ಶುಕ್ರವಾರ, ಜುಲೈ 1, 2022
27 °C

ಚುನಾವಣಾ ಸುಧಾರಣೆ ಕುರಿತು ಚರ್ಚೆಗೆ ಚಿಂತನೆ: ಸ್ಪೀಕರ್‌ ಕಾಗೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವ ಕುರಿತು ವಿಧಾನಮಂಡಲದ ಪ್ರಸಕ್ತ ಅಧಿವೇಶನದಲ್ಲೇ ಚರ್ಚೆ ಆರಂಭಿಸುವ ಚಿಂತನೆ ನಡೆದಿದೆ ಎಂದು ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಮಂಡಲದ ದೈನಂದಿನ ಕಲಾಪಗಳ ಜತೆಯಲ್ಲೇ ಚುನಾವಣಾ ಸುಧಾರಣೆ ಕುರಿತು ಚರ್ಚೆ ಆರಂಭಿಸುವ ಯೋಚನೆ ಇದೆ. ಕಲಾಪ ಸಲಹಾ ಸಮಿತಿಯಲ್ಲಿ ವಿಷಯ ಪ್ರಸ್ತಾಪಿಸಿ, ಒಪ್ಪಿಗೆ ದೊರೆತರೆ ಚರ್ಚೆಗೆ ಚಾಲನೆ ನೀಡಲಾಗುವುದು’ ಎಂದರು.

ಚುನಾವಣಾ ವಿಧಾನದಲ್ಲಿ ಸುಧಾರಣೆ ತರಬೇಕು ಎಂಬ ವಿಷಯದಲ್ಲಿ ಹಲವರಿಗೆ ಪತ್ರ ಬರೆಯಲಾಗಿತ್ತು. ಎಲ್ಲರಿಗೂ ಮನವರಿಕೆಯಾಗಿದೆ. ವಿಧಾನಮಂಡಲದಲ್ಲಿ ಚರ್ಚಿಸಿ, ನಿರ್ಣಯ ಕೈಗೊಂಡು ಸಾಂವಿಧಾನಿಕ ಸಂಸ್ಥೆಗಳ ಮುಖ್ಯಸ್ಥರಿಗೆ ಕಳುಹಿಸುವ ಯೋಚನೆ ಇದೆ. ಅವಕಾಶ ಲಭಿಸಿದರೆ ಕನಿಷ್ಠ ಎರಡು ದಿನಗಳ ಕಾಲ ಚರ್ಚಿಸುವ ಯೋಚನೆ ಇದೆ ಎಂದು ಹೇಳಿದರು.

ಸೋಮವಾರ ರಾಜ್ಯಪಾಲರ ಭಾಷಣದೊಂದಿಗೆ ಅಧಿವೇಶನ ಆರಂಭವಾಗಲಿದೆ. ನಂತರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಚರ್ಚೆ ನಡೆಯಲಿದೆ. 2,062 ಪ್ರಶ್ನೆಗಳು ಮತ್ತು ಎರಡು ಮಸೂದೆಗಳು ತಮ್ಮ ಕಚೇರಿಯನ್ನು ತಲುಪಿವೆ ಎಂದು ವಿವರ ನೀಡಿದರು.

ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ: ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಪಾಲಿಸಿಕೊಂಡು ಅಧಿವೇಶನ ನಡೆಸಲಾಗುವುದು. ಈ ಬಾರಿ ವಿಧಾನಮಂಡಲ ಕಲಾಪ ವೀಕ್ಷಣೆಗೆ ಸಾರ್ವಜನಿಕರಿಗೂ ಅವಕಾಶ ನೀಡಲಾಗುವುದು ಎಂದರು.

ಪರಿಸ್ಥಿತಿ ದುರ್ಬಳಕೆ ಬೇಡ: ‘ಹಿಜಾಬ್‌ ವಿಚಾರದಲ್ಲಿ ವಾದ– ವಿವಾದ ನಡೆಯುತ್ತಿದೆ. ಚರ್ಚೆ ಅಂತರರಾಷ್ಟ್ರೀಯ ಮಟ್ಟದವರೆಗೂ ತಲುಪಿದೆ. ಈ ವಿಷಯ ಈಗ ನ್ಯಾಯಾಲಯದ ಮುಂದಿದ್ದು, ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ. ನ್ಯಾಯಾಂಗಕ್ಕೆ ಗೌರವ ನೀಡಿ ಎಲ್ಲರೂ ತಾಳ್ಮೆಯಿಂದ ಇರಬೇಕು. ಪರಿಸ್ಥಿತಿಯ ದುರ್ಲಾಭ ಪಡೆಯಲು ಯತ್ನಿಸಬಾರದು’ ಎಂದು ಕಾಗೇರಿ ಮನವಿ ಮಾಡಿದರು.

ಭಾವುಕರಾದ ಕಾಗೇರಿ: ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಕುರಿತು ಪ್ರಸ್ತಾಪಿಸಿದ ಸ್ಪೀಕರ್‌, ‘ಬ್ರಿಟಿಷ್‌ ಶಿಕ್ಷಣ ಪದ್ಧತಿಯಿಂದ ನಮ್ಮ ಜೀವನದಲ್ಲಿ ನಂಬಿಕೆಗಳೇ ಇಲ್ಲದಂತಾಗಿದೆ. ನಂಬಿಕೆ ಮತ್ತು ವಿಶ್ವಾಸ ಇಲ್ಲದಿದ್ದರೆ ಈ ವ್ಯವಸ್ಥೆಯನ್ನು ಚೆನ್ನಾಗಿ ನಡೆಸಲು ಸಾಧ್ಯವಿಲ್ಲ. ವ್ಯವಸ್ಥೆ ಸರಿ ಆಗಬೇಕಾದರೆ ನಮ್ಮ ಜ್ಞಾನವನ್ನು ವಿಸ್ತಾರಗೊಳಿಸುವ ಪ್ರಯತ್ನ ಆಗಬೇಕು’ ಎಂದು ಭಾವುಕರಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು