ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಸಮಾಜದ ಮೂರನೇ ಪೀಠ ಅಸ್ತಿತ್ವಕ್ಕೆ

ಮೊದಲ ಜಗದ್ಗುರು ಬಬಲೇಶ್ವರ ಬೃಹನ್ಮಠದ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಪೀಠಾರೋಹಣ
Last Updated 13 ಫೆಬ್ರುವರಿ 2022, 19:35 IST
ಅಕ್ಷರ ಗಾತ್ರ

ಬಾಗಲಕೋಟೆ: ಸಮಾಜ ಒಡೆಯುವ, ಬೆಸೆಯುವ ಆರೋಪ–ಪ್ರತ್ಯಾರೋಪಗಳ ನಡುವೆಯೇ ಜಮಖಂಡಿ ತಾಲ್ಲೂಕಿನ ಆಲಗೂರಿನ ಕೃಷ್ಣಾ ನದಿ ತೀರದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ಮೂರನೇ ಪೀಠ ಭಾನುವಾರ ಅಸ್ತಿತ್ವಕ್ಕೆ ಬಂದಿತು.

ಪೀಠದ ಮೊದಲ ಜಗದ್ಗುರು ಆಗಿ ಬಬಲೇಶ್ವರದ ಬೃಹನ್ಮಠದ ಷ.ಬ್ರ. ಮಹಾದೇವ ಶಿವಾಚಾರ್ಯ ಸ್ವಾಮೀಜಿ ಪೀಠಾರೋಹಣ ಮಾಡಿದರು. ಈ ವೇಳೆಶ್ರೀಗಳಿಗೆ ಹರಿಹರದ ವೀರಶೈವ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ರುದ್ರಾಕ್ಷಿ ಕಿರೀಟ ತೊಡಿಸಿದರು. ಇದಕ್ಕೆ ಸಮುದಾಯದ ಸಾವಿರಾರು ಭಕ್ತರು, ನಾಡಿನ ಹರಗುರು ಚರಮೂರ್ತಿಗಳು, ಗಣ್ಯರು ಸಾಕ್ಷಿಯಾದರು.

ಶ್ರೀಗಳಿಂದ ಪಟ್ಟಾಧಿಕಾರ ಸ್ವೀಕಾರ ಹಿನ್ನೆಲೆಯಲ್ಲಿ ನಸುಕಿನ ಬ್ರಾಹ್ಮಿ ಮುಹೂರ್ತದಲ್ಲಿಪಂಚಮಸಾಲಿ ಮಠಾಧೀಶರ ಒಕ್ಕೂಟದ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ಜರುಗಿದವು. ಮಹಾದೇವ ಶಿವಾಚಾರ್ಯ ಸ್ವಾಮೀಜಿಗೆ ರುದ್ರಾಭಿಷೇಕ ನಡೆಯಿತು.ಅರಿಸಿನ, ಗಂಧ ಲೇಪಿಸಿ ಹಾಲು, ಜೇನು, ತುಪ್ಪ, ಸಕ್ಕರೆ, ಪಂಚಾಮೃತ ಅಭಿಷೇಕ ಮಾಡಲಾಯಿತು. ಈ ವೇಳೆ ಒಕ್ಕೂಟದ ಸ್ವಾಮೀಜಿಗಳು ಪರಸ್ಪರ ಅರಿಸಿನ ಬಳಿದುಕೊಂಡರು. ನಂತರ ಮಂತ್ರ ಪಠಿಸಲಾಯಿತು. ಪೀಠಾರೋಹಣಕ್ಕೆ ಮುನ್ನ ಸಮೀಪದ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ತೆರಳಿ ಡಾ.ಮಹಾದೇವ ಶಿವಾಚಾರ್ಯರು ಕೃಷ್ಣಾನದಿಗೆ ಆರತಿ ಮಾಡಿದರು.

ಹರಿಹರವೇ ಮೂಲ ಪೀಠ:
‘ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹರಿಹರ ಮಠವೇ ಮೂಲಪೀಠ. ಆಲಗೂರಿನ ಪೀಠ ಅದರ ಸಮಾನವಾಗಿ ಕೆಲಸ ಮಾಡಲಿದೆ’ ಎಂದು ಸಂಘಟಕರು ಘೋಷಣೆ ಮಾಡಿದರು.

ಪೀಠಾರೋಹಣ ಸಮಾರಂಭಕ್ಕೆ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಗೈರು ಹಾಜರಾಗಿದ್ದರು. ಸಮಾರಂಭಕ್ಕೆ ಬಂದಿದ್ದ ಕೂಡಲಸಂಗಮ ಪೀಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಪ್ರಭಣ್ಣ ಹುಣಶಿಕಟ್ಟಿ ಅವರನ್ನು ಸನ್ಮಾನಿಸಲಾಯಿತು.

'ಮೂರನೇ ಪೀಠ ಸ್ಥಾಪನೆ ಪಂಚಮಸಾಲಿ ಸಮಾಜವನ್ನು ಒಡೆಯುವುದಕ್ಕಲ್ಲ. ಬದಲಿಗೆ ಒಂದು ಮಾಡುವುದು ಆಗಿದೆ. ಸಮಾಜ ಒಡೆಯಲಾಗುತ್ತಿದೆ ಎಂದು ಹೇಳುವವರ ಮಾತು ಯಾರೂ ನಂಬಬೇಡಿ' ಎಂದು ಪ್ರಭಣ್ಣ ಮನವಿ ಮಾಡಿದರು.

ನಿರಾಣಿ ಸಿ.ಎಂ ಆಗಲಿದ್ದಾರೆ:
‘ಬಸವರಾಜ ಬೊಮ್ಮಾಯಿ ಅವರ ಅಧಿಕಾರಾವಧಿ ಇನ್ನು 12 ತಿಂಗಳು ಇದೆ. ಮುಂದಿನ ಅವಧಿಗೆ ಮುರುಗೇಶ ನಿರಾಣಿ ಮುಖ್ಯಮಂತ್ರಿ ಆಗಲಿದ್ದಾರೆ. ನಿರಾಣಿ ಕೇಂದ್ರದಲ್ಲೂ ಅತ್ಯಂತ ಪ್ರಭಾವಿ ವ್ಯಕ್ತಿ’ ಎಂದು ಕಲಬುರ್ಗಿಯ ಸುಲಫಲ ಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಸಮಾರಂಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ರಾಮದುರ್ಗದ ಶಾಸಕ ಮಹಾದೇವಪ್ಪ ಯಾದವಾಡ, ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ, ಕೆಆರ್‌ಐಡಿಎಲ್‌ ಅಧ್ಯಕ್ಷ ರುದ್ರೇಶ್, ಸ್ವಾಗತ ಸಮಿತಿ ಅಧ್ಯಕ್ಷ ಸಂಗಮೇಶ ನಿರಾಣಿ ಪಾಲ್ಗೊಂಡಿದ್ದರು.

ನಾವು ಪಂಚಮಸಾಲಿಗಳ ವಿರೋಧಿಗಳಲ್ಲ: ವಿಜಯೇಂದ್ರ

'ಯಡಿಯೂರಪ್ಪ ಕುಟುಂಬ ಪಂಚಮಸಾಲಿ ಸಮಾಜದ ವಿರೋಧಿ ಅಲ್ಲ. ನಮ್ಮ ತಂದೆ, ಯಡಿಯೂರಪ್ಪ ಅವರು ಸಿ.ಎಂ. ಆಗಿದ್ದಾಗಲೇ ಈ ಸಮಾಜಕ್ಕೆ ಪ್ರವರ್ಗ 3ಬಿ ಅಡಿ ಮೀಸಲಾತಿ ಕಲ್ಪಿಸಿದ್ದರು' ಎಂದು ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಕೆಲವು ತಿಂಗಳ ಹಿಂದೆ ನನ್ನ ತಂದೆ ಹಾಗೂ ನನ್ನನ್ನು ಪಂಚಮಸಾಲಿ ಸಮಾಜದ ವಿರೋಧಿಗಳು ಎಂಬಂತೆ ಬಿಂಬಿಸುವ ಕೆಲಸ ಕೆಲವರು ವ್ಯವಸ್ಥಿತವಾಗಿ ಮಾಡಿದ್ದರು. ಪಂಚಮಸಾಲಿಗಳು ಸೇರಿದಂತೆ ಎಲ್ಲ ಸಮಾಜದವರನ್ನು ಒಗ್ಗೂಡಿಸುವ ಕೆಲಸವನ್ನು ಯಡಿಯೂರಪ್ಪ ಮಾಡಿದ್ದಾರೆ ಎಂದರು.

'ನಾಲಿಗೆ ರುಚಿ ಬಿಟ್ಟರೆ ಆರೋಗ್ಯಕ್ಕೆ ಲಾಭ, ವಾದ-ವಿವಾದಗಳನ್ನು ಬಿಟ್ಟರೆ ನಮ್ಮ ಸಂಬಂಧಕ್ಕೆ ಲಾಭ, ವ್ಯರ್ಥ ಚಿಂತನೆಗಳನ್ನು ಬಿಟ್ಟರೆ ಜೀವನಕ್ಕೆ ಲಾಭ' ಎಂದು ಮಾರ್ಮಿಕವಾಗಿ ವಿರೋಧಿಗಳಿಗೆ ಸಂದೇಶ ನೀಡಿದರು.

₹1 ಕೋಟಿ ದೇಣಿಗೆ ಘೋಷಣೆ

ಪಂಚಮಸಾಲಿ ಸಮಾಜದ ಮೂರನೇ ಪೀಠದ ಅಭಿವೃದ್ಧಿಗೆ ತಮ್ಮ ಕುಟುಂಬದಿಂದ ₹1 ಕೋಟಿ ದೇಣಿಗೆಯನ್ನು ಸಚಿವ ಮುರುಗೇಶ ನಿರಾಣಿ ಘೋಷಿಸಿದರು. ಅದರಲ್ಲಿ ₹50 ಲಕ್ಷ ಇಂದಿನ ಕಾರ್ಯಕ್ರಮಕ್ಕೆ ಖರ್ಚು ಮಾಡಲಾಗಿದೆ. ಉಳಿದ ₹50 ಲಕ್ಷ ಮಠದ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಲಾಗುವುದು. 10 ಎಕರೆ ಜಮೀನು ಕೊಡುವುದಾಗಿ ಹೇಳಿದರು. ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿಮುರುಗೇಶ ನಿರಾಣಿ–ಕಮಲಾ ದಂಪತಿ ವೇದಿಕೆಯಲ್ಲಿ ಕೂರಿಸಿ ಬೆಳ್ಳಿ ಗದೆ ನೀಡಿ ಮಠಾಧೀಶರ ಒಕ್ಕೂಟದಿಂದ ಸನ್ಮಾನಿಸಲಾಯಿತು.

ಗಣ್ಯರು, ಶ್ರೀಗಳು ಗೈರು..

ಸಮಾರಂಭಕ್ಕೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆರ್ಟ್‌ ಆಫ್‌ ಲೀವಿಂಗ್‌ನ ರವಿಶಂಕರ ಗುರೂಜಿ ಬರಲಿದ್ದಾರೆ ಎಂದು ಸಂಘಟಕರು ಹೇಳಿದ್ದರು. ಅವರು ಬರಲಿಲ್ಲ. ಪಂಚಮಸಾಲಿ ಸಮಾಜದವರೇ ಆದ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ತೇರದಾಳ ಶಾಸಕ ಸಿದ್ದು ಸವದಿ ಗೈರು ಹಾಜರಾಗಿದ್ದರು.

***

ಮೂರನೇ ಪೀಠ ಯಾರ ವಿರೋಧಿಯೂ ಅಲ್ಲ, ಯಾರ ಪರವೂ ಅಲ್ಲ. ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ಒದಗಿಸಲು ಈ ಪೀಠ ಸ್ಥಾಪಿಸಲಾಗಿದೆ.


- ಮುರುಗೇಶ ನಿರಾಣಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ

***

ಕೂಡಲಸಂಗಮದ ಶ್ರೀಗಳು ಯಾರದ್ದೋ ಒತ್ತಡದಿಂದ ವಿರೋಧ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರೂ ನಮ್ಮೊಂದಿಗೆ ಸೇರಿ ಸಮಾಜದ ಸಂಘಟನೆ ಮಾಡಲಿದ್ದಾರೆ.

- ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಪಂಚಮಸಾಲಿ ಸಮಾಜದ ಮೂರನೇ ಪೀಠದ ನೂತನ ಪೀಠಾಧಿಪತಿ

***

ಅಲ್ಲಿ ಉಂಬುವವನು ಸಂಗಯ್ಯ, ಇಲ್ಲಿ ಉಂಬುವವನು ಸಂಗಯ್ಯ ಎಂಬುವಂತೆ ನಮ್ಮ ಪೀಠದ ಭಕ್ತರು ವೀರಶೈವ ಹಾಗೂ ಲಿಂಗಾಯತ ಎರಡೂ ಸಂಪ್ರದಾಯಕ್ಕೆ ನಡೆದುಕೊಳ್ಳಲಿದ್ದಾರೆ.

ವಚನಾನಂದ ಸ್ವಾಮೀಜಿ, ಜಗದ್ಗುರು, ಹರಿಹರ ಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT