ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ರಸ್ತೆ ಮೇಲ್ಸೇತುವೆ ಸಂಚಾರಕ್ಕೆ ಸುರಕ್ಷಿತವಲ್ಲ: ಬೊಮ್ಮಾಯಿ

ಲಘು ವಾಹನಗಳ ಸಂಚಾರಕ್ಕೆ ಒಂದು ವಾರದಲ್ಲಿ ತೀರ್ಮಾನ
Last Updated 15 ಫೆಬ್ರುವರಿ 2022, 19:26 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು–ನೆಲಮಂಗಲ ಮೇಲ್ಸೇತುವೆ ಭಾರಿ ವಾಹನಗಳ ಸಂಚಾರಕ್ಕೆ ಸುರಕ್ಷಿತವಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವರದಿ ತಿಳಿಸಿದೆ. ಆದರೆ, ಲಘು ವಾಹನಗಳ ಓಡಾಟಕ್ಕೆ ಅವಕಾಶ ನೀಡುವ ಸಂಬಂಧ ಒಂದು ವಾರದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಜೆಡಿಎಸ್‌ ಶಾಸಕ ಮಂಜುನಾಥ್ ಈ ವಿಷಯ ಪ್ರಸ್ತಾಪಿಸಿ
ದರು. ಇದಕ್ಕೆ ಉತ್ತರಿಸಿದ ಬೊಮ್ಮಾಯಿ, ‘ಈ ಮೇಲ್ಸೇತುವೆ ಕಳಪೆ ಕಾಮಗಾರಿಯಿಂದ ಕೂಡಿದ್ದು, ದೋಷದಿಂದ ಕೂಡಿರುವ ಸ್ತಂಭಗಳ ಮರು ನಿರ್ಮಾಣಕ್ಕೆ ಸಲಹೆ ನೀಡಿದೆ. ಈ ವಿಚಾರವಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ’ ಎಂದು ಹೇಳಿದರು.

ಮಂಜುನಾಥ್‌ ಅವರು ಮಾತನಾಡಿ, ಪೀಣ್ಯ ಎಲಿವೇಟೆಡ್ ಮೇಲ್ಸೇತುವೆಯ 102 ಮತ್ತು 103ನೇ ಸ್ತಂಭಗಳು ತಾಂತ್ರಿಕ ದೋಷದಿಂದ ಕೂಡಿವೆ ಎಂದು 56 ದಿನಗಳಿಂದ ಸಂಚಾರವನ್ನು ನಿಲ್ಲಿಸಲಾಗಿದೆ. ಇದರಿಂದ ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಹೋಗುವ ಮತ್ತು ಬರುವ ವಾಹನಗಳಿಗೆ ತೊಂದರೆ ಆಗಿದೆ. ದಾಸರಹಳ್ಳಿ ಮೂಲಕ ವಾಹನಗಳು ಹೋಗುತ್ತಿವೆ ಎಂದರು.

‘ಪ್ರತಿನಿತ್ಯ ಎರಡು ಕಿ.ಮೀ.ಗಳಷ್ಟು ಉದ್ದ ವಾಹನಗಳ ಸಾಲು ಇರುತ್ತದೆ. ಆಂಬುಲೆನ್ಸ್‌ಗಳು ಓಡಾಡಲು ಸಾಧ್ಯವಾಗುತ್ತಿಲ್ಲ. ಆದರೆ, ವಾಹನಗಳಿಂದ ಟೋಲ್‌ ಕೂಡ ಸಂಗ್ರಹಿಸಲಾಗುತ್ತಿದೆ. ಸಣ್ಣ ವಾಹನಗಳು ಮತ್ತು ಅಂಬುಲೆನ್ಸ್‌ಗಳ ಸಂಚಾರಕ್ಕೆ ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಧ್ವನಿಗೂಡಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಇದೊಂದು ಪ್ರಮುಖ ವಿಷಯವಾಗಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯಕರ್ನಾಟಕದ ಪ್ರಮುಖ ಜಿಲ್ಲೆಗಳನ್ನು ಸಂಪರ್ಕಿಸುವ ರಸ್ತೆಯ ಮೇಲ್ಸೇತುವೆ ಇದಾಗಿದೆ.

‘ಕಳಪೆ ಕಾಮಗಾರಿಯಿಂದ ಸಮಸ್ಯೆ’

ಮೇಲ್ಸೇತುವೆ ನಿರ್ಮಾಣದಲ್ಲಿ ಗುಣಮಟ್ಟವನ್ನು ಪಾಲಿಸಿಲ್ಲ. ಕಳಪೆ ಕಾಮಗಾರಿಯಿಂದ ಈ ಸಮಸ್ಯೆ ಉದ್ಭವಿಸಿದೆ. ಭಾರತೀಯ ವಿಜ್ಞಾನ ಸಂಸ್ಥೆಯಿಂದ ಮೇಲ್ಸೇತುವೆ ಮೇಲೆ ಭಾರ ಪರೀಕ್ಷೆ (ಲೋಡ್‌ ಟೆಸ್ಟ್‌) ನಡೆಸಿದಾಗ, ಈ ಸ್ತಂಭಗಳಲ್ಲಿ ಒಳಗಿನ ಕೇಬಲ್‌ ಬಾಗುತ್ತವೆ. ಭಾರಿ ವಾಹನಗಳ ಸಂಚಾರಕ್ಕೆ ಸುರಕ್ಷಿತವಲ್ಲ ಎಂಬ ವರದಿ ನೀಡಿದೆ. ಈ ಮಧ್ಯೆ ಸಣ್ಣ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬೇಕು ಎಂಬ ಮನವಿಯೂ ಬಂದಿದೆ. ಈ ಬಗ್ಗೆ ಲೋಡ್‌ ಟೆಸ್ಟ್‌ ಮಾಡಿಸಿ ಒಪ್ಪಿಗೆ ಸಿಕ್ಕರೆ, ಒಂದು ವಾರದಲ್ಲಿ ತೀರ್ಮಾನ ಪ್ರಕಟಿಸುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದರು.

‘ಹಿಂದೆ ಆದ ಕಳಪೆ ಕಾಮಗಾರಿಗೆ ಜವಾಬ್ದಾರಿ ಯಾರು? ಈಗ ಒತ್ತಡಕ್ಕೆ ಮಣಿದು ವಾಹನ ಸಂಚಾರಕ್ಕೆ ಅವಕಾಶ ನೀಡಿದರೆ, ಆ ಬಳಿಕ ಹೆಚ್ಚು ಕಮ್ಮಿ ಆದರೆ, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ’ ಎಂದು ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT