ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರಕ್ಕೆ ಕನ್ನ ಹಾಕಿದ ಸಾಗಣೆ ಗುತ್ತಿಗೆದಾರ

ಎಫ್‌ಸಿಐ ಉಗ್ರಾಣಗಳಿಂದ ಕಾಳಸಂತೆಗೆ ಕಳ್ಳಸಾಗಣೆ ಮಾಡುತ್ತಿದ್ದ ಬೃಹತ್‌ ಜಾಲ ಪತ್ತೆ
Last Updated 28 ಸೆಪ್ಟೆಂಬರ್ 2021, 16:29 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಬಡ ಕುಟುಂಬಗಳಿಗೆ ಉಚಿತವಾಗಿ ವಿತರಿಸುವುದಕ್ಕಾಗಿ ಹಂಚಿಕೆ ಮಾಡುತ್ತಿರುವ ಆಹಾರ ಧಾನ್ಯವನ್ನು ಅಧಿಕೃತ ಸಾಗಣೆ ಗುತ್ತಿಗೆದಾರನ ನೇತೃತ್ವದಲ್ಲೇ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಉಗ್ರಾಣಗಳಿಂದ ನೇರವಾಗಿ ಕಾಳಸಂತೆಗೆ ಕದ್ದೊಯ್ಯುತ್ತಿದ್ದ ಬೃಹತ್‌ ಜಾಲವೊಂದನ್ನು ಆಹಾರ ಇಲಾಖೆಯ ರಾಜ್ಯ ಮಟ್ಟದ ತನಿಖಾ ದಳ ಪತ್ತೆಹಚ್ಚಿದೆ.

ಪಡಿತರ ಧಾನ್ಯದ ಸಗಟು ಸಾಗಣೆಯ ಗುತ್ತಿಗೆ ಪಡೆದಿರುವವರು, ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ (ಕೆಎಫ್‌ಸಿಎಸ್‌ಸಿ) ಉಗ್ರಾಣಗಳ ವ್ಯವಸ್ಥಾಪಕರು, ಪಡಿತರ ವಿತರಣೆಯ ಉಸ್ತುವಾರಿ ಹೊಂದಿರುವ ತಾಲ್ಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸೊಸೈಟಿಯ ನೌಕರರು ಕಾಳಸಂತೆಕೋರರ ಜತೆ ಕೈಜೋಡಿಸಿ ಆಹಾರ ಧಾನ್ಯಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ಬಯಲಿಗೆ ಬಂದಿದೆ. ಹಲವು ವರ್ಷಗಳಿಂದ ಮೂರು ಜಿಲ್ಲೆಯಲ್ಲಿ ಪಡಿತರ ಸಾಗಣೆ ಗುತ್ತಿಗೆ ಪಡೆದಿರುವ ವ್ಯಕ್ತಿಯೇ ಈ ತಂಡದಲ್ಲಿದ್ದು, ಸಾವಿರಾರು ಟನ್‌ಗಳಷ್ಟು ಆಹಾರ ಧಾನ್ಯವನ್ನು ಕಳ್ಳಸಾಗಣೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ನಗರದ ವೈಟ್‌ಫೀಲ್ಡ್‌ನಲ್ಲಿರುವ ಎಫ್‌ಸಿಐ ಉಗ್ರಾಣದಿಂದ 550 ಚೀಲ ಅಕ್ಕಿಯನ್ನು ತುಂಬಿಕೊಂಡು ಬೊಮ್ಮನಹಳ್ಳಿಯ ಕೆಎಫ್‌ಸಿಎಸ್‌ಸಿ ಉಗ್ರಾಣಕ್ಕೆ ಶುಕ್ರವಾರ ಹೊರಟಿದ್ದ ಲಾರಿ ನೇರವಾಗಿ ಮಂಡ್ಯಕ್ಕೆ ಹೋಗಿತ್ತು. ಸ್ಥಳೀಯರ ಮಾಹಿತಿ ಆಧರಿಸಿ ಲಾರಿಯನ್ನು ವಶಕ್ಕೆ ಪಡೆದ ಅಲ್ಲಿನ ಪೊಲೀಸರು, ಆಹಾರ ಇಲಾಖೆಯ ತನಿಖಾ ದಳಕ್ಕೆ ಮಾಹಿತಿ ನೀಡಿದ್ದರು.

ರಾಜ್ಯಮಟ್ಟದ ತನಿಖಾ ದಳದ ಮುಖ್ಯಸ್ಥ ಹಾಗೂ ಆಹಾರ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ ನೇತೃತ್ವದಲ್ಲಿ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಆಹಾರ ಇಲಾಖೆಯ ಮಂಡ್ಯ ಜಿಲ್ಲಾ ಜಂಟಿ ನಿರ್ದೇಶಕಿ ಸೌಮ್ಯಾ ಎ.ಜಿ. ನೀಡಿರುವ ದೂರನ್ನು ಆಧರಿಸಿ ಮಂಡ್ಯ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಸೋಮವಾರ ಎಫ್‌ಐಆರ್‌ ದಾಖಲಿಸಲಾಗಿದೆ.

‘ಮಂಡ್ಯದ ಸಾಂಜೋ ಆಸ್ಪತ್ರೆ ಬಳಿ ವಶಪಡಿಸಿಕೊಂಡ ಲಾರಿಯಲ್ಲಿ 264.14 ಕ್ವಿಂಟಲ್‌ ಪಡಿತರ ಅಕ್ಕಿ ಪತ್ತೆಯಾಗಿದೆ. ಇದನ್ನು ವೈಟ್‌ಫೀಲ್ಡ್‌ ಎಫ್‌ಸಿಐ ಉಗ್ರಾಣದಿಂದ ಕೆಫ್‌ಸಿಎಸ್‌ಸಿ ಬೊಮ್ಮನಹಳ್ಳಿಯ ಉಗ್ರಾಣಕ್ಕೆ ಬಿಲ್‌ ಮಾಡಲಾಗಿತ್ತು. ಆರೋಪಿಗಳು ಮಂಡ್ಯದ ಗಾಣದಾಳುವಿನಲ್ಲಿರುವ ಪರಮೇಶ್ವರ ರೈಸ್‌ ಮಿಲ್‌ನಲ್ಲಿ ಅಕ್ಕಿಯನ್ನು ಪಾಲಿಶ್‌ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರೆಂಬ ಮಾಹಿತಿ ಲಭಿಸಿತ್ತು. ಗಿರಣಿಯಲ್ಲೂ ತಪಾಸಣೆ ನಡೆಸಿದ್ದು, ಸತ್ಯನಾರಾಯಣ ಶೆಟ್ಟಿ, ಆದಿಮೂರ್ತಿ ಮತ್ತು ಭರತ್‌ ಅಕ್ಕಿ ಗಿರಣಿ ಮಾಲೀಕರ ಜತೆ ಒಪ್ಪಂದ ಮಾಡಿಕೊಂಡು ಅಕ್ಕಿಯನ್ನು ತಂದು ಪಾಲಿಶ್‌ ಮಾಡಿ ಮಾರಾಟ ಮಾಡುತ್ತಿದ್ದರು’ ಎಂದು ದೂರಿನಲ್ಲಿದೆ.

ಮೂರು ಜಿಲ್ಲೆಗಳಲ್ಲಿ ಗುತ್ತಿಗೆದಾರ: ವಿಶ್ವನಾಥ್‌ ಕೆ.ಎಸ್‌. ಒಡೆತನದ ವಿನಾಯಕ ಟ್ರಾನ್ಸ್‌ಪೋರ್ಟ್‌ ಕಂಪನಿ ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಪಡಿತರ ಧಾನ್ಯಗಳನ್ನು ಸಗಟು ಗೋದಾಮುಗಳಿಗೆ ಸಾಗಿಸುವ ಗುತ್ತಿಗೆ ಹೊಂದಿದೆ. ಸಾಮಾನ್ಯ ಅವಧಿಯಲ್ಲಿ ತಿಂಗಳಿಗೆ 40,000 ಕ್ವಿಂಟಲ್‌ ಮತ್ತು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್‌ ಅನ್ನ ಕಲ್ಯಾಣ ಯೋಜನೆಯ ಅವಧಿಯಲ್ಲಿ ತಿಂಗಳಿಗೆ 80,000 ಕ್ವಿಂಟಲ್‌ ಸಾಗಣೆ ಮಾಡುತ್ತಿದೆ. ಈ ಅವಧಿಯಲ್ಲಿ ಸಾವಿರಾರು ಕ್ವಿಂಟಲ್‌ ಅಕ್ಕಿಯನ್ನು ಕಾಳಸಂತೆಗೆ ಕೊಂಡೊಯ್ದಿರುವ ಶಂಕೆ ಇದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಯಾರ ವಿರುದ್ಧ ಎಫ್‌ಐಆರ್‌

l‌‌ವಿಶ್ವನಾಥ್‌ ಕೆ.ಎಸ್‌., ವಿನಾಯಕ ಟ್ರಾನ್ಸ್‌ಪೋರ್ಟ್‌ ಮಾಲೀಕ

lರಾಜು ವಿ.,ಕೆಎಫ್‌ಸಿಎಸ್‌ಸಿ ಬೊಮ್ಮನಹಳ್ಳಿ ಉಗ್ರಾಣದ ವ್ಯವಸ್ಥಾಪಕ

lಪ್ರದೀಪ್‌ ಕುಮಾರ್‌ ಎಸ್‌.ಆರ್‌., ಲಾರಿ ಮಾಲೀಕ ಮಂಡ್ಯ,

lಸತ್ಯನಾರಾಯಣ ಶೆಟ್ಟಿ ಅಲಿಯಾಸ್‌ ಸತ್ಯ,ಬೆಂಗಳೂರು

lಆದಿಮೂರ್ತಿ,ಬೆಂಗಳೂರು ಉತ್ತರ ಟಿಎಪಿಸಿಎಂಎಸ್‌ ನೌಕರ ಮತ್ತು ಅವರ ಮಗ ಭರತ್‌

ಚಾಲಕನ ವಿರುದ್ಧ ದೂರು

ಪಡಿತರ ಅಕ್ಕಿ ತುಂಬಿದ್ದ ಕೆಎ–53, ಬಿ–9888 ನೋಂದಣಿ ಸಂಖ್ಯೆಯ ಲಾರಿಯನ್ನು ಶನಿವಾರ ಸಂಜೆ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಇದೇ ಲಾರಿಯನ್ನು ಚಾಲಕ ನಾಗರಾಜ್‌ ಎಂಬಾತ ಕದ್ದೊಯ್ದಿದ್ದಾನೆ ಎಂದು ವಿನಾಯಕ ಟ್ರಾನ್ಸ್‌ಪೋರ್ಟ್‌ ಕಂಪನಿ ಮಾಲೀಕ ವಿಶ್ವನಾಥ್‌ ಬೆಂಗಳೂರಿನ ಕಾಡುಗೋಡಿ ಪೊಲೀಸ್‌ ಠಾಣೆಗೆ ಭಾನುವಾರ ದೂರು ನೀಡಿದ್ದು, ಚಾಲಕನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಎರಡನೇ ಎಫ್‌ಐಆರ್‌

ವಿನಾಯಕ ಟ್ರಾನ್ಸ್‌‍ಪೋರ್ಟ್‌ ಕಂಪನಿಯ ಲಾರಿ ಕೆಎಫ್‌ಸಿಎಸ್‌ಸಿ ಉಗ್ರಾಣಕ್ಕೆ ಸಾಗಿಸಬೇಕಿದ್ದ ಪಡಿತರ ಗೋಧಿಯನ್ನು ಕಾಳಸಂತೆಕೋರ ಸತ್ಯನಾರಾಯಣ ಶೆಟ್ಟಿಗೆ ಸೇರಿದ ಖಾಸಗಿ ಉಗ್ರಾಣಕ್ಕೆ ಸಾಗಿಸುತ್ತಿದ್ದಾಗ ಆಗಸ್ಟ್‌ 17ರಂದು ಬೆಂಗಳೂರಿನ ವಿಶ್ವೇಶ್ವರಪುರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಸಂಬಂಧ ಎಫ್‌ಐಆರ್‌ ದಾಖಲಿಸಿ ಸತ್ಯನಾರಾಯಣ ಶೆಟ್ಟಿ ಸೇರಿದಂತೆ ಮೂವರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT