ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಸಚಿವ ಆನಂದ್‌ ಸಿಂಗ್‌ ಬಂಗಲೆ ‘ರಕ್ಷಿಸಲು’ ವಾಹನ ಸಂಚಾರ ನಿರ್ಬಂಧ!

ಧೂಳು, ‘ಹಾರ್ನ್‌’ ಕಿರಿಕಿರಿ ತಪ್ಪಿಸಲು ಕ್ರಮ; ಮೂರು ಪಾಳಿಯಲ್ಲಿ ಪೊಲೀಸರಿಗೆ ಕೆಲಸ
Last Updated 9 ಅಕ್ಟೋಬರ್ 2020, 20:30 IST
ಅಕ್ಷರ ಗಾತ್ರ

ಹೊಸಪೇಟೆ: ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರ ಬಂಗ್ಲೆಯ ಮೇಲೆ ದೂಳು ಆವರಿಸುತ್ತದೆ ಎಂದು ಹೊರವರ್ತುಲ ರಸ್ತೆಯಲ್ಲಿ ಲಾರಿ ಸೇರಿದಂತೆ ಇತರೆ ಸರಕು ಸಾಗಣೆ ವಾಹನಗಳ ಸಂಚಾರದ ಮೇಲೆ ಪೊಲೀಸರು ನಿರ್ಬಂಧ ಹೇರಿದ್ದಾರೆ!

ಸರಕು ಸಾಗಣೆ ವಾಹನಗಳ ಸಂಚಾರ ತಡೆಗೆ ಹೊರವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಅಲ್ಲೆಲ್ಲ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ. ಪೊಲೀಸರು ಹಗಲು–ರಾತ್ರಿ ಮೂರು ಪಾಳಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಗುರುವಾರ ತಡರಾತ್ರಿ ‘ಪ್ರಜಾವಾಣಿ’ ಸ್ಥಳಕ್ಕೆ ಭೇಟಿ ನೀಡಿದಾಗ ಈ ವಿಷಯ ಗಮನಕ್ಕೆ ಬಂತು.

ವರ್ತುಲ ರಸ್ತೆಯ ಈ ಭಾಗದಲ್ಲಿ ಸಂಚಾರ ನಿರ್ಬಂಧಿಸಿರುವ ಕಾರಣ ಭಾರಿ ವಾಹನಗಳು ನಗರದ ಮಧ್ಯದಿಂದ ಸಂಚರಿಸುತ್ತಿವೆ. ಉಕ್ಕಿನ ಕೈಗಾರಿಕೆಗಳು, ಬಾಳೆ, ಭತ್ತ ಹಾಗೂ ಕಬ್ಬಿನ ಗದ್ದೆಗಳಿಂದ ಕೃಷಿ ಉತ್ಪನ್ನಗಳನ್ನು ಇದೇ ಮಾರ್ಗದಲ್ಲಿ ಸಾಗಿಸಲಾಗುತ್ತಿತ್ತು. ಈ ವಾಹನಗಳು ಈಗ ಬಳಸಿ ಹೋಗುವಂತಾಗಿದೆ. ಸಂಚಾರ ನಿರ್ಬಂಧಿಸಿದ್ದನ್ನು ವಿರೋಧಿಸಿ ಇತ್ತೀಚೆಗೆ ರೈತರು ಪೊಲೀಸರೊಂದಿಗೆ ಜಟಾಪಟಿಗೂ ಇಳಿದಿದ್ದರು.

ಭಾರಿ ವಾಹನಗಳೆಲ್ಲ ಸಂಚರಿಸುತ್ತಿರುವ ಕಾರಣ ನಗರ ಪರಿಮಿತಿಯಲ್ಲಿ ಈಗ ವಾಹನ ದಟ್ಟಣೆ ಕಂಡು ಬರುತ್ತಿದೆ. ಪೊಲೀಸರ ಈ ಕ್ರಮಕ್ಕೆ ರೈತರು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

‘ಹೊರವರ್ತುಲ ರಸ್ತೆ ಇರುವುದೇ ಭಾರಿ ವಾಹನಗಳ ಸಂಚಾರಕ್ಕಾಗಿ. ಅಲ್ಲಿ ನಿರ್ಬಂಧ ಹೇರಿದ್ದು ಅಧಿಕಾರ ದುರುಪಯೋಗದ ಪರಮಾವಧಿ. ‘ರಿಪಬ್ಲಿಕ್‌ ಆಫ್‌ ಬಳ್ಳಾರಿ’ಯ ಇನ್ನೊಂದು ಮುಖ. ಹಿಂದೆ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಮುಚ್ಚಿಸಲಾಗಿತ್ತು. ಈಗ,ತಮ್ಮ ಬಂಗಲೆಗೆ ದೂಳು ಆವರಿಸುತ್ತದೆ ಎಂದು ಸಂಚಾರ ನಿರ್ಬಂಧಿಸಿರುವುದು ಸಚಿವರ ಸರ್ವಾಧಿಕಾರಿ ಧೋರಣೆಯಲ್ಲದೆ ಮತ್ತೇನೂ ಇಲ್ಲ. ರೈತರೆಲ್ಲ ಸೇರಿ ಇದರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಸಣ್ಣಕ್ಕಿ ರುದ್ರಪ್ಪ ತಿಳಿಸಿದ್ದಾರೆ.

‘ಭಾರಿ ವಾಹನಗಳು ಹೊರವರ್ತುಲ ರಸ್ತೆಯಲ್ಲಿ ಸಂಚರಿಸಿದರೆ ಉತ್ತಮ. ನಿರ್ಬಂಧ ಹೇರಿದ್ದು ಸರಿಯಲ್ಲ, ಮೇಲಿನ ಅಧಿಕಾರಿಗಳ ಸೂಚನೆ ಪಾಲಿಸುತ್ತಿದ್ದೇವೆ. ದೂಳು, ಶಬ್ದ ಮಾಲಿನ್ಯದಿಂದ ಕಿರಿಕಿರಿ ಉಂಟಾಗುತ್ತಿರುವ ಕಾರಣ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ’ ಎಂದು ಸ್ಥಳಕ್ಕೆ ಭೇಟಿ ನೀಡಿದ ‘ಪ್ರಜಾವಾಣಿ’ಗೆ ಹೆಸರು ಹೇಳಲಿಚ್ಛಿಸದ ಸಂಚಾರ ಪೊಲೀಸರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT