ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಸಂಪೂರ್ಣ ‘ಕರ್ನಾಟಕ ಬಂದ್‌‘ ಅನುಮಾನ

ಕನ್ನಡ ಪರ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯ
Last Updated 30 ಡಿಸೆಂಬರ್ 2021, 0:54 IST
ಅಕ್ಷರ ಗಾತ್ರ

ಬೆಂಗಳೂರು: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ನಿಷೇಧಕ್ಕೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಶುಕ್ರವಾರದ ಕರ್ನಾಟಕ ಬಂದ್‌ ಕುರಿತು ಕನ್ನಡ ಪರ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದೆ. ಹೀಗಾಗಿ ಸಂಪೂರ್ಣ ರಾಜ್ಯ ಬಂದ್‌ ಸಾಧ್ಯತೆ ಕುರಿತು ಅನುಮಾನ ಮೂಡಿದೆ.

ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟಿರುವುದು, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ, ಬಸವೇಶ್ವರರ ಭಾವಚಿತ್ರಕ್ಕೆ ಸಗಣಿ ಬಳಿದಿರುವುದನ್ನು ಖಂಡಿಸಿ ಬಂದ್‌ಗೆ ಕರೆ ನೀಡಲಾಗಿದೆ. ರಾಜ್ಯದಲ್ಲಿ ಎಂಇಎಸ್‌ ನಿಷೇಧ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುತ್ತಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ. ನಾರಾಯಣ ಗೌಡ ಬಣ ಬಂದ್‌ ಬೆಂಬಲಿಸುವುದಿಲ್ಲ ಎಂದು ಈ ಹಿಂದೆಯೇ ಘೋಷಿಸಿತ್ತು. ಪ್ರವೀಣ್‌ ಕುಮಾರ್‌ ಶೆಟ್ಟಿ ಬಣವೂ ಬಂದ್‌ಗೆ ಬೆಂಬಲ ನೀಡದಿರಲು ನಿರ್ಧರಿಸಿದೆ. ವಾಟಾಳ್‌ ನಾಗರಾಜ್‌ ಅವರಿಗೆ ಬುಧವಾರ ಪತ್ರ ಬರೆದಿರುವ ಪ್ರವೀಣ್‌ ಕುಮಾರ್‌ ಶೆಟ್ಟಿ, ಜನರು ಕೋವಿಡ್‌ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಕಾರಣದಿಂದ ಬಂದ್‌ ಕೈಬಿಡುವಂತೆ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳ ನೌಕರರು, ಹೋಟೆಲ್‌ ಮಾಲೀಕರ ಸಂಘಟನೆ ಕೂಡ ಬಂದ್‌ಗೆ ಬೆಂಬಲ ನೀಡಿಲ್ಲ. ಈ ಹಿಂದೆ ಬಂದ್‌ ಕರೆ ನೀಡಿದಾಗ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಹಲವು ಸಂಘಟನೆಗಳು ಈ ಬಾರಿ ದೂರ ಉಳಿದಿವೆ.

ಕೆಲವರ ಬೆಂಬಲ: ಕರ್ನಾಟಕ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್‌ ಬಣ ಸೇರಿದಂತೆ ಕೆಲವು ಸಂಘಟನೆಗಳು ಬಂದ್‌ ಕರೆಯನ್ನು ಬೆಂಬಲಿಸಿವೆ. ಬೆಂಗ ಳೂರು ನಗರದಲ್ಲಿ ಓಲಾ, ಉಬರ್‌ ಮಾಲೀಕರು ಮತ್ತು ಚಾಲಕರ ಸಂಘ ಟನೆಗಳು, ಆಟೊ ರಿಕ್ಷಾ ಚಾಲಕರ ಕೆಲವು ಸಂಘಟನೆಗಳು ಬೆಂಬಲ ಪ್ರಕಟಿಸಿವೆ.

‘ಪ್ರಜಾವಾಣಿ’ ಜತೆ ಮಾತನಾಡಿದ ವಾಟಾಳ್‌ ನಾಗರಾಜ್‌, ‘ಬಂದ್‌ ಕರೆಗೆ ಕೆಲವು ಸಂಘಟನೆಗಳ ಬೆಂಬಲ ಇಲ್ಲ ಎಂಬುದು ನಿಜ. ಆದರೆ, ಈ ಬಾರಿ ಕನ್ನಡ ಬಾವುಟ ಸುಟ್ಟಿರು ವಂತಹ ವಿಚಾರವಿದೆ. ಹೀಗಾಗಿ ಜನ ಸಾಮಾನ್ಯರು ಒಕ್ಕೊರಲಿನಿಂದ ಬೆಂಬಲ ನೀಡುತ್ತಿದ್ದಾರೆ. ಬಂದ್‌ ಸಂಪೂರ್ಣ ಯಶಸ್ವಿಯಾಗುವುದರಲ್ಲಿ ಅನುಮಾನ ಬೇಡ’ ಎಂದರು.

ಬಂದ್‌ ಕೈಬಿಡಲು ಬೊಮ್ಮಾಯಿ ಮನವಿ

ಹುಬ್ಬಳ್ಳಿ: ‘ಜನ ಸಂಕಷ್ಟದಲ್ಲಿರುವುದರಿಂದ ಕರ್ನಾಟಕ ಬಂದ್ ಕೈ ಬಿಡಬೇಕು’ ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ‌ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಕನ್ನಡಪರ ಸಂಘಟನೆಗಳಿಗೆ ಮನವಿ ಮಾಡಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಬೊಮ್ಮಾಯಿ, ‘ಎಂಇಎಸ್ ವಿರುದ್ಧ ಈಗಾಗಲೇ ನಾವು ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ. ಆದ್ದರಿಂದ ಉದ್ದೇಶಿತ ಬಂದ್ ಕೈ ಬಿಡಬೇಕು. ಕೋವಿಡ್‌ನಿಂದ ಸಾಕಷ್ಟು ಸಮಸ್ಯೆ ಆಗಿದೆ. ಬಲವಂತದ ಬಂದ್‌ಗೆ ಮುಂದಾದರೆ ಅಲ್ಲಿಯೇ ಉತ್ತರ ನೀಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT