ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ ಚುನಾವಣೆ: ತಮ್ಮನ ಟಿಕೆಟ್‌ಗಾಗಿ ಶೆಟ್ಟರ್‌ ದೆಹಲಿಗೆ?

ಕುಟುಂಬಸ್ಥರಿಗೆ ಟಿಕೆಟ್‌ ಇಲ್ಲ ಎಂದ ಬಿಜೆಪಿ
Last Updated 12 ನವೆಂಬರ್ 2021, 21:30 IST
ಅಕ್ಷರ ಗಾತ್ರ

ಬೆಂಗಳೂರು/ದೆಹಲಿ: ಬಿಜೆಪಿಯ ಹಿರಿಯ ಶಾಸಕ ಜಗದೀಶ ಶೆಟ್ಟರ್‌ ಅವರು ಶುಕ್ರವಾರ ದಿಢೀರ್‌ ದೆಹಲಿಗೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ವಿಧಾನಪರಿಷತ್ ಚುನಾವಣೆಯಲ್ಲಿ ಸಚಿವರು, ಶಾಸಕರು ಮತ್ತು ಸಂಸದರ ಕುಟುಂಬದವರಿಗೆ ಟಿಕೆಟ್‌ ನೀಡುವುದಿಲ್ಲ ಎಂದು ಬಿಜೆಪಿಯ ವರಿಷ್ಠರು ಸೂಚನೆ ನೀಡಿರುವುದರಿಂದ, ತನ್ನ ತಮ್ಮ ವಿಧಾನ ಪರಿಷತ್‌ ಸದಸ್ಯ ಪ್ರದೀಪ್ ಶೆಟ್ಟರ್‌ ಅವರಿಗೆ ಟಿಕೆಟ್‌ ಖಾತರಿಪಡಿಸಲು ಶೆಟ್ಟರ್ ಅವರು ದೆಹಲಿಗೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರದೀಪ್‌ ಶೆಟ್ಟರ್‌ ಅಲ್ಲದೆ, ಶಾಸಕ ಅಪ್ಪಚ್ಚು ರಂಜನ್‌ ಸಹೋದರ ಸುನೀಲ್‌ ಸುಬ್ರಮಣಿ ಅವರ ಸದಸ್ಯತ್ವದ ಅವಧಿ ಜನವರಿ 5ಕ್ಕೆ ಕೊನೆಗೊಳ್ಳಲಿದೆ. ಇವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ತಮ್ಮ ದೆಹಲಿ ಭೇಟಿಯ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಜಗದೀಶ ಶೆಟ್ಟರ್‌, ‘ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಬಂದಿದ್ದೇನೆ. ಪಕ್ಷದ ಮುಖಂಡರ ಕರೆ ಮೇರೆಗೆ ಅಥವಾ ಪಕ್ಷದ ಮುಖಂಡರನ್ನು ಭೇಟಿಯಾಗಲು ದೆಹಲಿಗೆ ಬಂದಿಲ್ಲ. ಶನಿವಾರವೇ ಹುಬ್ಬಳ್ಳಿಗೆ ಮರಳುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಭೇಟಿ ನೀಡಿ ಬಂದ ಮರುದಿನವೇ ಜಗದೀಶ ಶೆಟ್ಟರ್‌ ಅವರು ದೆಹಲಿಗೆ ತೆರಳಿರುವುದಕ್ಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರದೀಪ ಶೆಟ್ಟರ್ ಪ್ರತಿನಿಧಿಸುತ್ತಿರುವ ಧಾರವಾಡ, ಹಾವೇರಿ, ಗದಗ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿದ್ದಾರೆ.
ಟಿಕೆಟ್‌ ಖಚಿತ ಪಡಿಸಿಕೊಳ್ಳುವ ದೃಷ್ಟಿಯಿಂದಲೂ ದೆಹಲಿಗೆ ಭೇಟಿ ನೀಡಿರಬಹುದು ಎಂದು ಅವರ ಆಪ್ತ ವಲಯ ಹೇಳಿದೆ.

ಕೊಡಗಿನಲ್ಲೂ ಕಗ್ಗಂಟು: ಶಾಸಕ ಅಪ್ಪಚ್ಚು ರಂಜನ್‌ ಅವರ ತಮ್ಮ ಹಾಗೂ ಪರಿಷತ್‌ನ ಹಾಲಿ ಸದಸ್ಯ ಸುನೀಲ್‌ ಸುಬ್ರಮಣಿ ಜತೆ ಅವರ ಮತ್ತೊಬ್ಬ ತಮ್ಮ ಸುಜಾ ಕುಶಾಲಪ್ಪ ಕೂಡಾ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಕಳೆದ ಬಾರಿ ವಿಧಾನಪರಿಷತ್‌ ಚುನಾವಣೆಯಲ್ಲಿ ಆರೋಪಗಳು ಇದ್ದ ಕಾರಣ ಟಿಕೆಟ್‌ ಸಿಗಲಿಲ್ಲ. ಸುನೀಲ್‌ ಸುಬ್ರಮಣಿ ಅವರಿಗೆ ಟಿಕೆಟ್‌ ನೀಡಲಾಯಿತು. ಈ ಬಾರಿ ಇಬ್ಬರೂ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ. ಬಿಜೆಪಿ ವರಿಷ್ಠರ ಸೂಚನೆ ಇಬ್ಬರಲ್ಲೂ ಆತಂಕ ಸೃಷ್ಟಿಸಿದೆ.

ಶಿವಮೊಗ್ಗದಲ್ಲಿ ಡಿ.ಎಚ್‌.ಶಂಕರಮೂರ್ತಿ ಅವರ ಮಗ, ಆರ್ಯ ವೈಶ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಡಿ.ಎಸ್‌.ಅರುಣ್ ಕೂಡಾ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಆದರೆ ಅವರ ತಂದೆ ಈಗ ರಾಜಕೀಯದಿಂದಲೇ ನಿವೃತ್ತಿ ಹೊಂದಿರುವುದರಿಂದ, ಇವರಿಗೆ ಅಷ್ಟೇನೂ ಸಮಸ್ಯೆ ಆಗುವುದಿಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT