ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕತೆ ತರಲು ಖಾಸಗಿ ಎಸ್ಕಾಂಗಳು ಅಗತ್ಯ: ಆರ್‌.ಕೆ. ಸಿಂಗ್‌

Last Updated 5 ಫೆಬ್ರುವರಿ 2023, 15:27 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್‌ ಸರಬರಾಜಿನಲ್ಲಿ ಸ್ಪರ್ಧಾತ್ಮಕತೆ ತರಲು ಖಾಸಗಿ ವಿದ್ಯುತ್‌ ಸರಬರಾಜು ಕಂಪನಿಗಳು(ಎಸ್ಕಾಂ) ಅಗತ್ಯ. ಖಾಸಗಿ ಎಸ್ಕಾಂಗಳಿಗೆ ಪರವಾನಗಿ ನೀಡುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನ ಮುಂದುವರಿಯಲಿದೆ ಎಂದು ಕೇಂದ್ರ ವಿದ್ಯುತ್‌ ಸಚಿವ ಆರ್‌.ಕೆ. ಸಿಂಗ್‌ ಹೇಳಿದರು.

ಭಾನುವಾರ ಆರಂಭವಾದ ಜಿ-20 ರಾಷ್ಟ್ರಗಳ ಇಂಧನ ಪರಿವರ್ತನಾ ಗುಂಪಿನ ಸಭೆಯ ಉದ್ಘಾಟನೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಇರುವ ಎಸ್ಕಾಂಗಳನ್ನು ಖಾಸಗೀಕರಣ ಮಾಡುವುದಿಲ್ಲ. ಅವು ಈಗಿನ ಸ್ವರೂಪದಲ್ಲೇ ಮುಂದುವರಿಯುತ್ತವೆ. ಆದರೆ, ಅವು ಖಾಸಗಿ ಎಸ್ಕಾಂಗಳ ಜತೆ ಸ್ಪರ್ಧೆ ಮಾಡಬೇಕಾಗುತ್ತದೆ ಎಂದರು.

ಖಾಸಗಿ ಎಸ್ಕಾಂಗಳಿಗೆ ಅನುಮತಿ ನೀಡುವುದರಿಂದ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಲಭಿಸುತ್ತವೆ. ಒಂದು ಕಂಪನಿ ಸರಿಯಾಗಿ ಸೇವೆ ಒದಗಿಸದಿದ್ದರೆ ಗ್ರಾಹಕರು ಉತ್ತಮ ಸೇವೆ ನೀಡುವ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಮೊಬೈಲ್‌ ಸೇವಾ ಕಂಪನಿಗಳನ್ನು ಆಯ್ಕೆ ಮಾಡಿಕೊಂಡ ಮಾದರಿಯಲ್ಲೇ ವಿದ್ಯುತ್‌ ಸರಬರಾಜು ಕಂಪನಿಗಳನ್ನೂ ಆಯ್ಕೆಮಾಡಿಕೊಳ್ಳುವ ಅವಕಾಶ ಗ್ರಾಹಕರಿಗೆ ಲಭಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಒಂದು ಪ್ರದೇಶದಲ್ಲಿ ಹಲವು ವಿದ್ಯುತ್‌ ಸರಬರಾಜು ಕಂಪನಿಗಳು ಸೇವೆ ಒದಗಿಸಲು ಅವಕಾಶ ಕಲ್ಪಿಸುವ ಅಂಶ 2003ರ ವಿದ್ಯುತ್‌ ಕಾಯ್ದೆಯಲ್ಲೇ ಇದೆ. ಮುಂಬೈ ನಗರದಲ್ಲಿ ಅಂತಹ ಹಲವು ಕಂಪನಿಗಳಿಗೆ ಪರವಾನಗಿ ನೀಡಲಾಗಿದೆ. ಆದರೆ, ಒಂದು ತಾಂತ್ರಿಕ ತೊಡಕಿನ ಕಾರಣದಿಂದ ಅದು ಅನುಷ್ಠಾನಕ್ಕೆ ಬಂದಿಲ್ಲ. ಕಾಯ್ದೆಯಲ್ಲಿನ ಒಂದು ಸೆಕ್ಷನ್‌ ಅದಕ್ಕೆ ಅಡ್ಡಿಯಾಗಿದೆ. ತಿದ್ದುಪಡಿ ಮೂಲಕ ಅದನ್ನು ಕೈಬಿಡಲು ನಿರ್ಧರಿಸಿದ್ದೇವೆ ಎಂದರು.

ಅಡುಗೆಗೂ ವಿದ್ಯುತ್‌ ಬಳಕೆ: ಗ್ರಾಮೀಣ ಪ್ರದೇಶಗಳಲ್ಲಿ ಅಡುಗೆಗಾಗಿ ಎಲ್‌ಪಿಜಿ ಸಂಪರ್ಕ ಒದಗಿಸಿರುವುದು ತಾತ್ಕಾಲಿಕ ಕ್ರಮ. ಇಂಧನ ಪರಿವರ್ತನೆಯ ಭಾಗವಾಗಿ ಅಡುಗೆಗೂ ವಿದ್ಯುತ್‌ ಬಳಕೆ ಮಾಡುವುದು ಅಗತ್ಯ ಎಂದು ಸಿಂಗ್‌ ಹೇಳಿದರು.

ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ಕಲ್ಪಿಸಿರುವುದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್‌ಪಿಜಿ ಬಳಕೆ ಒಂದು ಮಧ್ಯಂತರ ಪರಿಹಾರ ಕ್ರಮ. ಹಸಿರು ಇಂಧನ ಬಳಕೆ ಹೆಚ್ಚಳಕ್ಕಾಗಿ ಅಡುಗೆಗೂ ವಿದ್ಯುತ್‌ ಬಳಕೆ ಮಾಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಕನಸು ಎಂದರು.


ಬಡವರಿಗೆ ಸೌಲಭ್ಯ ಒದಗಿಸಬೇಕೆಂಬ ಪ್ರಧಾನಿಯವರ ಆಶಯದಂತೆ ಎಲ್‌ಪಿಜಿ ಸಂಪರ್ಕಗಳನ್ನು ಕಲ್ಪಿಸಲಾಗಿದೆ. ರಿಯಾಯ್ತಿ ದರದಲ್ಲಿ ಅವರಿಗೆ ಸಿಲಿಂಡರ್‌ ಪೂರೈಸಲಾಗುತ್ತಿದ್ದು, ಅದು ಮುಂದುವರಿಯಲಿದೆ. ಹೆಚ್ಚಿನ ಸಂಪರ್ಕಗಳ ಅಗತ್ಯವಿದ್ದರೆ ಅದಕ್ಕೂ ಮಂಜೂರಾತಿ ನೀಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT