ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಲೋಕಾಯುಕ್ತರಾಗಿ ನ್ಯಾ. ಬಿ.ಎಸ್‌. ಪಾಟೀಲ್ ನೇಮಕ

Last Updated 14 ಜೂನ್ 2022, 12:50 IST
ಅಕ್ಷರ ಗಾತ್ರ

ಬೆಂಗಳೂರು: ಹಾಲಿ ಉಪ ಲೋಕಾಯುಕ್ತರಾಗಿರುವ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಅವರನ್ನು ರಾಜ್ಯದ ನೂತನ ಲೋಕಾಯುಕ್ತರನ್ನಾಗಿ ನೇಮಕಗೊಳಿಸಿ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ 2022ರ ಜನವರಿ 27ರಂದು ನಿವೃತ್ತರಾಗಿದ್ದರು. ಅಂದಿನಿಂದ ಈ ಹುದ್ದೆ ಖಾಲಿ ಇತ್ತು. ಈ ಹುದ್ದೆಗೆ ಬಿ.ಎಸ್‌. ಪಾಟೀಲ ಅವರನ್ನು ನೇಮಕ ಮಾಡಲಾಗಿದೆ. ಪಾಟೀಲ 2019ರ ನವೆಂಬರ್‌ನಿಂದ ಉಪ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ವಿಧಾನಸಭೆ ಮತ್ತು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕರ ಜತೆ ಸಮಾಲೋಚಿಸಿದ ಬಳಿಕ ಬಿ.ಎಸ್‌. ಪಾಟೀಲ ಅವರ ಹೆಸರನ್ನು ಲೋಕಾಯುಕ್ತರ ಹುದ್ದೆಗೆ ಶಿಫಾರಸು ಮಾಡಿದ್ದರು. ಅದರಂತೆ ರಾಜ್ಯಪಾಲರು ನೇಮಕಾತಿ ಆದೇಶ ಹೊರಡಿಸಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಪದೆಕಣ್ಣೂರು ಗ್ರಾಮದಲ್ಲಿ 1956ರ ಜೂನ್‌ 1ರಂದು ಜನಿಸಿದ್ದ ಪಾಟೀಲ, ಕಾನೂನು ಪದವಿ ಪೂರ್ಣಗೊಳಿಸಿ 1980ರಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದರು. ಹೈಕೋರ್ಟ್‌ ನ್ಯಾಯಮೂರ್ತಿಯಾಗಿ 2004ರ ಅಕ್ಟೋಬರ್‌ 21ರಂದು ನೇಮಕಗೊಂಡಿದ್ದರು. 13 ವರ್ಷ 7 ತಿಂಗಳ ಕಾಲ ಕಾರ್ಯನಿರ್ವಹಿಸಿ 2018ರ ಮೇ 31ರಂದು ನಿವೃತ್ತರಾಗಿದ್ದರು.

2019ರ ನವೆಂಬರ್‌ 20ರಂದು ಉಪ ಲೋಕಾಯುಕ್ತರಾಗಿ ನೇಮಕಗೊಂಡಿದ್ದ ಪಾಟೀಲ, ನ.22ರಂದು ಅಧಿಕಾರ ಸ್ವೀಕರಿಸಿದ್ದರು. ರಾಜ್ಯದಲ್ಲಿ ಉಪ ಲೋಕಾಯುಕ್ತರ ಹುದ್ದೆಯಿಂದ ಲೋಕಾಯುಕ್ತರಾಗಿ ಪದೋನ್ನತಿ ಪಡೆಯುತ್ತಿರುವ ಮೊದಲಿಗರು. ರಾಜಭವನದ ಗಾಜಿನ ಮನೆಯಲ್ಲಿ ಬುಧವಾರ ಬೆಳಿಗ್ಗೆ 9.45ಕ್ಕೆ ನಡೆಯುವ ಸಮಾರಂಭದಲ್ಲಿ ರಾಜ್ಯಪಾಲರು ನೂತನ ಲೋಕಾಯುಕ್ತರಿಗೆ ಪ್ರಮಾಣವಚನ ಬೋಧಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT