ಗುರುವಾರ , ಮೇ 6, 2021
22 °C

ವಿಧಾನಸೌಧವನ್ನೇ ಎಪಿಎಂಸಿ ಮಾಡಿ: ಟಿಕಾಯತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸರ್ಕಾರ ಎಪಿಎಂಸಿಗಳನ್ನು ಮುಚ್ಚಲು ಕಾನೂನು ತಂದಿರುವ ಕಾರಣ ರೈತರು ತಾವು ಬೆಳೆದ ಫಸಲನ್ನು ವಿಧಾನಸೌಧಕ್ಕೆ ತಂದು ಮಾರಾಟ ಮಾಡಿ’ ಎಂದು ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾದ ಅಧ್ಯಕ್ಷ ರಾಕೇಶ್ ಟಿಕಾಯತ್ ರೈತರಿಗೆ ಕರೆ ನೀಡಿದರು.

ಸಂಯುಕ್ತ ಹೋರಾಟ ಕರ್ನಾಟಕ ಆಯೋಜಿಸಿದ್ದ ವಿಧಾನಸೌಧ ಚಲೋ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಪೊಲೀಸರು ನಿಮ್ಮನ್ನು ತಡೆದರೆ ಕೇಂದ್ರ ಸರ್ಕಾರದ ಹೊಸ ಕಾಯ್ದೆ ಪ್ರಕಾರ ಕೃಷಿ ಉತ್ಪನ್ನಗಳನ್ನು ಎಪಿಎಂಸಿಯಲ್ಲೇ ಮಾರಾಟ ಮಾಡಬೇಕೆಂದಿಲ್ಲ. ಎಲ್ಲಿ ಬೇಕಿದ್ದರೂ ಮಾರಾಟ ಮಾಡಬಹುದು ಎಂದು ತಿಳಿಸಿ. ಅದಕ್ಕೂ ಒಪ್ಪದಿದ್ದರೆ ಅಲ್ಲೇ ಕುಳಿತು ಮಾರಾಟ ಮಾಡಿ, ಇಲ್ಲವೇ ಪೊಲೀಸ್ ಠಾಣೆಗಳನ್ನೇ ಮಾರುಕಟ್ಟೆಗಳನ್ನಾಗಿ ಮಾಡಿಕೊಳ್ಳಿ. ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಬ್ಬು ಮತ್ತು ಭತ್ತ ಮಾರಾಟ ಮಾಡುವ ಹೋರಾಟ ಆರಂಭಿಸಲಾಗಿದೆ’ ಎಂದು ತಿಳಿಸಿದರು.

‘ಕರ್ನಾಟಕದ ರೈತರು ದೆಹಲಿಗೆ ಬರಲು ಆಗದಿದ್ದರೆ ಬೆಂಗಳೂರಿನಲ್ಲೇ ಹೊಸದಾಗಿ ಕಿಸಾನ್ ಮೋರ್ಚಾ ಆರಂಭಿಸಲಾಗುವುದು. ಟ್ರ್ಯಾಕ್ಟರ್‌ಗಳನ್ನು ತೆಗೆದುಕೊಂಡು ಬೀದಿಗೆ ಬನ್ನಿ.  ಪೊಲೀಸರ ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನುಗ್ಗುವುದನ್ನು ಕಲಿಯಬೇಕು’ ಎಂದು ಹೇಳಿದರು.

‘ರಾಮನ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ. ನಾವು ‘ಜೈ ರಾಮ್–ಜೈ ಭೀಮ್’, ‘ಅಲ್ಲಾ ಹೊ ಅಕ್ಬರ್–ಹರಹರ ಮಹಾದೇವ’ ಎಂಬ ಘೋಷಣೆಗಳೊಂದಿಗೆ ಮುನ್ನಡೆಯಬೇಕಿದೆ’ ಎಂದು ಹೇಳಿದರು.

ರೈತ, ಕಾರ್ಮಿಕ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕೆಎಸ್‌ಆರ್‌ ರೈಲು ನಿಲ್ದಾಣದ ಬಳಿ ಜಮಾಯಿಸಿದ್ದ ಸಾವಿರಾರು ರೈತರು, ವಿಧಾನಸೌಧದತ್ತ ಹೆಜ್ಜೆ ಹಾಕಿದರು. ಸ್ವಾತಂತ್ರ್ಯ ಉದ್ಯಾನದ ಬಳಿ ಅಡ್ಡಗಟ್ಟಿದ ಪೊಲೀಸರು. ವಿಧಾನಸೌಧದತ್ತ ಹೋಗುವುದನ್ನು ತಡೆದರು. ಮೆರವಣಿಗೆ ಸಂದರ್ಭದಲ್ಲಿ ಕೆಲ ಕಾಲ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ರಾಮ ಯಾರಪ್ಪನ ಸ್ವತ್ತೂ ಅಲ್ಲ: ಯುದ್ಧವೀರ ಸಿಂಗ್

‘ಶ್ರೀರಾಮ ಯಾರಪ್ಪನ ಸ್ವತ್ತೂ ಅಲ್ಲ. ರೈತರು, ಕಾರ್ಮಿಕರ ಕಣ ಕಣದಲ್ಲಿ, ಅವರ ದುಡಿಮೆಯಲ್ಲಿ ರಾಮ ಇದ್ದಾನೆ. ರಾಮನನ್ನು ಹುಡುಕಿಕೊಂಡು ಮಂದಿರಗಳಿಗೆ ಹೋಗುವ ಅಗತ್ಯವಿಲ್ಲ’ ಎಂದು ರಾಷ್ಟ್ರೀಯ ಸಂಯುಕ್ತ ಕಿಸಾನ್‌ ಮೋರ್ಚಾದ ಕಾರ್ಯದರ್ಶಿ ಯುದ್ಧವೀರಸಿಂಗ್‌ ಹೇಳಿದರು.

‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೊಸ ನಾಟಕ ಶುರು ಮಾಡಿದೆ. ಒಂದು ಮುಷ್ಟಿ ಅಕ್ಕಿ ಕೊಡಿ ಎಂದು ಕೇಳುತ್ತಿದ್ದಾರೆ. ಅಕ್ಕಿಯನ್ನು ಧರ್ಮಕ್ಕೂ, ಧರ್ಮವನ್ನು ಮತಕ್ಕೂ ಜೋಡಣೆ ಮಾಡಲಾಗುತ್ತಿದೆ. ಒಂದು ಮುಷ್ಟಿ ಅಕ್ಕಿ ಕೊಡಲು ನಾವು ಸಿದ್ಧರಿದ್ದೇವೆ, ಆ ಅಕ್ಕಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾನೂನು ರೂಪಿಸಿ ಎಂದು ಕೇಳಬೇಕಿದೆ’ ಎಂದರು.

ಏಪ್ರಿಲ್ 9ರಂದು ಸಭೆ

‘ದಕ್ಷಿಣ ಭಾರತಕ್ಕೂ ರೈತರ ಹೋರಾಟವನ್ನು ವಿಸ್ತರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ರೈತ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಭೆಯನ್ನು ಏಪ್ರಿಲ್ 9ರಂದು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟಿಸಲಿದೆ’ ಎಂದು ರಾಷ್ಟ್ರೀಯ ಸಂಯುಕ್ತ ಕಿಸಾನ್‌ ಮೋರ್ಚಾ ಸಂಚಾಲಕ ಡಾ. ದರ್ಶನ್‌ಪಾಲ್ ತಿಳಿಸಿದರು.

ಮಾ.23(ಮಂಗಳವಾರ) ಭಗತ್‌ಸಿಂಗ್, ರಾಜಗುರು, ಸುಖದೇವ್ ಅವರನ್ನು ನೇಣಿಗೆ ಏರಿಸಿದ ದಿನವಾಗಿದೆ. ಆ ದಿನವನ್ನು ಹುತಾತ್ಮರ ದಿನವನ್ನಾಗಿ ಆಚರಿಸಲು ಕಿಸಾನ್ ಮೋರ್ಚಾ ಕರೆ ನೀಡುತ್ತಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು