ಶನಿವಾರ, ಮೇ 21, 2022
19 °C
ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರ

ವಿಧಾನ ಪರಿಷತ್‌ ಚುನಾವಣೆ: 33 ವರ್ಷದಿಂದ ಒಂದೇ ಕುಟುಂಬಕ್ಕೆ ಕಾಂಗ್ರೆಸ್‌ ಟಿಕೆಟ್‌!

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಚುನಾವಣೆಯಲ್ಲಿ 33 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಒಂದೇ ಕುಟುಂಬಕ್ಕೆ ಟಿಕೆಟ್‌ ನೀಡಲಾಗುತ್ತಿದೆ.

1988ರಿಂದ ಒಂದು ಉಪಚುನಾವಣೆ ಸೇರಿ ಈ ಕ್ಷೇತ್ರಕ್ಕೆ ಆರು ಬಾರಿ ಚುನಾವಣೆಗಳು ನಡೆದಿವೆ. ತಿ.ನರಸೀಪುರದ  ಎನ್‌.ರಾಚಯ್ಯ ಕುಟುಂಬ ಅಷ್ಟೂ ಚುನಾವಣೆಗಳಲ್ಲಿ ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಿಕೊಂಡು, ಐದು ಬಾರಿ ಗೆಲುವು ದಾಖಲಿಸಿದೆ. ದಲಿತರಲ್ಲಿ ‘ಎಡಗೈ’ ಸಮುದಾಯಕ್ಕೆ ಸೇರಿದ ಈ ಕುಟುಂಬದ ಅಭ್ಯರ್ಥಿಗೆ 2009ರಲ್ಲಿ ಮಾತ್ರ ಸೋಲು ಎದುರಾಗಿತ್ತು.

ಟಿ.ಎನ್‌.ನರಸಿಂಹಮೂರ್ತಿ, ಸಿ.ರಮೇಶ್‌, ಎನ್‌.ಮಂಜುನಾಥ್‌, ಆರ್‌.ಧರ್ಮಸೇನ ಈ ಚುನಾವಣೆಗಳಲ್ಲಿ ಜಯ ಗಳಿಸಿದ್ದಾರೆ. ವಿಧಾನ ಪರಿಷತ್‌ ಹಾಲಿ ಸದಸ್ಯರೂ ಆಗಿರುವ ಧರ್ಮಸೇನ ಎರಡು ಬಾರಿ ಆಯ್ಕೆಯಾಗಿದ್ದಾರೆ. ಮೂರನೇ ಬಾರಿ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ.

ಮೊದಲ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದ ಎನ್‌.ರಾಚಯ್ಯ ಅವರ ಮೂರನೇ ಹಾಗೂ ಕೊನೆಯ ತಮ್ಮ ಟಿ.ಎನ್‌.ನರಸಿಂಹಮೂರ್ತಿ. ರಾಚಯ್ಯ ಅವರ ಎರಡನೇ ತಮ್ಮ ಚಿಕ್ಕಸಿದ್ದಯ್ಯ ಅವರ ಪುತ್ರ ಸಿ.ರಮೇಶ್‌. ನರಸಿಂಹಮೂರ್ತಿ ಪುತ್ರ ಎನ್‌.ಮಂಜುನಾಥ್‌. ಧರ್ಮಸೇನ ಅವರು ಎನ್‌.ರಾಚಯ್ಯ ಅವರ ಪುತ್ರ.

‘ನಮ್ಮ ಕುಟುಂಬದ ಮೇಲೆ ಕಾಂಗ್ರೆಸ್‌ ಪಕ್ಷ, ನಾಯಕರು, ಜನರು ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಈ ಫಲಿತಾಂಶವೇ ಸಾಕ್ಷಿ. ಎಡಗೈ ಸಮುದಾಯಕ್ಕೂ ಅವಕಾಶ ಸಿಗಬೇಕೆಂದು ಗೆಲ್ಲಿಸಿದ್ದಾರೆ. ನಾನು ಎರಡು ಬಾರಿ ಗೆಲ್ಲಲು ಸಿದ್ದರಾಮಯ್ಯ ಅವರ ವರ್ಚಸ್ಸು ಕೂಡ ಕಾರಣ’ ಎಂದು ಧರ್ಮಸೇನ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಒಮ್ಮೆ ‘ಕೈ’ತಪ್ಪಿತ್ತು: 2009ರಲ್ಲಿ ಮಾತ್ರ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಬಿಜೆಪಿಯಿಂದ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ ಹಾಗೂ ಜೆಡಿಎಸ್‌ನಿಂದ ಸಂದೇಶ್‌ ನಾಗರಾಜ್‌ ಗೆದ್ದಿದ್ದರು. ಸತತ ಎರಡನೇ ಬಾರಿ ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಿಕೊಂಡಿದ್ದ ಎನ್‌.ಮಂಜುನಾಥ್‌ ಪರಾಭವಗೊಂಡರು. ಆದರೆ, ಕೆಜೆಪಿ ಸೇರಲು ಪ್ರೊ.ಮಲ್ಲಿಕಾರ್ಜುನಪ್ಪ ರಾಜೀನಾಮೆ ನೀಡಿದ್ದರಿಂದ 2013ರಲ್ಲಿ ಉಪಚುನಾವಣೆ ಎದುರಾಯಿತು. ಆಗ ಧರ್ಮಸೇನ ಮೊದಲ ಬಾರಿ ವಿಧಾನ ಪರಿಷತ್‌ ಪ್ರವೇಶಿಸಿದರು.

ವಿಧಾನ ಪರಿಷತ್ತಿಗೆ ಸ್ಪರ್ಧಿಸುವುದಿಲ್ಲ: ವಿಜಯಸಿಂಗ್

ಬೀದರ್‌: ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ ಚುನಾವಣೆಗೆ ತಾವು ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಈ ಕ್ಷೇತ್ರದ ಹಾಲಿ ಸದಸ್ಯ ಕಾಂಗ್ರೆಸ್‌ನ ವಿಜಯಸಿಂಗ್‌ ಹೇಳಿದರು.

ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸಂಜಯ ಖೇಣಿ ಅವರನ್ನು ಪರಾಭವಗೊಳಿಸಿ, ಮೊದಲ ಬಾರಿಗೆ ಪರಿಷತ್‌ಗೆ ಆಯ್ಕೆಯಾಗಿದ್ದರು. 

‘ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಬೀದರ್‌ ಜಿಲ್ಲೆಯ ರಾಜಕೀಯದಲ್ಲಿಯೇ ಮುಂದುವರೆಯುತ್ತಿದ್ದು, ಇಲ್ಲಿಯ ಒಂದು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುವ ಬಯಕೆ ಹೊಂದಿದ್ದೇನೆ. ಯಾವ ಕ್ಷೇತ್ರ ಎನ್ನುವುದನ್ನು ನಂತರ ತಿಳಿಸುವೆ’ ಎಂದು ವಿಜಯಸಿಂಗ್‌ ಪ್ರತಿಕ್ರಿಯಿಸಿದರು.

‘ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ವಿಧಾನಸಭಾ ಸದಸ್ಯರಿಗೆ ಹೆಚ್ಚಿನ ಅವಕಾಶಗಳು ಇವೆ. ಇದರಿಂದ ಒಂದು ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿ ಇದ್ದುಕೊಂಡು ಹೆಚ್ಚಿನ ಕೆಲಸಗಳನ್ನು ಮಾಡಲು ಸಾಧ್ಯವಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು