ಗುರುವಾರ , ಅಕ್ಟೋಬರ್ 29, 2020
26 °C
‘ಒಂದೆಡೆ’ ಸಂಘಟನೆಯ ಸಂಸ್ಥಾಪಕಿ ಅಕ್ಕೈ ಪದ್ಮಶಾಲಿ ಕಾಂಗ್ರೆಸ್‌ ಸೇರ್ಪಡೆ

ನಾಯಕರ ಸುತ್ತ ಗಿರಕಿ ಹೊಡೆದರೆ ನಾಯಕರಾಗಲ್ಲ: ಡಿ.ಕೆ. ಶಿವಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆ 'ಒಂದೆಡೆ'ಯ ಸಂಸ್ಥಾಪಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾದರು

ಬೆಂಗಳೂರು: ‘ತಳಮಟ್ಟದಲ್ಲಿ ಕೆಲಸ ಮಾಡುವವರು ಪಕ್ಷಕ್ಕೆ ಬೇಕಾಗಿದೆ. ಅಂಥವರು ಮಾತ್ರ ನಾಯಕರಾಗಲು ಸಾಧ್ಯ. ನಾಯಕರ ಸುತ್ತ ಗಿರಕಿ ಹೊಡೆಯುವವರು ಎಂದೂ ನಾಯಕರಾಗಲು ಸಾಧ್ಯ ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆ 'ಒಂದೆಡೆ'ಯ ಸಂಸ್ಥಾಪಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಅವರು ಮಾತನಾಡಿದರು.

‘ಅಕ್ಕೈ ಅವರನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪಕ್ಷ ಬಳಸಿಕೊಳ್ಳಲಿದೆ. ಅವರು ರಾಜ್ಯ ಕಾಂಗ್ರೆಸ್ಸಿನ ಆಸ್ತಿ ಅಲ್ಲ, ದೇಶದ ಆಸ್ತಿ. ಪಕ್ಷಕ್ಕೆ ಅವರ ಸೇರ್ಪಡೆ ಸಕಾರಾತ್ಮಕ ಲಕ್ಷಣ. ಅವರ ಹೋರಾಟವನ್ನು ಪಕ್ಷ ಬೆಂಬಲಿಸಲಿದೆ’ ಎಂದೂ ಹೇಳಿದರು.

‘5–6 ತಿಂಗಳ ಹಿಂದೆಯೇ ಮಹಿಳಾ ಮುಖಂಡರ ಸಭೆ ಮಾಡಬೇಕಾಗಿತ್ತು. ಆದರೆ, ಕೊರೊನಾದಿಂದ ಸಾಧ್ಯವಾಗಿರಲಿಲ್ಲ. ಮಹಿಳಾ ಹೋರಾಟಗಾರರು, ಪುರುಷರ ಸಮಕಾಲೀನರಾಗಿ ಕೆಲಸ ಮಾಡಬೇಕು. ಮಹಿಳಾ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಸೆಳೆಯುವ ಕೆಲಸ ಆಗಬೇಕು. ಅಕ್ಕೈ ಪದ್ಮಶಾಲಿ ಅವರು ಕಾಂಗ್ರೆಸ್ ಸೇರಲು ಇಚ್ಚೆ ವ್ಯಕ್ತಪಡಿಸಿದ್ದರು’ ಎಂದರು.

ಮೊಟಕುಗೊಳಿಸಲು ಬಿಡುವುದಿಲ್ಲ: ‘ನನಗೆ ಮತ್ತು ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಶನಿವಾರ ಕರೆ ಮಾಡಿ, ಕೊರೊನಾ ಹರಡುತ್ತಿರುವ ಕಾರಣ ಮೂರು ದಿನಗಳಿಗೆ ವಿಧಾನಮಂಡಲ ಅಧಿವೇಶನ ಮೊಟಕುಗೊಳಿಸುತ್ತೇವೆ ಎಂದರು. ಆದರೆ, ಮೊಟಕುಗೊಳಿಸಲು ನಾವು ಬಿಡುವುದಿಲ್ಲ’ ಎಂದು ಶಿವಕುಮಾರ್ ಹೇಳಿದರು.

‘ಅಧಿವೇಶನ ಬೇಗ ಮುಗಿಸುವಂತೆ ಪ್ರಧಾನಿ ಸೂಚಿಸಿದ್ದಾರೆಂದು ಮುಖ್ಯಮಂತ್ರಿ ಹೇಳಿದರು. ಸಹಕಾರ ಕೊಡಬೇಕು ಎಂದೂ ಮನವಿ ಮಾಡಿದರು. ಮುಖ್ಯಮಂತ್ರಿ ಕರೆ ಮಾಡಿ ಮಾತನಾಡಿದ್ದೇ ತಪ್ಪು. ಇನ್ನೂ ಒಂದಷ್ಟು ದಿನ ಸದನ ಮುಂದುವರೆಸುವಂತೆ ನಾವು ಒತ್ತಾಯಿಸುತ್ತೇವೆ’ ಎಂದರು.

‘ಪ್ರಜಾಪ್ರಭುತ್ವ ಮುಗಿಸಲು ಬಿಜೆಪಿ ಹೊರಟಿದೆ. ರಾಜ್ಯದಲ್ಲಿ ಬರ, ನೆರೆ ಕಾನೂನು ಸುವ್ಯವಸ್ಥೆ ಹದೆಗಟ್ಟಿದೆ. ಕೇಂದ್ರ ಪರಿಹಾರ ಕೊಡುತ್ತಿಲ್ಲ. ಈ ಎಲ್ಲ ವಿಷಯದ ಚರ್ಚೆ ಮಾಡಬೇಕಿದೆ. ಸರ್ಕಾರದಲ್ಲಿ ನಡೆದಿರುವ ಭಾರಿ ಭ್ರಷ್ಟಾಚಾರಕ್ಕೆ ನಮ್ಮ ಸಹಕಾರ ಇಲ್ಲ. ಸದನ ನಡೆಸಿದರೆ ಬಿಜೆಪಿಯವರ ಭ್ರಷ್ಟಾಚಾರಗಳೆಲ್ಲ ಹೊರಗೆ ಬರಲಿದೆ. ಅವರು ಸಿಕ್ಕಿ ಹಾಕಿಕೊಂಡಿದ್ದಾರೆ. ಹೀಗಾಗಿ ಸದನ ನಡೆಸುವುದು ಬೇಡ ಎಂಬ ಚಿಂತನೆಯಲ್ಲಿದ್ದಾರೆ’ ಎಂದರು.

‘ಪ್ರಪಂಚದಲ್ಲಿ ಚರಿತ್ರೆ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದವರು, ಒಂದು ವಾರಕ್ಕೆ ಕೋವಿಡ್ ಕೇರ್ ಸೆಂಟರ್ ಮುಚ್ಚಿದ್ದಾರೆ. ಈ ವಿಷಯವನ್ನೂ ನಾವು ಸದನದಲ್ಲಿ ಚರ್ಚೆ ಮಾಡಬೇಕಿದೆ.’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕಿಯರಾದ ಅಂಜಲಿ ನಿಂಬಾಳ್ಕರ್, ಲಕ್ಷ್ಮೀ ಹೆಬ್ಬಾಳ್ಕರ್, ಸೌಮ್ಯಾ ರೆಡ್ಡಿ, ಮಾಜಿ ಸಚಿವೆ ಉಮಾಶ್ರೀ, ಜಯಮಾಲಾ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು