ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕೆ ಬರುವ ಭ್ರಮೆಯಲ್ಲಿ ಸಿದ್ದರಾಮಯ್ಯ: ವಿ. ಸುನಿಲ್‌ ಕುಮಾರ್‌

ವಿರೋಧ ಪಕ್ಷದ ನಾಯಕರಿಗೆ ಸಚಿವ ವಿ. ಸುನಿಲ್‌ ಕುಮಾರ್‌ ತಿರುಗೇಟು
Last Updated 28 ಡಿಸೆಂಬರ್ 2021, 12:40 IST
ಅಕ್ಷರ ಗಾತ್ರ

ಚಿತ್ರದುರ್ಗ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ಒನಕೆ ಓಬವ್ವ ಜಯಂತಿ ಆಚರಿಸುವ ಬಸವರಾಜ ಬೊಮ್ಮಾಯಿ ಬೇಕೊ ಅಥವಾ ಟಿಪ್ಪು ಜಯಂತಿ ಮಾಡುವ ಸಿದ್ದರಾಮಯ್ಯ ಬೇಕೊ ಎಂಬುದನ್ನು ರಾಜ್ಯದ ಜನರು ತೀರ್ಮಾನಿಸಲಿದ್ದಾರೆ ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ತಿರುಗೇಟು ನೀಡಿದರು.

‘ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಮತಾಂತರ ನಿಷೇಧ ಕಾಯ್ದೆಯನ್ನು ರದ್ದು ಮಾಡಲಾಗುವುದು’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಂಗಳವಾರ ಇಲ್ಲಿ ಪ್ರತಿಕ್ರಿಯೆ ನೀಡಿದರು.

‘ಜನಮಾನಸದಲ್ಲಿ ದೊಡ್ಡಪ್ರಮಾಣದಲ್ಲಿರುವ ಅಭಿಪ್ರಾಯಗಳನ್ನು ಆಧರಿಸಿ ಸರ್ಕಾರ ಕಾಯ್ದೆಗಳನ್ನು ರೂಪಿಸುತ್ತಿದೆ. ಚುನಾವಣೆ ಪೂರ್ವದಲ್ಲಿ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಸಿದ್ದರಾಮಯ್ಯ ಅವರ ಮಾತುಗಳನ್ನು ಜನರು ಗಮನಿಸುತ್ತಿದ್ದಾರೆ’ ಎಂದರು.

‘ಆಸೆ–ಆಮಿಷಗಳನ್ನೊಡ್ಡಿ ಮತಾಂತರ ಮಾಡಬಾರದು ಎಂಬ ಕಾರಣಕ್ಕೆ ಸರ್ಕಾರ ಕಾಯ್ದೆ ರೂಪಿಸುತ್ತಿದೆ. ಕಾಯ್ದೆಯಿಂದ ಹಿಂದುಳಿದ ವರ್ಗಗಳಿಗೆ ಅನುಕೂಲವಾಗಲಿದೆ. ಬಲತ್ಕಾರದ ಮತಾಂತರಕ್ಕೆ ಕಡಿವಾಣ ಹಾಕುವುದು ತಪ್ಪಲ್ಲ. ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿರುವ ಸಿದ್ದರಾಮಯ್ಯ, ರಾಜ್ಯದ ಜನರಿಗೆ ಕೆಟ್ಟ ಸಂದೇಶ ನೀಡುತ್ತಿದ್ದಾರೆ. ಅವರ ಬೆದರಿಕೆಯಿಂದ ಸರ್ಕಾರ ನಿಲುವು ಬದಲಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪುಂಡಾಟಿಕೆ ಸಹಿಸಲ್ಲ; ಎಚ್ಚರಿಕೆ

ರಾಜ್ಯ ಸರ್ಕಾರ ಪುಂಡಾಟಿಕೆ ಸಹಿಸುವುದಿಲ್ಲ. ಪುಂಡಾಟಿಕೆಯನ್ನು ಹದ್ದುಬಸ್ತಿನಲ್ಲಿಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವರೂ ಆಗಿರುವ ಸುನಿಲ್‌ ಕುಮಾರ್‌ ತಿಳಿಸಿದರು.

‘ರಾಜ್ಯದ ಮಹಾಪುರುಷರ ಬಗ್ಗೆ ಸರ್ಕಾರಕ್ಕೆ ಅಪಾರವಾದ ಗೌರವವಿದೆ. ಸಾಹಿತ್ಯ, ಭಾಷೆ, ಸಂಸ್ಕೃತಿಗೆ ಪ್ರಥಮ ಆದ್ಯತೆ ನೀಡುತ್ತ ಬಂದಿದೆ. ಇವುಗಳ ವಿರುದ್ಧ ಧ್ವನಿಯತ್ತುವವರ ಬಗ್ಗೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಂಡಿದೆ. ಹೀಗಾಗಿ, ಕರ್ನಾಟಕ ಬಂದ್‌ ನಡೆಸುವ ಅಗತ್ಯವಿಲ್ಲ. ಪ್ರತಿಭಟನೆ ಮಾಡಿ ಮತ್ತೊಮ್ಮೆ ಗೊಂದಲ ಸೃಷ್ಟಿಸುವುದು ಬೇಡ. ಸರ್ಕಾರದೊಂದಿಗೆ ಸಹಕರಿಸಿ’ ಎಂದು ಮನವಿ ಮಾಡಿದರು.

***

ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹ. ಪಕ್ಷದ ವರಿಷ್ಠರಾದ ಅಮಿತ್‌ ಷಾ ಮತ್ತು ಅರುಣ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ.

– ವಿ.ಸುನಿಲ್‌ ಕುಮಾರ್‌,ಇಂಧನ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT