ಮಂಗಳವಾರ, ಜೂನ್ 15, 2021
27 °C
ಮಲಪ್ರಭಾ, ಘಟಪ್ರಭಾ ಒಳ–ಹೊರ ಹರಿವು ಇಳಿಮುಖ

ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರಕ್ಕೆ: ಹಂಪಿ ದೇಗುಲ ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಹಂಪಿಯ ರಾಮ–ಲಕ್ಷ್ಮಣ ದೇವಸ್ಥಾನದ ಆವರಣ, ಮಂಟಪ ಜಲಾವೃತವಾಗಿದೆ. ಮಲಪ್ರಭಾ ನದಿ ಪ್ರವಾಹದಿಂದ ಬಾಗಲಕೋಟೆ–ಗದಗ ಸಂಪರ್ಕ ಕಡಿತಗೊಂಡಿದೆ. ಬೆಳಗಾವಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ನದಿಗಳ ಒಳ ಹರಿವು, ಹೊರ ಹರಿವು ಕಡಿಮೆಯಾಗಿದೆ.

ಹೊಸಪೇಟೆ ಬಳಿಯ ಕಂಪ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆ ಮೇಲೆ ವಾಹನಗಳ ಓಡಾಟ ನಿರ್ಬಂಧಿಸಲಾಗಿದ್ದು, ಕಂಪ್ಲಿ–ಗಂಗಾವತಿ ನಡುವಿನ ಸಂಪರ್ಕ ಕಡಿದು ಹೋಗಿದೆ. ಸೇತುವೆ ಬಳಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಕಲ್ಯಾಣ ಕರ್ನಾಟಕದ ವಿವಿಧ ಊರುಗಳಿಗೆ ಹೋಗುವವರಿಗೆ ಅಡ್ಡಿಯಾಗಿದೆ.

ಬೆಳಗಾವಿ ನಗರವೂ ಸೇರಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆ ಯಾಗಿದೆ. ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ಒಳಹರಿವು ಕಡಿಮೆಯಾಗಿದೆ. ಚಿಕ್ಕೋಡಿ ತಾಲ್ಲೂಕಿನ ದೂಧ್‌ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಯಕ್ಸಂಬಾ– ದಾನವಾಡ ಹಾಗೂ ಸದಲಗಾ– ಬೋರಗಾಂವ ಸೇತುವೆಗಳು ಜಲಾವೃತವಾಗಿವೆ. ಇದರೊಂದಿಗೆ, ಜಿಲ್ಲೆಯಲ್ಲಿ ಈವರೆಗೆ ಜಲಾವೃತವಾದ ಸೇತುವೆಗಳ ಸಂಖ್ಯೆ 10ಕ್ಕೆ ಏರಿದೆ. ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದರೂ, ಕೃಷ್ಣಾ ನದಿಗೆ ಹರಿದು ಬರುವ ನೀರಿನ ಪ್ರಮಾಣ ಏರುಗತಿಯಲ್ಲಿಯೇ ಇದೆ.

ಮಲಪ್ರಭಾ ನದಿ ಪ್ರವಾಹದ ನೀರು ಸೇತುವೆ ಮೇಲೆ ಹರಿಯುತ್ತಿರುವ ಕಾರಣ ಬಾಗಲಕೋಟೆಯ ಬಾದಾಮಿ-ರೋಣ-ಗದಗ ಸಂಪರ್ಕ ರಸ್ತೆಯಲ್ಲಿ ವಾಹನ ಸಂಚಾರ ಮಂಗಳವಾರ ರಾತ್ರಿಯಿಂದ ಸ್ಥಗಿತಗೊಂಡಿದೆ. ಬಾಗಲಕೋಟೆ-ಗದಗ ಜಿಲ್ಲೆಗಳ ನಡುವಿನ ಎರಡು ಪ್ರಮುಖ ಸಂಪರ್ಕ ಮಾರ್ಗಗಳು ಬಂದ್ ಆದಂತಾಗಿವೆ. ಬಾದಾಮಿ– ಗದಗ ಜಿಲ್ಲೆ ಹೊಳೆ ಆಲೂರು ನಡುವೆ ನೀರಲಗಿ ಕ್ರಾಸ್ ಬಳಿ ಸೇತುವೆ ಮುಳುಗಡೆ ಆಗಿ ರಸ್ತೆ ಬಂದ್ ಆಗಿದೆ. ಹೊಳೆಆಲೂರು–ಜಕನೂರು ನಡುವಿನ ರೈಲ್ವೆ ಸೇತುವೆ ಮೇಲೆ ಜನರು ಕಾಲ್ನಡಿಗೆಯಲ್ಲಿ ಓಡಾಟ ನಡೆಸಿದ್ದಾರೆ.

12 ಬ್ರಿಜ್ ಕಮ್ ಬ್ಯಾರೇಜ್ ಮುಳುಗಡೆ: ಘಟಪ್ರಭಾ ನದಿ ಪ್ರವಾಹದಿಂದ ರಬಕವಿ–ಬನಹಟ್ಟಿ ಹಾಗೂ ಮುಧೋಳ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ 12 ಬ್ರಿಜ್ ಕಮ್ ಬ್ಯಾರೇಜ್‌ ಮುಳುಗಡೆ ಯಾಗಿವೆ. ಹೀಗಾಗಿ ತಾಲ್ಲೂಕು ಕೇಂದ್ರ ದೊಂದಿಗೆ 30ಕ್ಕೂ ಹೆಚ್ಚು ಹಳ್ಳಿಗಳು ಸಂಪರ್ಕ ಕಳೆದುಕೊಂಡಿವೆ.

ವಿರುಪಾಪುರ ಗಡ್ಡೆ, ಆನೆಗೊಂದಿ ಜಲಾವೃತ: ತುಂಗಭದ್ರಾ ಜಲಾಶಯ ದಿಂದ ಅಪಾರ ಪ್ರಮಾಣದ ನೀರು ಹರಿಸಿದ್ದರಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ವಿರುಪಾಪುರ ಗಡ್ಡೆ, ನವ ವೃಂದಾವನ ಗಡ್ಡೆ, ಆನೆ ಗೊಂದಿ ಜಲಾವೃತವಾಗಿವೆ. ನದಿ ತೀರದ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದೆ. 

ವೃದ್ಧ ಸಾವು
ಬೆಳಗಾವಿ
: ಚಿಕ್ಕೋಡಿ ತಾಲ್ಲೂಕಿನ ಸದಲಗಾ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಮಣ್ಣಿನ ಮನೆ ಯೊಂದು ಕುಸಿದುಬಿದ್ದು ಕಲ್ಲಪ್ಪ ಪರಗೌಡರ (70) ಮೃತಪಟ್ಟಿದ್ದಾರೆ.

ಇಬ್ಬರ ಮೃತದೇಹಗಳು ಪತ್ತೆ
ಶಕ್ತಿನಗರ (ರಾಯಚೂರು ಜಿಲ್ಲೆ):
ಪೆದ್ದಕುರಂ (ಕುರ್ವಕುಲ) ಸಮೀಪದ ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ನಾಲ್ವರು ನಾಪತ್ತೆಯಾಗಿದ್ದವರ ಪೈಕಿ ಇಬ್ಬರು ಮಹಿಳೆಯರ ಮೃತದೇಹಗಳು ಪೆದ್ದಕುರುಂ ಗ್ರಾಮದಿಂದ 30 ಕಿ.ಮೀ. ದೂರದ ಜುರಾಲಾ ಅಣೆಕಟ್ಟು ಬಳಿ ಬುಧವಾರ ಪತ್ತೆಯಾಗಿವೆ. 

ಮೃತರನ್ನು ಸುಮಲತಾ (32) ಮತ್ತು ಪಾರ್ವತಿ ನರಸಪ್ಪ (52) ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ರಾಯಚೂರು ರಿಮ್ಸ್‌ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಯಿತು. ಒಬ್ಬ ಬಾಲಕಿ ಮತ್ತು ಮಹಿಳೆಗಾಗಿ ನದಿ ಸುತ್ತಮುತ್ತಲೂ ಎನ್‌ಡಿಆರ್‌ಎಫ್‌ ತಂಡದಿಂದ ಶೋಧ ಮುಂದುವರೆದಿದೆ. ಆ.17ರಂದು ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ, ನಾಲ್ವರು ನಾಪತ್ತೆಯಾಗಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು