ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನೌಕರರ ದಿಢೀರ್ ಮುಷ್ಕರಕ್ಕೆ ನಲುಗಿದ ಕರ್ನಾಟಕ; ಇಂದೂ ಬಸ್ ಬಂದ್‌ ?

Last Updated 11 ಡಿಸೆಂಬರ್ 2020, 20:39 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರ ದಿಢೀರ್ ತೀವ್ರ ಸ್ವರೂಪಕ್ಕೆ ತಿರುಗಿದ್ದರಿಂದಾಗಿ ಶುಕ್ರವಾರ ರಾಜ್ಯದ ಬಹುತೇಕ ಕಡೆ ಸಂಚಾರ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿತು.

ಬೇಡಿಕೆ ಈಡೇರಿಸುವವರೆಗೂ ಮುಷ್ಕರ ನಿಲ್ಲಿಸುವುದಿಲ್ಲ ಎಂದು ನೌಕರರು ಪಟ್ಟುಹಿಡಿದಿದ್ದು, ಶನಿವಾರ ಕೂಡ ಇದರ ‌ಬಿಸಿ ಸರ್ಕಾರ ಮತ್ತು ಜನಸಾಮಾನ್ಯರನ್ನು ಕಾಡುವ ಸಾಧ್ಯತೆ ಇದೆ.

ನೆರೆ ರಾಜ್ಯಗಳಂತೆ ರಾಜ್ಯದ ಸಾರಿಗೆ ನಿಗಮಗಳ ನೌಕರರನ್ನೂ ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂಬ ಬೇಡಿಕೆಯೊಂದಿಗೆ ನೌಕರರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಆದರೆ, ಗುರುವಾರ ವಿಧಾನಸೌಧಕ್ಕೆ ನಡೆಸಿದ ಕಾಲ್ನಡಿಗೆ ಜಾಥಾ ಹೋರಾಟದ ದಿಕ್ಕನ್ನೇ ಬದಲಿಸಿತು. ಜಾಥಾ ನಡೆಸುತ್ತಿದ್ದ ಸಾರಿಗೆ ನೌಕರರ ಮುಖಂಡರನ್ನು ಬಂಧಿಸಿದ್ದು, ನೌಕರರ ಹೋರಾಟದ ಕಾವು ಹೆಚ್ಚಿಸಿತು.

ಮುಖಂಡರ ಬಂಧನ ಸುದ್ದಿ ನೌಕರರ ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ಹರಿದಾಡಿ ಆಕ್ರೋಶಕ್ಕೆ ಕಾರಣವಾಯಿತು. ಶುಕ್ರವಾರ ಬೆಳಿಗ್ಗೆ ಡಿಪೋಗಳಿಗೆ ಬಂದ ನೌಕರರು ಬಸ್‌ ಹೊರಕ್ಕೆ ತೆಗೆಯದೆ ಮುಷ್ಕರ ಆರಂಭಿಸಿದರು. ಬಸ್ ಚಾಲನೆ ಮಾಡಲು ಹೊರಟ ನೌಕರರನ್ನೂ ತರಾಟೆಗೆ ತೆಗೆದುಕೊಂಡು ಬಸ್ ಸಂಚಾರ ತಡೆದರು. ಕೆಲವೆಡೆ ಕಲ್ಲು ತೂರಿದರು.

ಸಾರಿಗೆ ನೌಕರರ ದಿಢೀರ್ ಮುಷ್ಕರದ ಅರಿವಿಲ್ಲದ ಲಕ್ಷಾಂತರ ಪ್ರಯಾಣಿಕರು ರಸ್ತೆಯಲ್ಲಿ ಪರದಾಡಿದರು. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳಿಗಾಗಿ ಜನಗಂಟೆಗಟ್ಟಲೆ ಕಾದು ಕುಳಿತಿದ್ದರು. ವಿಧಿ ಇಲ್ಲದೆ ಆಟೋರಿಕ್ಷಾ ಮತ್ತು ಟ್ಯಾಕ್ಸಿಗಳನ್ನು ಏರಿ ಪ್ರಯಾಣ ಮಾಡಿದರು.

ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸಭೆಗಳ ಮೇಲೆ ಸಭೆ ನಡೆಸಿದರೂ ಪರಿಹಾರ ಮಾರ್ಗ ಕಾಣಿಸಲಿಲ್ಲ. ಹೀಗಾಗಿ, ಶನಿವಾರವೂ ಮುಷ್ಕರ ಮುಂದುವರಿಯುವ ಸಾಧ್ಯತೆ ಇದೆ.

‘ನೌಕರರನ್ನು ಕರೆದು ಮಾತುಕತೆ ನಡೆಸುವ ಬದಲು ಬೇರೆ ಯಾರನ್ನೋ ಕರೆದು ಸರ್ಕಾರ ಸಭೆ ನಡೆಸಿದೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಭರವಸೆ ನೀಡುವ ತನಕ ಹೋರಾಟ ಮುಂದುವರಿಯಲಿದೆ’ ಎಂದು ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.

ಬಹುತೇಕ ಕಡೆ ಬೆಂಬಲ: ರಾಜ್ಯದಲ್ಲಿ ಮಂಗಳೂರು ವಿಭಾಗ ಹೊರತುಪಡಿಸಿ ಬಹುತೇಕ ಕಡೆ ಸಾರಿಗೆ ನಿಗಮಗಳ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕಲಬುರ್ಗಿ, ಕೋಲಾರ, ಮೈಸೂರು, ಹುಬ್ಬಳ್ಳಿ ಭಾಗದಲ್ಲಿ ಸಾರಿಗೆ ನಿಗಮಗಳ ಬಸ್‌ಗಳ ಮೇಲೆ ಕಲ್ಲೆಸೆಯಲಾಗಿದೆ. ಮೈಸೂರಿನಲ್ಲಿ ಚಾಲಕರೊಬ್ಬರಿಗೆ ಪೆಟ್ಟಾಗಿದೆ.

ಬಿಎಂಟಿಸಿಯ ಶೇಕಡ 70ರಷ್ಟು ಮತ್ತು ಕೆಎಸ್‌ಆರ್‌ಟಿಸಿಯ ಶೇ 60ರಷ್ಟು ಬಸ್‌ಗಳ ಸಂಚಾರ ರದ್ದುಗೊಂಡಿತ್ತು. ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಶೇ 55ರಷ್ಟು ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ನಿಗಮದ ಶೇ 40ರಷ್ಟು ಬಸ್‌ಗಳ ಸಂಚಾರ ರದ್ದುಗೊಳಿಸಲಾಗಿತ್ತು.

ಎಸ್ಮಾ ಕಾಯ್ದೆಯ ಎಚ್ಚರಿಕೆ:ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದರೆ ಎಸ್ಮಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಬಿಎಂಟಿಸಿ ಎಚ್ಚರಿಕೆ ನೀಡಿದೆ.

ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುವುದು ಅಗತ್ಯ ಸೇವೆಗಳ ಕಾಯ್ದೆ ವ್ಯಾಪ್ತಿಯಲ್ಲಿದೆ. ವಾರದ ರಜೆ ಅಥವಾ ದೀರ್ಘಕಾಲದ ರಜೆಯಲ್ಲಿ ಇರುವ ನೌಕರರನ್ನು ಹೊರತುಪಡಿಸಿ ಉಳಿದವರು ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಅವರ ವಿರುದ್ಧ ಈ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಬಿಎಂಟಿಸಿ ಸುತ್ತೋಲೆ ಹೊರಡಿಸಿದೆ.

ಫಲ ಕೊಡದ ಮಾತುಕತೆ

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಎಐಟಿಯುಸಿ, ಸಿಐಟಿಯು, ಬಿಎಂಎಸ್‌ ಮತ್ತು ಮಹಾಮಂಡಲದ ಕಾರ್ಮಿಕ ಸಂಘಟನೆಗಳ ಮುಖಂಡರ ಜತೆ ಮಾತುಕತೆ ನಡೆಸಿ ಮುಷ್ಕರ ಕೈಬಿಡುವಂತೆ ಮನವೊಲಿಸಲು ಯತ್ನಿಸಿದರು.

ಎಐಟಯುಸಿ ಮುಖಂಡ ಅನಂತ ಸುಬ್ಬರಾವ್‌ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಸಾರಿಗೆ ನೌಕರರ ಕೂಟದ ಜತೆ ಮಾತುಕತೆ ನಡೆಸುವಂತೆ ಈ ಸಂಘಟನೆಗಳ ಪ್ರತಿನಿಧಿಗಳು ಸಚಿವರಿಗೆ ಸಲಹೆ ನೀಡಿದರು.

‘ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಕುರಿತು ಶೀಘ್ರದಲ್ಲಿ ಮುಖ್ಯಮಂತ್ರಿಯವರ ಜತೆ ಸಭೆ ಆಯೋಜಿಸಲಾಗುವುದು. ನೌಕರರ ಎಲ್ಲ ಬೇಡಿಕೆಗಳನ್ನೂ ಸರ್ಕಾರ ಸಹಾನುಭೂತಿಯಿಂದ ಪರಿಗಣಿಸಲಿದೆ. ನೌಕರರು ತಕ್ಷಣವೇ ಮುಷ್ಕರ ಕೈಬಿಡಬೇಕು‘ ಎಂದು ಸವದಿ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಸವದಿ, ಪರಿಸ್ಥಿತಿ ಹಾಗೂ ನೌಕರರ ಬೇಡಿಕೆಯನ್ನು ಅವರ ಗಮನಕ್ಕೆ ತಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT