೋಜನೆಯಡಿ ಒಂದು ಶಾಲೆಗೆ ₹15 ಸಾವಿರದವರೆಗೆ ಖರ್ಚು ಮಾಡಲಾಗುವುದು. ಇನ್ನು, ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಶೌಚಾಲಯ ನಿರ್ಮಾಣಕ್ಕೆ ಒಂದು ಶಾಲೆಗೆ ₹3.5 ಲಕ್ಷವರೆಗೆ ಖರ್ಚು ಮಾಡಲು ಅವಕಾಶವಿದ್ದು, ಅಗತ್ಯವಿರುವ ಶಾಲೆಗಳಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುವುದು. ನರೇಗಾ ಅಡಿಯಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು