ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಗ ರಾಜೀನಾಮೆಗೆ ವಾಟಾಳ್‌ ಆಗ್ರಹ

Last Updated 6 ಏಪ್ರಿಲ್ 2022, 14:56 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊಲೆ ಪ್ರಕರಣದ ವಿಚಾರದಲ್ಲೂ ಗೃಹ ಸಚಿವ ಆರಗ ಜ್ಞಾನೇಂದ್ರ ಸಣ್ಣ ಮಕ್ಕಳಂತೆ ಹುಡುಗಾಟ ಆಡುತ್ತಿದ್ದಾರೆ. ಸುಳ್ಳು ಮಾಹಿತಿ ನೀಡಿರುವ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಮುಖ್ಯಸ್ಥ ವಾಟಾಳ್‌ ನಾಗರಾಜ್‌ ಆಗ್ರಹಿಸಿದರು.

ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ಉರ್ದು ಭಾಷೆಯಲ್ಲಿ ಮಾತನಾಡಿಲ್ಲ ಎಂಬ ಕಾರಣಕ್ಕಾಗಿ ಯುವಕನ ಕೊಲೆಯಾಗಿದೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದರು. ಈಗ ತಮ್ಮಿಂದ ತಪ್ಪಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಗುಪ್ತದಳದಿಂದ ಮಾಹಿತಿ ಪಡೆಯದೇ ಜ್ಞಾನೇಂದ್ರ ತಪ್ಪು ಮಾಹಿತಿ ನೀಡಿದ್ದಾರೆ. ಗುಪ್ತಚರ ವೈಫಲ್ಯವೂ ಎದ್ದು ಕಾಣುತ್ತಿದೆ’ ಎಂದರು.

ಗೃಹ ಸಚಿವರ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು, ‘ಕನ್ನಡದವರು ಸುಮ್ಮನೆ ಕೂತಿದ್ದೀರಾ’ ಎಂಬ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗಿದೆ. ಅವರಿಗೆ ಗೃಹ ಸಚಿವರ ಸ್ಥಾನ ಏಕೆ ಕೊಟ್ಟರು ಎಂಬ ಚರ್ಚೆ ಈಗ ಬೇಡ. ಕೂಡಲೇ ರಾಜೀನಾಮೆ ನೀಡುವುದು ಒಳ್ಳೆಯದು ಎಂದು ಹೇಳಿದರು.

‘ಜ್ಞಾನೇಂದ್ರ ಅವರೇ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಿ. ನೀವು ರಾಜೀನಾಮೆ ಕೊಟ್ಟರೆ ನಿಮಗೂ ಘನತೆ ಬರುತ್ತದೆ, ಗೃಹ ಸಚಿವರ ಸ್ಥಾನದ ಮಾನವೂ ಉಳಿಯುತ್ತದೆ’ ಎಂದರು.

‘ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ರಾಷ್ಟ್ರಕವಿ ಕುವೆಂಪು ಬಣ್ಣಿಸಿದ್ದರು. ಆದರೆ, ಈಗ ಇಲ್ಲಿ ಏನಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ನಾವು ರಾಜ್ಯವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ ಎಂದು ಕೆಲವರು ಭಾವಿಸಿದ್ದಾರೆ. ಹಿಜಾಬ್‌, ದೇವಸ್ಥಾನ, ಹಲಾಲ್‌ ಕಟ್‌, ಜಟ್ಕಾ ಕಟ್‌ ಆಯಿತು. ಈಗ ಮಾವಿನ ಹಣ್ಣು ಬಂದಿದೆ. ನನ್ನ ತೋಟದ ಮಾವಿನ ಹಣ್ಣನ್ನು ಮುಸ್ಲಿಮರಿಗೆ ಕೊಟ್ಟಿದ್ದೇನೆ’ ಎಂದು ವಾಟಾಳ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT