ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನೆ ಚುನಾವಣೆ | ಜೆಡಿಎಸ್– ಬಿಜೆಪಿ ಒಳ ಒಪ್ಪಂದ ಶಾಸಕ ಪರಮೇಶ್ವರ ಗುಮಾನಿ

ಚುನಾವಣೆಗೆ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ: ಬಿಜೆಪಿ ತಿರುಗೇಟು
Last Updated 23 ನವೆಂಬರ್ 2021, 19:45 IST
ಅಕ್ಷರ ಗಾತ್ರ

ತುಮಕೂರು: ‘ಮೇಲ್ಮನೆ ಚುನಾವಣೆಯಲ್ಲಿ ಜೆಡಿಎಸ್– ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಬಗ್ಗೆ ನಮಗೆ ಬಲವಾದ ಅನುಮಾನವಿದೆ’ ಎಂದು ಶಾಸಕ ಡಾ.ಜಿ.ಪರಮೇಶ್ವರ ಮಂಗಳವಾರ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿಯವರಿಗೆ ಬೆಂಬಲ ಸೂಚಿಸಲು ಜೆಡಿಎಸ್‌ 7 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿದೆ. ಒಂದು ರೀತಿಯಲ್ಲಿ ಒಳ ಒಪ್ಪಂದವಾಗಿದೆ’ ಎಂದು ಹೇಳಿದರು.

ಬಿಜೆಪಿ ತಿರುಗೇಟು: ಪರಮೇಶ್ವರ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯ ಎನ್.ರವಿಕುಮಾರ್, ‘ಇಂತಹ ಆರೋಪ ಗಮನಿಸಿದರೆ ಚುನಾವಣೆಗೆ ಮೊದಲೇ ಕಾಂಗ್ರೆಸ್ ನಾಯಕರು ಸೋಲು ಒಪ್ಪಿಕೊಂಡಂತಿದೆ. ಒಳಒಪ್ಪಂದವಾಗಿದ್ದರೆ ಜೆಡಿಎಸ್‌ನವರು ಏಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದರು? ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಸಮರ್ಥ ಅಭ್ಯರ್ಥಿಗಳು ಸಿಕ್ಕಿಲ್ಲ. ಹಾಗಾಗಿ ಅವರು ನಿಲ್ಲಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

‘40 ಪರ್ಸೆಂಟ್ ಕಮಿಷನ್ ಸರ್ಕಾರ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ನಿರುದ್ಯೋಗಿಗಳ ಗುಂಪು. ಇವರಿಗೆ ಕೆಲಸ ಇಲ್ಲ. ಪರ್ಸೆಂಟೇಜ್‌ಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮೇಲೆ 37 ಪ್ರಕರಣಗಳಿವೆ’ ಎಂದರು.

‘ಜೆಡಿಎಸ್ ಬೆಂಬಲ ಪಡೆದರೆ ತಪ್ಪೇನಿಲ್ಲ’

ಶಿರಸಿ: ‘ಕಾಂಗ್ರೆಸ್ ನಮ್ಮ ವಿರೋಧಿ. ಅವರಿಗಿಂತ ಜೆಡಿಎಸ್‌ನವರು ಹತ್ತಿರದವರು. ಅವರ ಅಭ್ಯರ್ಥಿ ಇಲ್ಲದ ಕಡೆ ಬೆಂಬಲ ಪಡೆದರೆ ತಪ್ಪೇನಿಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ಹೇಳಿದರು.

ಸಿದ್ದಾಪುರ ತಾಲ್ಲೂಕಿನ ಕಲಗದ್ದೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ–ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ’ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಕಾಂಗ್ರೆಸ್‌ಗೆ ಒಳ ಒಪ್ಪಂದಗಳ ರೂಢಿ ಇದೆ. ಕಾಂಗ್ರೆಸ್ ಸೋಲಿಸುವುದಷ್ಟೇ ನಮ್ಮ ಗುರಿ. ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆ ಅವರ ಬೆಂಬಲ ಪಡೆದು ಹೆಚ್ಚು ಲೀಡ್ ಪಡೆಯುತ್ತೇವೆ’ ಎಂದರು.

ಜೆಡಿಎಸ್‌ ಬೆಂಬಲ ಪಡೆಯಲು ಮಾತುಕತೆ: ಈಶ್ವರ ಖಂಡ್ರೆ

ಬೀದರ್: ‘ವಿಧಾನ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಜೆಡಿಎಸ್‌ ಮುಖಂಡರೊಂದಿಗೆ ಚರ್ಚಿಸಲಾಗುವುದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

‘ಬಿಜೆಪಿ ಸರ್ಕಾರವು, ಹಿಂದಿನ ಅವಧಿಯ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮೂರು ತಿಂಗಳ ಗೌರವಧನ ಕೊಟ್ಟಿಲ್ಲ. ಈಗ ಚುನಾವಣೆಯಲ್ಲಿ ಮತ ಸೆಳೆಯಲು ಮಾಸಿಕ ₹10 ಸಾವಿರ ಗೌರವಧನ ಕೊಡುವ ಸುಳ್ಳು ಭರವಸೆ ನೀಡಿದ್ದಾರೆ’ ಎಂದು ಇಲ್ಲಿ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT