ಸೋಮವಾರ, ನವೆಂಬರ್ 29, 2021
20 °C

dnp ನವರಾತ್ರಿಗೂ ಸಾರಿಗೆ ನೌಕರರಿಗೆ ವೇತನ ಅನುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ಸಾರಿಗೆ ಸಂಸ್ಥೆಗಳಲ್ಲಿ ನೌಕರರಿಗೆ ಸಂಬಳ ಕೊಡುವಷ್ಟು ವರಮಾನ  ಇನ್ನೂ ಸಂಗ್ರಹವಾಗುತ್ತಿಲ್ಲ. ವೇತನಕ್ಕೆ ಅನುದಾನ ಕೋರಿರುವ ಪ್ರಸ್ತಾವನೆ ಹಣಕಾಸು ಇಲಾಖೆಯಲ್ಲೇ ಬಾಕಿ ಇದ್ದು, ನವರಾತ್ರಿ ಹಬ್ಬವನ್ನು ನೌಕರರು ಬರಿಗೈನಲ್ಲೇ ಬರಮಾಡಿಕೊಳ್ಳಬೇಕಾದ ಸ್ಥಿತಿ ಇದೆ.

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರತಿನಿತ್ಯ ಪ್ರಯಾಣಿಕರ ಸಂಖ್ಯೆ ಕೋವಿಡ್‌ ‍ಪೂರ್ವದಲ್ಲಿ 30 ಲಕ್ಷ ಇತ್ತು. ದಿನದ ವರಮಾನ ₹ 9.50 ಕೋಟಿ ಇತ್ತು. ಸದ್ಯ ಪ್ರಯಾಣಿಕರ ಸಂಖ್ಯೆ ಸರಾಸರಿ 19 ಲಕ್ಷ ಇದ್ದರೆ, ವರಮಾನ ₹6.50 ಕೋಟಿ ಇದೆ.

ಬಿಎಂಟಿಸಿ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಕೋವಿಡ್‌ ಪೂರ್ವದಲ್ಲಿ ಪ್ರತಿದಿನ ಸರಾಸರಿ 40 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ₹3.5 ಕೋಟಿ ವರಮಾನ ಸಂಗ್ರಹ ಆಗುತ್ತಿತ್ತು. ಈಗ ಪ್ರಯಾಣಿಕರ ಸಂಖ್ಯೆ 17 ಲಕ್ಷದಿಂದ 20 ಲಕ್ಷದ ತನಕ ಇದೆ. ವರಮಾನ ಸಂಗ್ರಹ ₹2.2 ಕೋಟಿಯಷ್ಟಿದೆ.

ದುಬಾರಿಯಾಗಿರುವ ಡೀಸೆಲ್ ವೆಚ್ಚ ಮತ್ತು ನಿರ್ವಹಣೆ ವೆಚ್ಚ ಸರಿದೂಗಿಸಿಕೊಳ್ಳಲು ಈ ವರಮಾನ ಸಾಕಾಗುತ್ತಿದೆ. ಎಲ್ಲ ನೌಕರರಿಗೂ ಸ್ವಂತ ಶಕ್ತಿಯಿಂದ ಸಂಬಳ ನೀಡುಷ್ಟು ವರಮಾನ ಬರುತ್ತಿಲ್ಲ ಎನ್ನುತ್ತಾರೆ ನಿಗಮಗಳ ಅಧಿಕಾರಿಗಳು.

ನೌಕರರ ವೇತನ ಪಾವತಿಸಲು ಸರ್ಕಾರದ ಮುಂದೆ ಅನುದಾನಕ್ಕೆ ಸಾರಿಗೆ ಸಂಸ್ಥೆಗಳು ಕೋರಿಕೆ ಸಲ್ಲಿಸಿವೆ. ಹಣಕಾಸು ಇಲಾಖೆಯ ಮುಂದೆ ಪ್ರಸ್ತಾವನೆ ಇದ್ದು, ಮುಖ್ಯಮಂತ್ರಿ ಅವರಿಂದ ಇನ್ನೂ ಅನುಮೋದನೆ ದೊರೆತಿಲ್ಲ.

‘ಹಣಕಾಸು ಇಲಾಖೆ ಜೊತೆ ಮಾತುಕತೆ ನಡೆಸಲಾಗಿದ್ದು, ಮುಖ್ಯಮಂತ್ರಿ ಅವರ ಗಮನಕ್ಕೂ ತರಲಾಗಿದೆ. ಸರ್ಕಾರದಿಂದ ಅನುದಾನ ದೊರೆಯುವ ನಿರೀಕ್ಷೆಯಲ್ಲಿದ್ದೇವೆ. ನವರಾತ್ರಿ ಹಬ್ಬಕ್ಕೂ ಮುನ್ನ ನೌಕರರಿಗೆ ಸಂಬಳ ನೀಡಲು ಪ್ರಯತ್ನಿಸಲಾಗುತ್ತಿದೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.