ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನೌಕರರ ಮುಷ್ಕರ: ದಿನಕ್ಕೊಂದು ಮಾದರಿ

Last Updated 30 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಏಪ್ರಿಲ್ 7ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿರುವ ಸಾರಿಗೆ ನೌಕರರು, ಏ. 1ರಿಂದಲೇ ದಿನಕ್ಕೊಂದು ರೀತಿಯಲ್ಲಿ ವಿಭಿನ್ನ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಏ.1ರಂದು ನೌಕರರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರು ಮತ್ತು ಸರ್ಕಾರದ ಗಮನ ಸೆಳೆಯಲಿದ್ದಾರೆ. ಏ.2ರಂದು ಸಾರ್ವಜನಿಕ ಪ್ರದೇಶಗಳಲ್ಲಿ ಕಾಫಿ, ಟೀ, ಬಜ್ಜಿ, ಬೋಂಡ ತಯಾರಿಸಿ ಮಾರಾಟ ಮಾಡಲಿದ್ದಾರೆ. 3ರಂದು ನೌಕರರು ಮತ್ತು ಕುಟುಂಬ ಸದಸ್ಯರು ಎಲ್ಲಾ ನಗರಗಳ ಮುಖ್ಯ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಭಿತ್ತಿ ಪತ್ರ ಪ್ರದರ್ಶನ ಮಾಡುವರು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ತಿಳಿಸಿದೆ.

‘ಏ.4ರಂದು ಸಾರ್ವಜನಿಕರಿಗೆ ಕರಪತ್ರ ಹಂಚುವುದು, ಫೇಸ್‌ಬುಕ್, ಟ್ವಿಟರ್ ಅಭಿಯಾನ ನಡೆಸಲಾಗುವುದು. 5ರಂದು ಧರಣಿ ಸತ್ಯಾಗ್ರಹ, 6ರಂದು ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸಲಾಗುವುದು’ ಎಂದು ಕೂಟದ ಅಧ್ಯಕ್ಷ ಆರ್. ಚಂದ್ರಶೇಖರ್ ವಿವರಿಸಿದ್ದಾರೆ.

‘ಬೇಡಿಕೆಗಳನ್ನು ಈಡೇರಿಸಿದ್ದೇವೆ ಎಂದು ಸರ್ಕಾರ ಬಿಂಬಿಸುತ್ತಿದೆ. ಆದರೆ, ಆರನೇ ವೇತನ ಆಯೋಗದ ಶಿಫಾರಸು ಬಗ್ಗೆ ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಸಾರಿಗೆ ನೌಕರರಿಗೆ ಸರ್ಕಾರಿ ಶಿಕ್ಷಕರಂತೆ ಅಂತರ ನಿಗಮ ವರ್ಗಾವಣೆ ಪದ್ಧತಿ ಜಾರಿಗೆ ತರಬೇಕು ಎಂಬ ಬೇಡಿಕೆಗೆ ಹಲವು ನಿಬಂಧನೆಗಳನ್ನು ಹೇರಿ ಶೇ 2ರಷ್ಟು ಮಾತ್ರ ವರ್ಗಾವಣೆಗೆ ಅವಕಾಶ ನೀಡಲಾಗಿದೆ. ಬಾಟಾ, ಭತ್ಯೆ ಮತ್ತು ಓಟಿ ನೀಡುವ ಭರವಸೆ ಹಳೇ ಪದ್ಧತಿಯಲ್ಲೇ ಮುಂದುವರಿದಿದೆ. ಎನ್‌ಐಎನ್‌ಸಿ ರದ್ದು ಮಾಡುವ ಭರ
ವಸೆ ಈಡೇರಿಲ್ಲ. ಎಚ್‌ಆರ್‌ಎಂಎಸ್ ಪದ್ಧತಿ ಇನ್ನೂ ಜಾರಿಯಾಗಿಲ್ಲ’ ಎಂದು ವಿವರಿಸಿದ್ದಾರೆ.

‘ವೇತನ ಪರಿಷ್ಕರಿಸಿದರೆ ಮುಷ್ಕರ ವಾಪಸ್’

‘ಆರನೇ ವೇತನ ಆಯೋಗದ ಶಿಫಾರಸಗಳನ್ನು 2020ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಆದೇಶ ಹೊರಡಿಸಿದರೆ ಮುಷ್ಕರ ವಾಪಸ್ ಪಡೆಯುತ್ತೇವೆ. ಇಲ್ಲದಿದ್ದರೆ ಎಸ್ಮಾ ಜಾರಿಗೂ ಹೆದರದೆ ಮುಷ್ಕರ ನಡೆಸುತ್ತೇವೆ. ಸಾರ್ವಜನಿಕರಿಗೆ ಆಗುವ ತೊಂದರೆಗೆ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ’ ಎಂದುಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT