ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿಯ ಚಂದ್ರಂಪಳ್ಳಿಯಲ್ಲಿ ಜೆಎಲ್‌ಆರ್‌ ಹೋಟೆಲ್: ಸಚಿವ ಸಿ.ಪಿ. ಯೋಗೀಶ್ವರ್

ಪತ್ರಿಕಾಗೋಷ್ಠಿಯಲ್ಲಿ ಪ್ರವಾಸೋದ್ಯಮ
Last Updated 6 ಏಪ್ರಿಲ್ 2021, 10:26 IST
ಅಕ್ಷರ ಗಾತ್ರ

ಕಲಬುರ್ಗಿ: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದ ಬಳಿ ‘ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್‌’ (ಜೆಎಲ್‌ಆರ್‌)ನಿಂದ ಹೋಟೆಲ್ ನಿರ್ಮಿಸಲಾಗುವುದು. ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೀಶ್ವರ್ ಪ್ರಕಟಿಸಿದರು.

ಜಿಲ್ಲೆಯಲ್ಲಿರುವ ಪ್ರವಾಸೋದ್ಯಮದ ಅವಕಾಶಗಳು ಕುರಿತು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಚಂದ್ರಂಪಳ್ಳಿ ಹಾಗೂ ಆಳಂದ ತಾಲ್ಲೂಕಿನ ಅಮರ್ಜಾ ಬಳಿ ಜೆಎಲ್‌ಆರ್‌ ಹೋಟೆಲ್‌ಗಳನ್ನು ಆರಂಭಿಸುವ ಚಿಂತನೆ ಇದೆ. ಇದಕ್ಕಾಗಿ ಜೆಎಲ್‌ಆರ್‌ನ ತಂತ್ರಜ್ಞರ ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಅಲ್ಲದೇ, ಸೊನ್ನ ಭೀಮಾ ಬ್ಯಾರೇಜ್, ಹಿಪ್ಪರಗಿ, ಸರಡಗಿ ಬ್ರಿಜ್ ಕಂ ಬ್ಯಾರೇಜ್, ಬೋಸಗಾ ಕೆರೆ ಸೇರಿದಂತೆ ವಿವಿಧ ಜಲಮೂಲಗಳಲ್ಲಿ ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳನ್ನು ಆರಂಭಿಸುವಂತೆ ಶಾಸಕರು ಮನವಿ ಸಲ್ಲಿಸಿದ್ದಾರೆ. ವಂಡರ್‌ಲಾದಂತಹ ಖಾಸಗಿ ಜಲಕ್ರೀಡೆ ಸೌಕರ್ಯ ಕಲ್ಪಿಸುವ ಕಂಪನಿಗಳಿಗೆ ಈ ಸ್ಥಳಗಳಲ್ಲಿ ಪ್ರವಾಸಿಗರು ಬರುತ್ತಾರೆ ಎಂಬ ನಂಬಿಕೆ ಬರಬೇಕು. ಅಂದಾಗ ಮಾತ್ರ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಾರೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಅಂತಹ ಸ್ಥಳಗಳನ್ನು ಗುರುತಿಸಲಾಗುವುದು’ ಎಂದರು.

ಐದು ಎಕರೆಯಲ್ಲಿ ಹೆಲಿಪೋರ್ಟ್: ‘ಕಲಬುರ್ಗಿ ನಗರದ ಹೊರವಲಯದಲ್ಲಿ ವಿಮಾನ ನಿಲ್ದಾಣ ಆರಂಭವಾಗಿದ್ದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬಲ ಬಂದಿದೆ. ಹೀಗಾಗಿ, ಬೇರೆ ದೇಶ ಹಾಗೂ ರಾಜ್ಯಗಳಿಂದ ಬರುವ ಪ್ರವಾಸಿಗರಿಗಾಗಿ ಹೆಲಿಕಾಪ್ಟರ್ ಸೇವೆ ಒದಗಿಸಲು ಐದು ಎಕರೆ ಪ್ರದೇಶದಲ್ಲಿ ಹೆಲಿಪೋರ್ಟ್‌ ನಿರ್ಮಿಸಲಾಗುವುದು. ಇದಕ್ಕಾಗಿ ₹ 10 ಕೋಟಿ ಅನುದಾನ ಸಾಕಾಗುತ್ತದೆ. ಜಿಲ್ಲಾಡಳಿತದ ವಿಮಾನ ನಿಲ್ದಾಣದ ರಸ್ತೆಯಲ್ಲಿ ಹೆಲಿಪೋರ್ಟ್‌ಗೆ ಐದು ಎಕರೆ ಜಾಗ ಮಂಜೂರು ಮಾಡಬೇಕು’ ಎಂದರು.

ಹೋಟೆಲ್‌ ಉದ್ಯಮಕ್ಕೆ ಉತ್ತೇಜನ: ‘ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಬೇಕು ಎಂದರೆ ಅತ್ಯುತ್ತಮ ಹೋಟೆಲ್‌ಗಳ ವ್ಯವಸ್ಥೆ ಇರಬೇಕು. ಹೋಟೆಲ್ ಆರಂಭಿಸಲು ಮುಂದಾಗುವವರಿಗೆ ಇಲಾಖೆ ಶೇ 15ರಷ್ಟು ಆರ್ಥಿಕ ನೆರವು ನೀಡುತ್ತಿದೆ. ಕಲಬುರ್ಗಿ ಜಿಲ್ಲೆಯ ಜನಪ್ರತಿನಿಧಿಗಳ ಒತ್ತಾಸೆಯ ಮೇರೆಗೆ ನೆರವಿನ ಪ್ರಮಾಣವನ್ನು ಶೇ 25ಕ್ಕೆ ಹೆಚ್ಚಿಸಲು ತೀರ್ಮಾನಿಸಿದ್ದೇವೆ’ ಎಂದು ಯೋಗೀಶ್ವರ್ ಘೋಷಿಸಿದರು.

ಎಎಸ್‌ಐಗೆ ಹಸ್ತಾಂತರ: ‘ಚಿತ್ತಾಪುರ ತಾಲ್ಲೂಕಿನ ಐತಿಹಾಸಿನ ಸನ್ ನತಿಯಲ್ಲಿ ಉತ್ಖನನದ ಸಂದರ್ಭದಲ್ಲಿ ಸಿಕ್ಕಿರುವ ಪ್ರಾಚೀನ ಶಿಲಾಶಾಸನಗಳನ್ನು ಸಂರಕ್ಷಿಸಿಡಲು ನಿರ್ಮಿಸಿದ್ದ ಮ್ಯೂಸಿಯಂ ಕಟ್ಟಡವನ್ನು ಶೀಘ್ರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಯ ಎದುರಿಗೆ ಇರುವ ಮ್ಯೂಸಿಯಂಗೆ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಬಹಮನಿ ಕೋಟೆಯನ್ನು ಅತಿಕ್ರಮಣ ಮಾಡಿಕೊಂಡು ಅಲ್ಲಿಯೇ ವಾಸವಾಗಿರುವ ಜನರನ್ನು ತೆರವುಗೊಳಿಸಲು ರಂಜಾನ್ ಬಳಿಕ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆ ಬಳಿಕ ಕೋಟೆಗೆ ಪ್ರವಾಸಿಗರನ್ನು ಸೆಳೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಸಂಸದ ಡಾ. ಉಮೇಶ ಜಾಧವ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ, ಶಾಸಕರಾದ ಎಂ.ವೈ. ಪಾಟೀಲ, ಬಸವರಾಜ ಮತ್ತಿಮೂಡ, ಡಾ. ಅವಿನಾಶ್ ಜಾಧವ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿಲ್ಲಾ ಪಂಚಾಯಿತಿ ಸಿಇಓ ಡಾ. ದಿಲೀಷ್ ಸಾಸಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ವೇದಿಕೆಯಲ್ಲಿದ್ದರು.

ವಿಮಾನ ನಿಲ್ದಾಣದಲ್ಲಿ ಪ್ರವಾಸಿ ತಾಣಗಳ ಮಾಹಿತಿ

ಜಿಲ್ಲೆಯಲ್ಲಿರುವ ಐತಿಹಾಸಿಕ, ಪಾರಂಪರಿಕ ಹಾಗೂ ಧಾರ್ಮಿಕ ತಾಣಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆಯಿಂದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಕೇಂದ್ರ ಬಸ್ ನಿಲ್ದಾಣದಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್‌ಕುಮಾರ್ ಪಾಂಡೆ ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ವಿಮಾನ ನಿಲ್ದಾಣದಲ್ಲಿ ಕೆಲವೇ ದಿನಗಳಲ್ಲಿ ಮಾಹಿತಿ ಫಲಕ ಬರಲಿದೆ. ಉಳಿದ ಸ್ಥಳಗಳಲ್ಲಿಯೂ ಫಲಕಗಳನ್ನು ಅಳವಡಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ’ ಎಂದರು.

ಮೈಸೂರಲ್ಲಿ ಕುಳಿತರೆ ಹೇಗೆ?

ಕಲಬುರ್ಗಿಯ ಜಿಮ್ಸ್ ಎದುರಿನ ರಾಜ್ಯ ಪುರಾತತ್ವ ಇಲಾಖೆಯ ಮ್ಯೂಸಿಯಂ ಅವ್ಯವಸ್ಥೆಯ ಕುರಿತು ಪತ್ರಕರ್ತರು ಪ್ರಸ್ತಾಪಿಸಿದಾಗ ಪತ್ರಿಕಾಗೋಷ್ಠಿಯಲ್ಲೇ ಇಲಾಖೆಯ ಅಧಿಕಾರಿ ಪೂರ್ಣಿಮಾ ಅವರಿಗೆ ಕರೆ ಮಾಡಿ, ‘ಮೈಸೂರಿನಲ್ಲೇ ಕುಳಿತು ಕಲಬುರ್ಗಿಯ ಮ್ಯೂಸಿಯಂ ಬಗ್ಗೆ ಮಾಹಿತಿ ಇಲ್ಲ ಎಂದರೆ ಹೇಗೆ? ಇಲ್ಲಿಗೆ ಭೇಟಿ ಕೊಟ್ಟು ಸರಿಯಾಗಿ ನಿರ್ವಹಣೆ ಆಗುವಂತೆ ನೋಡಿಕೊಳ್ಳಿ. ಇಲ್ಲಿ ಪತ್ರಕರ್ತರು ನಿಮ್ಮ ಅಧೀನದಲ್ಲಿರುವ ಮ್ಯೂಸಿಯಂಗಳ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ನನಗೆ ಉತ್ತರಿಸಲು ಆಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT