ಬುಧವಾರ, ಆಗಸ್ಟ್ 17, 2022
25 °C

PV Web Exclusive| ರಾಷ್ಟ್ರೀಯ ಯೋಜನೆ ಆಗಲಿದೆ ಭದ್ರಾ ಮೇಲ್ದಂಡೆ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಮಧ್ಯಕರ್ನಾಟಕದ ಬಯಲುಸೀಮೆಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ರೂಪುಗೊಳ್ಳುವ ಕಾಲ ಸನ್ನಿಹಿತವಾಗಿದೆ. ರಾಜ್ಯ ಜಲಸಂಪನ್ಮೂಲ ಇಲಾಖೆ ಸಿದ್ದಪಡಿಸಿದ ವರದಿಗೆ ವಿಶ್ವೇಶ್ವರಯ್ಯ ಜಲ ನಿಗಮದ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ತಾತ್ವಿಕ ಭರವಸೆ ನೀಡಿರುವ ಕೇಂದ್ರ ಸರ್ಕಾರದ ಅಧಿಕೃತ ಅನುಮೋದನೆಯಷ್ಟೇ ಬಾಕಿ ಇದೆ.

ಸರ್ಕಾರದ ಈ ನಡೆ ಭದ್ರಾ ಮೇಲ್ದಂಡೆ ಯೋಜನೆಯ ಫಲಾನುಭವಿಗಳಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಯೋಜನೆಗೆ ಕೇಂದ್ರದ ಅನುದಾನ ಹರಿದುಬರುವ ಸಾಧ್ಯತೆ ಇದೆ. ಕೇಂದ್ರದ ಅನುದಾನ ಸಿಕ್ಕರೆ ಕಾಮಗಾರಿ ವೇಗ ಪಡೆಯಲಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯನ್ನು ಈಡೇರಿಸಿರುವುದಾಗಿ ಮತ ಬ್ಯಾಂಕ್‌ ಅನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಬಿಜೆಪಿ ಮುಂದಾಗಿದೆ.

ಏನಿದು ಯೋಜನೆ?

ಭದ್ರಾ ಜಲಾಶಯದಿಂದ ಬಯಲುಸೀಮೆಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಯೋಜನೆಯ ಉದ್ದೇಶ. ಹೆಸರು ಭದ್ರಾ ಮೇಲ್ದಂಡೆ ಎಂದಿದ್ದರೂ ತುಂಗಾ ನದಿಯ ನೀರಿನ ಪಾಲು ಹೆಚ್ಚಿದೆ. ಯಾವುದೇ ಅಣೆಕಟ್ಟು ನಿರ್ಮಿಸದೆ ಭಾರಿ ಪ್ರಮಾಣದ ನೀರು ಹಂಚಿಕೆ ಮಾಡಿ ರೂಪಿಸಿದ ಯೋಜನೆ ಇದಾಗಿದೆ. ಶಿವಮೊಗ್ಗ ಜಿಲ್ಲೆಯ ಗಾಜನೂರು ಸಮೀಪದ ತುಂಗಾ ಜಲಾಶಯದ ನೀರನ್ನು ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಅಲ್ಲಿಂದ ನಾಲೆ ಮೂಲಕ ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗೆ ನೀರು ಉಣಿಸುವುದು ಯೋಜನೆಯ ಉದ್ದೇಶ. ಹನಿ ನೀರಾವರಿ ಮೂಲಕ ನೀರು ಒದಗಿಸುವ ರಾಜ್ಯದ ಬಹುದೊಡ್ಡ ನೀರಾವರಿ ಯೋಜನೆ ಇದಾಗಿದೆ.

ಐದು ದಶಕಗಳ ಬೇಡಿಕೆ

ಭದ್ರಾ ಜಲಾಶಯದ ನೀರನ್ನು ಚಿತ್ರದುರ್ಗಕ್ಕೆ ಹರಿಸಬೇಕು ಎಂಬುದು ದಶಕಗಳ ಕನಸು. ಚಿತ್ರದುರ್ಗದವರೇ ಆದ ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರ ಕಾಲದಿಂದಲೂ ಈ ಪ್ರಯತ್ನ ನಡೆಯುತ್ತಲೇ ಇತ್ತು. ಎರಡೂವರೆ ದಶಕದಿಂದ ಈಚೆಗೆ ಇದು ಚಳವಳಿಯ ರೂಪು ಪಡೆದುಕೊಂಡಿತು. ಕಾಲಾನಂತರ ಇದು ಚುನಾವಣೆಯ ಅಸ್ತ್ರವಾಗಿಯೂ ಮುನ್ನೆಲೆಗೆ ಬಂದಿತು. ಚುನಾವಣೆ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಭದ್ರಾ ನೀರು ಹರಿಸುವ ಆಶ್ವಾಸನೆ ನೀಡಿದವು.

ನೀರಾವರಿ ತಜ್ಞ ಕೆ.ಸಿ.ರೆಡ್ಡಿ ಅಧ್ಯಕ್ಷತೆಯಲ್ಲಿ ರಚನೆಗೊಂಡ ಸಮಿತಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಇದಕ್ಕೆ ಒಪ್ಪಿಗೆ ಸೂಚಿಸಿದ ರಾಜ್ಯ ಸರ್ಕಾರ, 2008ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿತು. ಭದ್ರಾ ಮೇಲ್ದಂಡೆಗೆ ಮೀಸಲಿಡಲಾಗಿರುವ 29.9 ಟಿಎಂಸಿ ಅಡಿ ನೀರನ್ನು ಕೆರೆ ತುಂಬಿಸುವ ಹಾಗೂ ಹನಿ ನೀರಾವರಿಯಾಗಿ ಹರಿಸುವ ಮಹತ್ತರ ಯೋಜನೆಯಾಗಿ ರೂಪುಗೊಂಡಿತು.

5.57 ಲಕ್ಷ ಎಕರೆಗೆ ನೀರು

ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಯ 367 ಕೆರೆಗಳಿಗೆ ಶೇ 50ರಷ್ಟು ನೀರು ತುಂಬಿಸಲಾಗುತ್ತಿದೆ. ನಾಲ್ಕು ಜಿಲ್ಲೆಯ 2,25,515 ಹೆಕ್ಟೇರ್‌ ಪ್ರದೇಶಕ್ಕೆ (5.57 ಲಕ್ಷ ಎಕರೆ) ನೀರುಣಿಸಲು ಯೋಜಿಸಲಾಗಿದೆ. ಅಂದಾಜು ₹12,340 ಕೋಟಿ ಅಂದಾಜು ವೆಚ್ಚ ತಯಾರಿಸಲಾಗಿದೆ. ಇದರಲ್ಲಿ 2018–19ರ ಆರ್ಥಿಕ ವರ್ಷದವರೆಗೆ ₹2,689 ಕೋಟಿ ವೆಚ್ಚವಾಗಿದೆ.

ಎಲ್ಲಿಂದ? ಎಷ್ಟು ನೀರು?

ಈ ಯೋಜನೆಯ ರೂಪುರೇಷೆಯೇ ವಿಸ್ಮಯ ಮೂಡಿಸುತ್ತದೆ. ತುಂಗಾ ಜಲಾಶಯದಿಂದ ಪ್ರತಿ ವರ್ಷದ ಜೂನ್‌ ತಿಂಗಳಿಂದ ಅಕ್ಟೋಬರ್‌ ವರೆಗೆ 17.4 ಟಿಎಂಸಿ ಅಡಿ ನೀರನ್ನು ಮೇಲೆತ್ತಿ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಭದ್ರಾ ಜಲಾಶಯದ 12.5 ಟಿಎಂಸಿ ಅಡಿ ನೀರು ಸೇರಿಸಿ ‘ಭದ್ರಾ ಮೇಲ್ದಂಡೆ’ಗೆ ಹಂಚಿಕೆ ಮಾಡುವ ವ್ಯವಸ್ಥೆ ರೂಪಿಸಲಾಗಿದೆ.

ಭದ್ರಾ ಜಲಾಶಯದಿಂದ ನಾಲೆಯ ಮೂಲಕ ನೀರು ಹರಿಸಲಾಗುತ್ತದೆ. 11 ಕಿ.ಮೀ ದೂರದಲ್ಲಿರುವ ತರೀಕೆರೆ ತಾಲ್ಲೂಕಿನ ಶಾಂತಿಪುರ ಹಾಗೂ 46 ಕಿ.ಮೀ ದೂರದಲ್ಲಿರುವ ಬೆಟ್ಟದ ತಾವರೆಕೆರೆಯಲ್ಲಿ ಪಂಪ್‌ಹೌಸ್‌ ನಿರ್ಮಿಸಲಾಗಿದೆ. ಎರಡೂ ಕಡೆ ನೀರನ್ನು 45 ಮೀಟರ್‌ ಮೇಲೆತ್ತಿ ನಾಲೆಗೆ ಲಿಫ್ಟ್‌ ಮಾಡಲಾಗುತ್ತದೆ. ಪ್ರತಿ ಪಂಪ್‌ಹೌಸ್‌ನಲ್ಲಿ ನಾಲ್ಕು ಮೋಟಾರು ಅಳವಡಿಸಲಾಗಿದೆ. ಪ್ರತಿ ಮೋಟಾರು 750 ಕ್ಯುಸೆಕ್‌ ನೀರು ಮೇಲೆತ್ತುವ ಸಾಮರ್ಥ್ಯ ಹೊಂದಿದೆ.

ಏಳು ಕಿ.ಮೀ ಸುರಂಗ

ತರೀಕೆರೆ ತಾಲ್ಲೂಕಿನ ಅಜ್ಜಂಪುರದ ಬಳಿ ಸುಮಾರು ಏಳು ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಿಸಲಾಗಿದೆ. ಹೇಮಾವತಿ ನಾಲೆಗೆ ಹೊರತುಪಡಿಸಿದರೆ ಅತಿ ಉದ್ದದ ಸುರಂಗ ನಿರ್ಮಿಸಿದ್ದು ಭದ್ರಾ ಮೇಲ್ದಂಡೆ ಯೋಜನೆಗೆ ಎಂಬ ಹೆಗ್ಗಳಿಕೆ ಇದೆ. ಇದು ರಾಜ್ಯದ ಎರಡನೇ ಅತಿ ದೊಡ್ಡ ನೀರಾವರಿ ಸುರಂಗ ಮಾರ್ಗವಾಗಿದೆ. ಭೂಮಿಯಿಂದ 150 ಅಡಿ ಆಳದಲ್ಲಿ 8 ಮೀಟರ್‌ ವಿನ್ಯಾಸದ ಸುರಂಗ ನಾಲೆ ನಿರ್ಮಾಣಗೊಂಡಿದೆ. ಸುರಂಗ ನಿರ್ಮಾಣ ಕಾಮಗಾರಿ ಎರಡೂವರೆ ವರ್ಷ ನಡೆದಿದೆ.

ಬೃಹತ್‌ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬರುತ್ತಿದ್ದಂತೆ ತರೀಕರೆ ಭಾಗದಲ್ಲಿ ಹೋರಾಟ ಭುಗಿಲೆದ್ದಿತು. ಸುರಂಗ ನಿರ್ಮಾಣದಿಂದ ಅಂತರ್ಜಲ ಕುಸಿತವಾಗುತ್ತದೆ ಎಂಬ ತಕರಾರು ಎದ್ದಿತು. ತರೀಕೆರೆ ಹಾಗೂ ಕಡೂರು ತಾಲ್ಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಬೇಡಿಕೆ ಮುನ್ನೆಲೆಗೆ ಬಂದಿತು. ಬಳಿಕ 1.47 ಟಿಎಂಸಿ ನೀರನ್ನು ತರೀಕೆರೆಗೆ ಮೀಸಲಿಡಲಾಯಿತು. 20,150 ಹೆಕ್ಟೇರ್‌ ಜಮೀನಿಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಹಾಗೂ 79 ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ಅನುಮೋದನೆ ನೀಡಿತು.

ಪರಿಷ್ಕೃತಗೊಂಡ ಯೋಜನೆ

ಚಿತ್ರದುರ್ಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ರೂಪುಗೊಂಡ ಯೋಜನೆ ಹಲವು ಬಾರಿ ಪರಿಷ್ಕೃತಗೊಂಡಿದೆ. 2001ರಲ್ಲಿ 21 ಟಿಎಂಸಿ ಅಡಿ ನೀರಿನ ಹಂಚಿಕೆಗೆ ಸರ್ಕಾರ ಮಾಸ್ಟರ್‌ ಪ್ಲಾನ್‌ ರೂಪಿಸಿತ್ತು. 2003ರಲ್ಲಿ ಇದಕ್ಕೆ ₹2,813 ಕೋಟಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿತು. ಆದರೆ, ಯೋಜನೆಗೆ ಅಧಿಕೃತ ಚಾಲನೆ ದೊರೆಯಲಿಲ್ಲ. ಕೆ.ಸಿ.ರೆಡ್ಡಿ ಶಿಫಾರಸಿನ ಮೇರೆಗೆ 2008ರಲ್ಲಿ ₹5,985 ಕೋಟಿಗೆ ಅನುಮೋದನೆ ಸಿಕ್ಕಿತು. 2015ರಲ್ಲಿ ಯೋಜನೆ ಮತ್ತೊಂದು ಸುತ್ತಿನ ಪರಿಷ್ಕರಣೆಗೆ ಒಳಪಟ್ಟಿತು.

ತುಮಕೂರು, ಚಿತ್ರದುರ್ಗ ನಾಲೆ

ತರೀಕೆರೆ ತಾಲ್ಲೂಕಿನ ಅಜ್ಜಂ‍ಪುರ ದಾಟಿದ ಬಳಿಕ ತುಮಕೂರು ಹಾಗೂ ಚಿತ್ರದುರ್ಗಕ್ಕೆ ನಾಲೆಗಳು ಕವಲೊಡೆಯುತ್ತವೆ. ಚಿತ್ರದುರ್ಗ ಶಾಖಾ ಕಾಲುವೆಗೆ 11.96 ಟಿಎಂಸಿ ಅಡಿ ನೀರು ಹಾಗೂ ತುಮಕೂರು ಶಾಖಾ ಕಾಲುವೆಗೆ 9.4 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕಾಲುವೆಗೆ 1.86 ಟಿಎಂಸಿ ಅಡಿ ನೀರು ಸೇರಿ ತಾಲ್ಲೂಕುವಾರು ನೀರು ಹಂಚಿಕೆ ಮಾಡಲಾಗಿದೆ. ಹಿರಿಯೂರು ತಾಲ್ಲೂಕಿನ ವಿ.ವಿ.ಸಾಗರ ಜಲಾಶಯಕ್ಕೆ ಪ್ರತಿ ವರ್ಷ 2 ಟಿಎಂಸಿ ಅಡಿ ನೀರು ಹರಿಸಲು ಒಪ್ಪಿಗೆ ನೀಡಲಾಗಿದೆ.

134 ಕಿ.ಮೀ ಉದ್ದದ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ನಡೆಯುತ್ತಿದೆ. 104 ಕಿ.ಮೀ ಕಾಲುವೆ ನಿರ್ಮಾಣ ಕಾರ್ಯಾರಂಭವಾಗಿದೆ. ಕೆಲ ಪ್ರದೇಶಗಳನ್ನು ಹೊರತುಪಡಿಸಿ ತರೀಕೆರೆ, ಹೊಸದುರ್ಗ ತಾಲ್ಲೂಕು ಭಾಗದಲ್ಲಿ ಕಾಲುವೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಹೊಳಲ್ಕೆರೆ ಉಪ ಕಾಲುವೆ ಕಾಮಗಾರಿ ಆರಂಭವಾಗಿದೆ. ಜಗಳೂರು, ಪಾವಗಡ, ಮೊಳಕಾಲ್ಮುರು ಹಾಗೂ ಚಳ್ಳಕೆರೆ ತಾಲ್ಲೂಕಿನ ಉಪ ಕಾಲುವೆಗಳ ಸರ್ವೆ ಕಾರ್ಯ ನಡೆಯುತ್ತಿದೆ. ಚಿತ್ರದುರ್ಗ ಹಾಗೂ ಹಿರಿಯೂರು ತಾಲ್ಲೂಕಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಚುರುಕು ಪಡೆದಿದೆ.

159 ಕಿ.ಮೀ ಉದ್ದದ ತುಮಕೂರು ಶಾಲಾ ಕಾಲುವೆ ನಿರ್ಮಾಣಕ್ಕೆ ಭೂಸ್ವಾಧೀನ ವಿಘ್ನ ಕಾಡುತ್ತಿದೆ. 48 ಕಿ.ಮೀ ಉದ್ದದ ಕಾಲುವೆ ಕಾಮಗಾರಿ ತೆವಳುತ್ತ ಸಾಗಿದೆ. 48 ಕಿ.ಮೀನಿಂದ 109 ಕಿ.ಮೀ ವರೆಗಿನ ಕಾಲುವೆ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ತೊಂದರೆಯಿಂದ ತುಮಕೂರು ಶಾಖಾ ಕಾಲುವೆ ನಿರ್ಮಾಣ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು