ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ನಲ್ಲಿ ದಿನವೂ 5 ಲಕ್ಷ ಜನರಿಗೆ ಲಸಿಕೆ: ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟ
Last Updated 24 ಆಗಸ್ಟ್ 2021, 22:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್‌ನಿಂದ ಪ್ರತಿ ದಿನ 5 ಲಕ್ಷ ಜನರಿಗೆ ಕೋವಿಡ್‌ ಲಸಿಕೆ ನೀಡಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬವಸರಾಜ ಬೊಮ್ಮಾಯಿ ಹೇಳಿದರು.

ರಾಜಭವನದಲ್ಲಿ ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಸುಸ್ಥಿರ ಗುರಿಗಳ ಸಹಕಾರ ಹಾಗೂ ಗೀವ್‌ ಇಂಡಿಯಾ ಪ್ರತಿಷ್ಠಾನದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವ್ಯಾಕ್ಸಿನೇಟ್‌ ಇಂಡಿಯಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗ ಪ್ರತಿ ದಿನ 3.5 ರಿಂದ 4 ಲಕ್ಷ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ 1.5 ಕೋಟಿ ಲಸಿಕೆ ಪೂರೈಕೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

‘ಬಡವರು, ದುರ್ಬಲ ವರ್ಗದವರಿಗೆ ಲಸಿಕೆ ನೀಡುವುದು ನಮ್ಮ ಸರ್ಕಾರದ ಆದ್ಯತೆ. ದಾನಿಗಳು ಮತ್ತು ಖಾಸಗಿ ಸಂಸ್ಥೆಗಳು ಸಿಎಸ್‌ಆರ್‌ ನಿಧಿಯ ಮೂಲಕ ಲಸಿಕೆ ನೀಡಲು ಮುಂದಾಗಬೇಕು. ಸರ್ಕಾರ ಮತ್ತು ಸಮಾಜ ಒಟ್ಟಾಗಿ ಕೋವಿಡ್‌ ವಿರುದ್ಧ ಹೋರಾಡ ಬೇಕಾಗಿದೆ’ ಎಂದು ಬೊಮ್ಮಾಯಿ ಹೇಳಿದರು.

ವ್ಯಾಕ್ಸಿನೇಟ್‌ ಇಂಡಿಯಾಗೆ ಚಾಲನೆ ನೀಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ‘ಕೋವಿಡ್‌ ಕಡಿಮೆ ಆಗಿದೆ ಎಂದು ಸಾರ್ವಜನಿಕರು ಮೈಮರೆಯಬಾರದು, ಕಡ್ಡಾಯವಾಗಿ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್‌ ಧರಿಸುವುದನ್ನು ಬಿಡಬಾರದು. ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ. ಲಸಿಕೆಗೆ ಪರ್ಯಾಯ ಯಾವುದೂ ಇಲ್ಲ. ಜಂಕ್‌ ಫುಡ್‌ ಸೇವಿಸದೇ ಭಾರತೀಯ ಸಾಂಪ್ರದಾಯಿಕ ಆಹಾರ ಸೇವಿಸುವುದು ಉತ್ತಮ’ ಎಂದು ಸಲಹೆ ನೀಡಿದರು.

ರಾಜ್ಯಪಾಲ ಥಾವರಚಂದ್‌ ಗೆಹಲೋತ್, ಸಚಿವರಾದ ಡಾ.ಕೆ.ಸುಧಾಕರ, ಮುನಿರತ್ನ, ಸಂಸದ ಪಿ.ಸಿ.ಮೋಹನ್‌ ಭಾಗವಹಿಸಿದ್ದರು.

ಹೆಚ್ಚು ಲಸಿಕೆ ಪೂರೈಕೆಗೆ ನಾಯ್ಡು ಶಿಫಾರಸು:

‘ರಾಜ್ಯಕ್ಕೆ ಹೆಚ್ಚು ಲಸಿಕೆಯ ಅಗತ್ಯವಿದ್ದು ಈ ಸಂಬಂಧ ಕೇಂದ್ರ ಆರೋಗ್ಯ ಸಚಿವರಿಗೆ ಒಂದು ಮಾತು ಹೇಳಬೇಕು’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆಕಾರ್ಯಕ್ರಮದ ಬಳಿಕ ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ವೆಂಕಯ್ಯ ನಾಯ್ಡು ಅವರು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಅವರಿಗೆ ದೂರವಾಣಿ ಕರೆ ಮಾಡಿ ಕರ್ನಾಟಕಕ್ಕೆ ಹೆಚ್ಚು ಲಸಿಕೆ ಪೂರೈಕೆಗೆ ಮನವಿ ಮಾಡಿದರು. ‘ಈಗ ನೀಡುತ್ತಿರುವುದಕ್ಕಿಂತ ಶೇ 20 ರಷ್ಟು ಹೆಚ್ಚುವರಿ ಲಸಿಕೆ ಪೂರೈಸುವುದಾಗಿ ಮಾಂಡವಿಯಾ ಭರವಸೆ ನೀಡಿದರು’ ಎಂದು ನಾಯ್ಡು ಅವರು ಸಂಜೆ ರಾಜಭವನದಲ್ಲಿ ನಡೆದ ಚಹಾ ಕೂಟದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT