ಮಂಗಳವಾರ, ಮೇ 18, 2021
30 °C
ಭಾನುವಾರ 2,500 ಬಸ್‌ಗಳ ಸಂಚಾರ

ಮುಷ್ಕರ ಬಿಟ್ಟರಷ್ಟೇ ವರ್ಗ, ಕೆಲಸಕ್ಕೆ ಬರದಿದ್ದರೆ ವೇತನ ಕಡಿತ: ಬಿ.ಎಸ್.ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮುಷ್ಕರ ನಿರತ ಸಾರಿಗೆ ನಿಗಮಗಳ ನೌಕರರನ್ನು ಮಣಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಈ ವರ್ಷವಷ್ಟೇ ಜಾರಿಗೊಳಿಸಿರುವ ಅಂತರ ನಿಗಮ ವರ್ಗಾವಣೆ ಸೌಲಭ್ಯಕ್ಕೆ ಕತ್ತರಿ ಹಾಕುವ ಅಸ್ತ್ರ ಪ್ರಯೋಗಿಸಿದೆ. ನೌಕರರೂ ಹಿಂದಡಿಯಿಡಲು ನಿರಾಕರಿಸಿದ್ದು, ಸೋಮವಾರ ರಾಜ್ಯದಾದ್ಯಂತ ತಟ್ಟೆ, ಲೋಟ ಬಡಿದು ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ಐದು ದಿನ ಕಳೆದರೂ ನೌಕರರು ಮತ್ತು ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಸೋಮವಾರ ರಾಜ್ಯದಾದ್ಯಂತ ಪ್ರತಿಭಟನಾ ಪ್ರದರ್ಶನಕ್ಕೆ ನೌಕರರು ಮುಂದಾಗಿದ್ದಾರೆ. ಮುಷ್ಕರ ಬೆಂಬಲಿಸದ ನೌಕರರ ಜತೆಗೆ ನಿವೃತ್ತರು, ಗುತ್ತಿಗೆ ಆಧಾರದಲ್ಲಿ ಬರುತ್ತಿರುವವರ ಸೇವೆ ಬಳಸಿಕೊಂಡಿರುವ ಸಾರಿಗೆ ನಿಗಮಗಳು ಭಾನುವಾರ 2,500 ಬಸ್‌ ಓಡಿಸಿವೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ಮುಷ್ಕರದಲ್ಲಿ ಭಾಗಿಯಾಗಿರುವ ನೂರಾರು ನೌಕರರನ್ನು ವರ್ಗಾವಣೆಗೊಳಿಸಿ ಶುಕ್ರವಾರ ಮತ್ತು ಶನಿವಾರ ಆದೇಶ ಹೊರಡಿಸಿದ್ದವು.

ಈ ಎಲ್ಲರೂ ವರ್ಗಾವಣೆಗೊಂಡಿರುವ ಸ್ಥಳದಲ್ಲಿ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ ಜರುಗಿಸುವುದಾಗಿ ಭಾನುವಾರ ಎಚ್ಚರಿಕೆ ನೀಡಲಾಗಿದೆ.

ಮುಷ್ಕರದಲ್ಲಿ ಭಾಗಿಯಾಗಿರುವ ನೌಕರರು ಅಂತರ ನಿಗಮಗಳ ವರ್ಗಾವಣೆಗೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ತಿರಸ್ಕರಿಸಲು ಸಾರಿಗೆ ನಿಗಮಗಳು ನಿರ್ಧರಿಸಿವೆ. ಈ ಎಲ್ಲರನ್ನೂ ಅಂತರ ನಿಗಮಗಳ ವರ್ಗಾವಣೆ ಪ್ರಕ್ರಿಯೆಯಿಂದ ಹೊರಗಿಡಲಾಗುವುದು ಎಂದು ಪ್ರಕಟಿಸಲಾಗಿದೆ.

‘ಮುಷ್ಕರದಲ್ಲಿ ಭಾಗಿಯಾಗಿರುವ ನೌಕರರು ಅಂತರ ನಿಗಮಗಳ ವರ್ಗಾವಣೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸದೇ ಇರಲು ತೀರ್ಮಾನಿಸಲಾಗಿದೆ. ಈಗಾಗಲೇ ಕೋರಿಕೆಯ ಮೇರೆಗೆ ಅಂತರ ವಿಭಾಗ ವರ್ಗಾಗಣೆ ಪಡೆದುಕೊಂಡು ಕೆಲಸ ಮಾಡುತ್ತಿರುವವರು ತಕ್ಷಣ ಕೆಲಸಕ್ಕೆ ಹಾಜರಾಗದಿದ್ದರೆ ಅವರ ವರ್ಗಾವಣೆ ಆದೇಶ ರದ್ದುಪಡಿಸಲಾಗುವುದು’ ಎಂದು ಅಂತರ ನಿಗಮ ವರ್ಗಾವಣೆ ಉಸ್ತುವಾರಿ ಸಮಿತಿ ಅಧ್ಯಕ್ಷರೂ ಆಗಿರುವ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದ್ದಾರೆ.

ಮತ್ತಷ್ಟು ಮಂದಿ ವಜಾ: ಮುಷ್ಕರದಲ್ಲಿ ಭಾಗಿಯಾಗಿರುವ ಟ್ರೈನಿ ಮತ್ತು ಪ್ರೊಬೇಷನರಿ ನೌಕರರನ್ನು ಕೆಲಸದಿಂದ ವಜಾಗೊಳಿಸುವ ಪ್ರಕ್ರಿಯೆಯನ್ನು ಸಾರಿಗೆ ನಿಗಮಗಳು ಮುಂದುವರಿಸಿವೆ.  62 ಟ್ರೈನಿ ಮತ್ತು 60 ಪ್ರೊಬೇಷನರಿ ಸಿಬ್ಬಂದಿಯನ್ನು ವಜಾಗೊಳಿಸಿ ಬಿಎಂಟಿಸಿ ಭಾನುವಾರ ಆದೇಶ ಹೊರಡಿಸಿದೆ. ಇತರ ಮೂರು ನಿಗಮಗಳೂ ಕೆಲವು ನೌಕರರನ್ನು ಕೆಲಸದಿಂದ ವಜಾಗೊಳಿಸಿವೆ.

ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಅಡ್ಡಿಪಡಿಸುವ ನೌಕರರ ವಿರುದ್ಧ ಸಾರಿಗೆ ನಿಗಮಗಳಿಂದಲೇ ದೂರು ದಾಖಲಿಸುವ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಭಾನುವಾರ ವಿಜಯಪುರದಲ್ಲಿ ಆರು ಹಾಗೂ ಮೈಸೂರಿನಲ್ಲಿ ಇಬ್ಬರು ನೌಕರರನ್ನು ಬಂಧಿಸಲಾಗಿದೆ.

2,500 ಬಸ್‌ ಸಂಚಾರ: ನಾಲ್ಕು ನಿಗಮಗಳಲ್ಲಿ ಒಟ್ಟು 10,000 ನೌಕರರು ಭಾನುವಾರ ಕೆಲಸಕ್ಕೆ ಹಾಜರಾಗಿದ್ದಾರೆ. ಒಂದೇ ದಿನ 2,500ಕ್ಕೂ ಹೆಚ್ಚು ಬಸ್‌ಗಳು ಸಂಚಾರ ನಡೆಸಿವೆ. ಸೋಮವಾರ ಈ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಂಗಳೂರು ಘಟಕ–2ರಲ್ಲಿ ಎಲ್ಲ ಬಸ್‌ಗಳನ್ನೂ ಓಡಿಸಲಾಗಿದೆ. ಮೈಸೂರು ನಗರ ಸಾರಿಗೆಯ ಎಲ್ಲ ಬಸ್‌ಗಳೂ ಭಾನುವಾರ ಸಂಚಾರ ಮಾಡಿವೆ ಎಂದು ತಿಳಿಸಿದ್ದಾರೆ.

ಪಾಸ್‌ಗಳ ಅವಧಿ ವಿಸ್ತರಣೆ:

ಮುಷ್ಕರಕ್ಕೆ ಸರಿಸಮನಾಗಿ ವಿದ್ಯಾರ್ಥಿ ಬಸ್‌ ಪಾಸ್‌ ಮತ್ತು ಮಾಸಿಕ ಬಸ್‌ ಪಾಸ್‌ಗಳ ಅವಧಿಯನ್ನು ವಿಸ್ತರಣೆ ಮಾಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದ್ದಾರೆ.

ಮುಷ್ಕರ ನಿಲ್ಲುವುದಿಲ್ಲ: ಕೋಡಿಹಳ್ಳಿ ಚಂದ್ರಶೇಖರ್‌

ಬೆಂಗಳೂರು: ಉಪ ಚುನಾವಣೆಯಲ್ಲಿ ಮುಳುಗಿರುವ ರಾಜ್ಯ ಸರ್ಕಾರಕ್ಕೆ ಸಾರಿಗೆ ನಿಗಮಗಳ ನೌಕರರ ಸಮಸ್ಯೆ ಕಾಣಿಸುತ್ತಿಲ್ಲ. ನೌಕರರ ಬೇಡಿಕೆ ಇತ್ಯರ್ಥವಾಗುವವರೆಗೂ ಮುಷ್ಕರ ನಿಲ್ಲುವುದಿಲ್ಲ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದರು.

ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಹಾಗೂ ಇತರ ಕೆಲವು ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಭಾನುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೋಮವಾರ ಎಲ್ಲ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಕಚೇರಿ ಎದುರು ಸಾರಿಗೆ ನೌಕರರು ಕುಟುಂಬ ಸಮೇತರಾಗಿ ಬಂದು ತಟ್ಟೆ, ಲೋಟ ಬಡಿದು ಪ್ರತಿಭಟನೆ ನಡೆಸುತ್ತಾರೆ’ ಎಂದರು.

ಕೊರೊನಾ ವೈರಸ್‌ ಓಡಿಸಲು ತಟ್ಟೆ, ಲೋಟ ಬಾರಿ ಪ್ರಧಾನಿ ನರೇಂದ್ರ ಮೋದಿಯೇ ಕರೆ ನೀಡಿದ್ದರು. ಈಗ ಕೋವಿಡ್‌ ಹೆಸರಿನಲ್ಲಿ ಪ್ರತಿಭಟನೆಗೆ ಅಡ್ಡಿಪಡಿಸುತ್ತಿದ್ದಾರೆ. ಉಪ ಚುನಾವಣೆ ಪ್ರಚಾರಕ್ಕೆ ಹೋಗಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಅವರ ಸಂಪುಟದ ಸದಸ್ಯರಿಗೆ ಕೋವಿಡ್‌ ಮಾರ್ಗಸೂಚಿ ಅನ್ವಯಿಸುವುದಿಲ್ಲ. ಹೋರಾಟಕ್ಕೆ ಇಳಿಯುವ ರೈತರು, ಕಾರ್ಮಿಕರು ಮತ್ತು ದಲಿತರಿಗೆ ಮಾತ್ರ ಮಾರ್ಗಸೂಚಿಯೇ ಎಂದು ಪ್ರಶ್ನಿಸಿದರು.

ಕೆಲಸಕ್ಕೆ ಬರದಿದ್ದರೆ ವೇತನ ಕಡಿತ: ಸಿ.ಎಂ

ಮುದಗಲ್‌ (ರಾಯಚೂರು ಜಿಲ್ಲೆ): ‘ಸಾರಿಗೆ ನೌಕರರು ಕೂಡಲೇ ಕರ್ತವ್ಯಕ್ಕೆ ಹಾಜರಾಗದಿದ್ದರೆ ವೇತನ ಕಡಿತ ಮಾಡುವುದರ ಜತೆಗೆ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಎಚ್ಚರಿಕೆ ನೀಡಿದರು.

‘ಮುಷ್ಕರಕ್ಕೆ ಸಂಬಂಧಿಸಿದಂತೆ ಯಾರನ್ನೂ ಮಾತುಕತೆಗೆ ಕರೆಯುವುದಿಲ್ಲ. ರಾಜಿಯೂ ಮಾಡಿಕೊಳ್ಳುವುದಿಲ್ಲ. ನೌಕರರು ಗೌರವದಿಂದ ಕೆಲಸಕ್ಕೆ ಹಾಜರಾಗಬೇಕು. ಸಾರಿಗೆ ಅವ್ಯವಸ್ಥೆಯಿಂದ ಮುಂದಾಗುವ ಅನಾಹುತಗಳಿಗೆ ಅವರೇ ಹೊಣೆಯಾಗುತ್ತಾರೆ’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು