ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲಿ ತೀರ್ಪು ಬರೆದಿದ್ದ ವಾಸುದೇವ ಮೂರ್ತಿ ನಿಧನ

Last Updated 29 ಮೇ 2021, 15:48 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಥಮ ಬಾರಿಗೆ ಕನ್ನಡದಲ್ಲಿ ತೀರ್ಪನ್ನು ಬರೆಯುವ ಜತೆಗೆ ನ್ಯಾಯಾಲಯದಲ್ಲಿ ಕನ್ನಡ ಅನುಷ್ಠಾನಕ್ಕೆ ಶ್ರಮಿಸಿದ್ದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ.ವಿ. ವಾಸುದೇವ ಮೂರ್ತಿ (83) ಅವರು ಹೃದಯಾಘಾತದಿಂದ ಶನಿವಾರ ನಿಧನರಾದರು.

ಅವರು ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಹನುಮಂತನಗರದಲ್ಲಿ ವಾಸವಾಗಿದ್ದ ಅವರು, ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಇವರು ಪತ್ನಿಯನ್ನು ಅಗಲಿದ್ದಾರೆ. ಸಂಜೆ 6.30ಕ್ಕೆ ಚಾಮರಾಜಪೇಟೆಯ ಟಿಆರ್ ಮಿಲ್ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿದೆ.

ವೆಂಕಟರಮಣ ಶ್ರೇಷ್ಠಿ ಮತ್ತು ವೆಂಕಟಲಕ್ಷಮಮ್ಮ ಅವರ ನಾಲ್ಕನೇ ಪುತ್ರರಾದ ವಾಸುದೇವ ಅವರು, ಸಮಾಜಸೇವೆ, ಸಾಹಿತ್ಯ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಕಾನೂನು ಪದವಿ ಪಡೆದ ಬಳಿಕ ಅವರು, ಶಿವಮೊಗ್ಗದ ನ್ಯಾಯವಾದಿ ವೆಂಕಟರಾಮಾಶಾಸ್ತ್ರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸಿ, ತರೀಕೆರೆಯಲ್ಲಿ ನ್ಯಾಯವಾದಿಯಾಗಿ ಜನಮನ್ನಣೆ ಪಡೆದರು. 1971ರಲ್ಲಿ ನ್ಯಾಯಾಧೀಶರಾಗಿ ನೇಮಕವಾದ ಅವರು, ನ್ಯಾಯಾಂಗ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕನ್ನಡದಲ್ಲಿ ತೀರ್ಪನ್ನು ಬರೆದರು. ಅತ್ಯುತ್ತಮ ತೀರ್ಪು ಬರೆಹಕ್ಕಾಗಿ ರಾಜ್ಯ ಸರ್ಕಾರದಿಂದ ಎರಡು ವರ್ಷ ಪುರಸ್ಕೃತರಾಗಿದ್ದರು.

ಕರ್ನಾಟಕ ಕಾನೂನು ಮಂಡಳಿಯ ಕಾರ್ಯದರ್ಶಿಯಾಗಿ ಕೂಡ ಸೇವೆ ಸಲ್ಲಿಸಿದ್ದರು. ಲಕ್ಷಾಂತರ ಪ್ರಕರಣಗಳನ್ನು ಜನತಾ ನ್ಯಾಯಾಲಯದ ಮೂಲಕ ತೀರುವಳಿ ಮಾಡಿಸಿ, ₹ 200 ಕೋಟಿಗೂ ಅಧಿಕ ಪರಿಹಾರದ ಹಣವನ್ನು ಜನರಿಗೆ ಕೊಡಿಸಿದ್ದರು

ದೆಹಲಿಯ ರಾಷ್ಟ್ರೀಯ ಪರಿಸರ ಮೇಲ್ಮನವಿ ಪ್ರಾಧಿಕಾರದ ರಿಜಿಸ್ಟ್ರಾರ್‌ ಆಗಿದ್ದ ಅವರು, ಬಳಿಕ ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ವಿಜಿಲೆನ್ಸ್ ನಿರ್ದೇಶಕರಾಗಿದ್ದರು. ತಿಂಗಳಿಗೆ ಕೇವಲ ₹ 1 ವೇತನ ಪಡೆಯುತ್ತಿದ್ದರು. ನಾಲ್ಕೂವರೆ ವರ್ಷ ಕಾರ್ಯನಿರ್ವಹಿಸಿದ ಅವರು, ಆ ವೇಳೆ ಮಹಾನಗರ ಪಾಲಿಕೆಯ ಅನೇಕ ಭ್ರಷ್ಟಾಚಾರವನ್ನು ಬಯಲಿಗೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT