ಬುಧವಾರ, ಜುಲೈ 28, 2021
29 °C

ಕೈಗಳ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ: ಜಯದೇವ ನಿರ್ದೇಶಕ ಡಾ. ಮಂಜುನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋವಿಡ್‌ ಸಮಯದಲ್ಲಿ ಕೈಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಅಭ್ಯಾಸ ನಮ್ಮ ದಿನಚರಿಯ ಭಾಗವಾಗಬೇಕು. ಹಾಗಾದಲ್ಲಿ  ಸೋಂಕಿನ ಅಪಾಯದಿಂದ ಪಾರಾಗಬಹುದು. ಎಳೆಯ ವಯಸ್ಸಿನಿಂದಲೇ ಮಕ್ಕಳಲ್ಲಿ ಈ ಅಭ್ಯಾಸ ಬೆಳೆಸಬೇಕು’ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ತಿಳಿಸಿದರು.

ವಸಂತ ಪ್ರಕಾಶನ ಹೊರತಂದಿರುವ ಡಾ.ವಸುಂಧರಾ ಭೂಪತಿ ಸಂಪಾದಕತ್ವದ ‘ಆರೋಗ್ಯ ಚಿಂತನ ಮಾಲಿಕೆ’ಯ ಮೂರನೇ ಕಂತಿನ 11 ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನನಗಾಗಿ ಒಂದು ತಾಸು ಚಲಿಸು. ನಿನಗಾಗಿ ನಾನು ಮಿಡಿಯುತ್ತೇನೆ ಎಂದು ಹೃದಯ ಹೇಳುತ್ತದೆ. ಆದರೆ ಬಹುತೇಕ ಮಂದಿ 45 ನಿಮಿಷ ಮಾತನಾಡಿ ಕೇವಲ ನಾಲ್ಕು ನಿಮಿಷ ನಡೆಯುತ್ತಾರೆ. ಆರೋಗ್ಯದ ದೃಷ್ಟಿಯಿಂದ ಸಾಧ್ಯವಾದಷ್ಟು ಸಮಯವನ್ನು ನಡಿಗೆಗೆ ಮೀಸಲಿಡಬೇಕು. ಹಾಸ್ಯ ಪ್ರವೃತ್ತಿಯನ್ನೂ ಮೈಗೂಡಿಸಿಕೊಳ್ಳಬೇಕು’ ಎಂದರು.

‘ಬಹುತೇಕ ಮಂದಿ ಆಸ್ಪತ್ರೆಯ ಬಿಲ್‌ ಭರಿಸಿಯೇ ಬಡವರಾಗುತ್ತಿದ್ದಾರೆ. ಕೋವಿಡ್‌ನಿಂದಾಗಿ ಪ್ರತಿಯೊಬ್ಬರಿಗೂ ಆರೋಗ್ಯದ ಮಹತ್ವ ಮನದಟ್ಟಾಗಿದೆ. ಮುಖಗವಸು ಈಗ ಎಲ್ಲರ ಸಂಗಾತಿಯಾಗಿದೆ. ಕೊರೊನಾ ಸೋಂಕು ದೇಹಕ್ಕಷ್ಟೇ ಅಲ್ಲ ಮನಸ್ಸಿಗೂ ತಾಗಿದೆ. ನಮ್ಮ ನಿಜವಾದ ಬಾಳ ಸಂಗಾತಿ ದೇಹ. ಅದರ ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಆಧಾರಿತ ಕಾಯಿಲೆಗಳು ಹೆಚ್ಚುತ್ತಿವೆ. ಭಾರತದಲ್ಲಿ ಶೇ 50ರಿಂದ 60ರಷ್ಟು ಮರಣ ಪ್ರಕರಣಗಳು ಈ ಕಾಯಿಲೆಗಳಿಂದ ಸಂಭವಿಸುತ್ತಿವೆ’ ಎಂದು ತಿಳಿಸಿದರು.

ನಟ ಮುಖ್ಯಮಂತ್ರಿ ಚಂದ್ರು ‘ನಾನು ಐದು ಬಗೆಯ ರೋಗಗಳಿಂದ ಬಳಲುತ್ತಿದ್ದೇನೆ. ಹೀಗಿದ್ದರೂ ಬಹಳ ಆನಂದದಿಂದ ಬದುಕು ಸಾಗಿಸುತ್ತಿದ್ದೇನೆ. ಮನುಷ್ಯ ಸಂಘಜೀವಿಯಾಗಿ, ಸಂತೋಷವಾಗಿ, ಕಷ್ಟ ಸುಖವನ್ನು ಸಮಾನವಾಗಿ ಸ್ವೀಕರಿಸುತ್ತಾ ಬಾಳಬೇಕು’ ಎಂದರು.

ಹಿರಿಯ ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ ‘ಬದುಕಿನ ಬೇರೆ ಬೇರೆ ರಂಗಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಸಾಹಿತ್ಯ ರಚಿಸಬೇಕು. ಅದು ಕನ್ನಡದಲ್ಲಿರಬೇಕು ಎಂಬ ಕನಸು ನನ್ನಲ್ಲಿತ್ತು. ನಮ್ಮಲ್ಲಿ 100ಕ್ಕೆ 80 ಜನ ಕನ್ನಡ ರೋಗಿಗಳು (ಕನ್ನಡದಲ್ಲಿ ವ್ಯವಹರಿಸುವವರು) ಇದ್ದಾರೆ. ಅವರಿಗೆ ಕನ್ನಡ ಮಾತನಾಡಬಲ್ಲ ವೈದ್ಯರ ಅಗತ್ಯವಿದೆ. ಅನೇಕ ವೈದ್ಯರು ಕನ್ನಡದಲ್ಲಿ ಪುಸ್ತಕಗಳನ್ನು ಬರೆಯುತ್ತಿದ್ದಾರೆ. ರೋಗಿಗಳೊಂದಿಗೂ ಮಾತೃಭಾಷೆಯಲ್ಲೇ ವ್ಯವಹರಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ’ ಎಂದು ಹೇಳಿದರು.

ಹಿರಿಯ ಹೃದ್ರೋಗ ತಜ್ಞ ಡಾ.ಸುರೇಶ್‌ ಸಗರದ, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಡಾ.ಕೆ.ಎಸ್‌.ರವೀಂದ್ರನಾಥ, ಡಾ.ವಸುಂಧರಾ ಭೂಪತಿ ಇದ್ದರು.

ಬಿಡುಗಡೆಯಾದ ಕೃತಿಗಳು

ಅಸಮಾಧಾನದಿಂದ ಸಮಾಧಾನದ ಕಡೆಗೆ (ಡಾ.ಸಿ.ಆರ್‌.ಚಂದ್ರಶೇಖರ್‌), ರೋಗ ನಿರೋಧಕ ಶಕ್ತಿಗೆ ಮನೆ ಔಷಧಿ, ಗಣೇಶನ ಪೂಜೆಯ 21 ಪತ್ರೆಗಳು ಮತ್ತು ಆರೋಗ್ಯ (ಡಾ.ವಸುಂಧರಾ ಭೂಪತಿ), ಕೋವಿಡ್–19, ಹೃದಯಾಘಾತ, ಕ್ಯಾನ್ಸರ್ (ಡಾ.ಪಿ.ಎಸ್‌.ಶಂಕರ್‌), ಇಮ್ಯುನಿಟಿಗಾಗಿ ಆಹಾರ (ಡಾ.ಎಚ್‌.ಎಸ್‌.ಪ್ರೇಮ), ಮನಸ್ಸಿಗೂ ಸೋಂಕು (ಡಾ.ಕೆ.ಎಸ್‌.ಪವಿತ್ರ), ಆರೋಗ್ಯ ಸಂಚಯ (ಡಾ.ಎನ್‌.ಗೋಪಾಲಕೃಷ್ಣ), ಆರೋಗ್ಯ ತರಂಗ (ಡಾ.ಪಿ.ಸತ್ಯನಾರಾಯಣ ಭಟ್‌), ಸ್ವಾಸ್ಥ್ಯದಾಯಕ ಯೋಗ ಪಂಚಕ (ಡಾ.ಎಸ್‌.ಎನ್‌.ಓಂಕಾರ್‌).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು