ಭಾನುವಾರ, ಏಪ್ರಿಲ್ 2, 2023
33 °C

ಟಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ಅವಹೇಳನಕಾರಿ ಪದ ಬಳಕೆ: ಕಠಿಣ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ‘ಕ್ಷೌರಿಕ ಸಮಾಜಕ್ಕೆ ಅವಮಾನ ಆಗುವಂತಹ ಪದವನ್ನು ಟಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ಬಳಸಲಾಗಿದೆ. ಇದು ಖಂಡನೀಯ. ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಕ್ಷಮೆ ಕೇಳಬೇಕು ಮತ್ತು ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳ ಬೇಕು’ ಎಂದು ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಸಿದ್ಧಪ್ಪ ಹಡಪದ ಒತ್ತಾಯಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ‘ಟಿಇಟಿ ಪ್ರಶ್ನೆ ಪತ್ರಿಕೆಯ ಕನ್ನಡ ಭಾಷೆ-2ರ ಪ್ರಶ್ನೆ ಸಂಖ್ಯೆ 31ರಿಂದ 38ರ ಪ್ರಶ್ನೆಗಳಿಗೆ ಪೂರಕವಾಗಿ ನೀಡಿರುವ ಗದ್ಯ ಭಾಗದಲ್ಲಿ, ‘ಇದು ಬಾಯಿ ತೆರೆದರೆ ಮೇಲೂ, ಕೆಳಗೂ ಎರಡೆರಡು ಸಾಲು ಹಲ್ಲುಗಳು ಹಜಾಮರ ಕ್ಷೌರದ ಕತ್ತಿಗಿಂತ ಹರಿತವಾಗಿರುತ್ತದೆ’ ಎಂದು ಆಕ್ಷೇಪಾರ್ಹ ಪದ ಬಳಸಲಾಗಿದೆ ಎಂದು ದೂರಿದರು.

‘2016ರಲ್ಲಿಯೇ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಪದ ಬಳಕೆ ಮಾಡದಂತೆ ಆದೇಶಿಸಿದೆ. ಆದರೂ ಈ ಬಾರಿಯ ಟಿಇಟಿಯಲ್ಲಿ ಅದೇ ತಪ್ಪು ಮಾಡಲಾಗಿದೆ. ಸಮಾಜದ ವೃತ್ತಿಯನ್ನೇ ಅಣಕಿಸುವಂತೆ ಅವಹೇಳನಕಾರಿ ಪದ ಬಳಕೆ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಆಗದು. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಇಲಾಖೆಯ ಸ್ಪಷ್ಟನೆ: ‘ಅಭ್ಯರ್ಥಿ ಭಾವಚಿತ್ರ ಬದಲಾವಣೆ ಪ್ರಮಾದ ಇಲಾಖೆಯಿಂದ ಆದ ಲೋಪವಲ್ಲ. ಪರೀಕ್ಷೆ ತೆಗೆದುಕೊಂಡ ಪ್ರತಿ ಅಭ್ಯರ್ಥಿಯೂ ಸ್ವತಃ ಯೂಸರ್‌ ಐಡಿ, ಪಾಸ್‌ವರ್ಡ್‌ ಬಳಸಿ ನೋಂದಣಿ ಮಾಡಿಕೊಳ್ಳುತ್ತಾರೆ. ಎಲ್ಲ ಮಾಹಿತಿ, ಪೋಟೊ ಅವರೇ ಅಪ್‌ಲೋಡ್‌ ಮಾಡುತ್ತಾರೆ. ಎಲ್ಲ ಮಾಹಿತಿ ಸರಿ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅವಕಾಶವಿರುತ್ತದೆ. ನಂತರವೇ ನಿಗದಿತ ಅರ್ಜಿ ಶುಲ್ಕ ಪಾವತಿಸಬಹುದು. ಅರ್ಜಿಯ ಮುದ್ರಿತ ಪ್ರತಿ ಪಡೆಯಬಹುದು. ಇಲಾಖೆಯ ತಂತ್ರಾಂಶ ಸಂಪೂರ್ಣ ಸುರಕ್ಷತೆ ಹೊಂದಿದೆ. ಹಾಗಾಗಿ, ಯಾವುದೇ ಲೋಪವಾಗಿಲ್ಲ’ ಎಂದು ಆಯುಕ್ತರ ಕಚೇರಿ ಸ್ಪಷ್ಟನೆ ನೀಡಿದೆ.

ಅಭ್ಯರ್ಥಿ ಬದಲು ಸನ್ನಿ ಲಿಯೋನ್ ಚಿತ್ರ!
ಶಿವಮೊಗ್ಗ:
ನಗರದಲ್ಲಿ ಮಂಗಳವಾರ ನಡೆದಿದ್ದ ಶಿಕ್ಷಕರ ಸಾಮಾನ್ಯ ಅರ್ಹತಾ ಪರೀಕ್ಷೆ (ಟಿಇಟಿ)ಗೆ ಹಾಜರಾಗಿದ್ದ ಮಹಿಳಾ ಅಭ್ಯರ್ಥಿಯ ಪ್ರವೇಶ ಪತ್ರದಲ್ಲಿ ಬಾಲಿವುಡ್‌ ನಟಿ ಸನ್ನಿ ಲಿಯೋನ್ ಚಿತ್ರ ಮುದ್ರಿತವಾಗಿರುವುದು ಗೊತ್ತಾಗಿದೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಮಹಿಳಾ ಅಭ್ಯರ್ಥಿ ಇಲ್ಲಿನ ಎಚ್.ಎಸ್. ರುದ್ರಪ್ಪ, ನ್ಯಾಷನಲ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದರು. ಪರೀಕ್ಷಾ ಪ್ರಾಧಿಕಾರದ ಬಳಿ ಇದ್ದ ಅವರ ಪ್ರವೇಶ ಪತ್ರದಲ್ಲಿ ನಟಿ ಸನ್ನಿ ಲಿಯೋನ್‌ ಅವರ ಅರೆನಗ್ನ ಭಾವಚಿತ್ರ ಮುದ್ರಣಗೊಂಡಿದ್ದು ಕಂಡುಬಂದಿತ್ತು.

‘ಸೈಬರ್ ಸೆಂಟರ್‌ನಲ್ಲಿ ಅಭ್ಯರ್ಥಿಯೇ ಭಾವಚಿತ್ರವನ್ನು ಪ್ರವೇಶ ಪತ್ರದೊಂದಿಗೆ ಅಡಕಗೊಳಿಸುವಾಗ ಈ ಪ್ರಮಾದ ಆಗಿರಬಹುದು. ಅಭ್ಯರ್ಥಿ ಡೌನ್‌ಲೋಡ್‌ ಮಾಡಿಕೊಂಡ ಪ್ರವೇಶ ಪತ್ರದಲ್ಲೂ ಸನ್ನಿ ಲಿಯೋನ್ ಅವರ ಚಿತ್ರ ಇದ್ದು, ಗಮನಿಸಿದ ಅದನ್ನು ಅವರು ಡೌನ್‌ಲೋಡ್‌ ಮಾಡಿಕೊಳ್ಳುವಾಗ ಸರಿಪಡಿಸಿಕೊಂಡಿದ್ದರು. ಆದರೆ, ಶಿಕ್ಷಣ ಇಲಾಖೆಯ ದಾಖಲೆಯಲ್ಲಿದ್ದ ಪ್ರವೇಶ ಪತ್ರದ ಪ್ರತಿಯಲ್ಲಿ ಸನ್ನಿ ಲಿಯೋನ್ ಫೋಟೊ ಇತ್ತು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಮಾದ ಗಮನಕ್ಕೆ ಬಂದ ನಂತರ ಅಭ್ಯರ್ಥಿಯ ಗುರುತಿನ ಪತ್ರ ಪರಿಶೀಲಿಸಿ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ.

ಎಫ್‌ಐಆರ್ ದಾಖಲು: ‘ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದ ಮುಖ್ಯಸ್ಥ ಚನ್ನಪ್ಪ ಅವರು ಬುಧವಾರ ದೂರು ನೀಡಿದ್ದಾರೆ. ಸಿಇಎನ್‌ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ತನಿಖೆ ಕೈಗೊಳ್ಳಲಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು