ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌: ‘ಶೌಚಾಲಯ’ಕ್ಕಾಗಿ ಹಕ್ಕುಚ್ಯುತಿ ಪ್ರಸ್ತಾವ!

Last Updated 21 ಸೆಪ್ಟೆಂಬರ್ 2021, 22:17 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧದ ಮೊದಲ ಮಹಡಿಯಲ್ಲಿ ವಿಧಾನ ಪರಿಷತ್ ಸಭಾಂಗಣದ ಪಕ್ಕದ ಕೊಠಡಿಯನ್ನು ಮತ್ತೆ ಶೌಚಾಲಯವಾಗಿ ಮಾಡುವುದಾಗಿ ಭರವಸೆ ನೀಡಿದ್ದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತು ತಪ್ಪಿದ್ದಾರೆ. ಹೀಗಾಗಿ, ಹಕ್ಕುಚ್ಯುತಿಯಡಿ ಚರ್ಚೆಗೆ ಅವಕಾಶ ನೀಡಬೇಕೆಂಬ ಕಾಂಗ್ರೆಸ್‌ ಸದಸ್ಯರ ಬೇಡಿಕೆ ವಿಧಾನ ಪರಿಷತ್‌ನಲ್ಲಿ ಮಂಗಳವಾರ ಕಾವೇರಿದ ಚರ್ಚೆಗೆ ವಸ್ತುವಾಯಿತು.

ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ, ‘ಶೌಚಾಲಯವಾಗಿದ್ದ ಕೊಠಡಿಯನ್ನು ಉಪಾಹಾರ ಗೃಹವಾಗಿ ಪರಿವರ್ತಿಸಲಾಗಿದೆ. ಇದರಿಂದ ಶಾಸಕರು, ಶಾಸಕರ ಆಪ್ತ ಸಿಬ್ಬಂದಿ, ಸಚಿವಾಲಯ ಸಿಬ್ಬಂದಿಗೆ ಸಮಸ್ಯೆಯಾಗಿದೆ. ಅದನ್ನು ಮತ್ತೆ ಶೌಚಾಲಯ ಮಾಡುವ ಬಗ್ಗೆ ಸಭಾನಾಯಕರು ನೀಡಿದ್ದ ಭರವಸೆ ಈಡೇರಿಸಿಲ್ಲ’ ಎಂದರು. ಅದಕ್ಕೆ ಕಾಂಗ್ರೆಸ್‌ನ ಎ. ನಾರಾಯಣ ಸ್ವಾಮಿ, ಬಿ.ಕೆ. ಹರಿಪ್ರಸಾದ್‌ ಧ್ವನಿಗೂಡಿಸಿದರು.

ಹಕ್ಕುಚ್ಯುತಿಯಡಿ ಚರ್ಚೆಗೆ ಅವಕಾಶ ನಿರಾಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ, ‘ವಿಧಾನ ಪರಿಷತ್‌ನ ಸಚಿವಾಲಯದ ಅಧೀನದ ಜಾಗದಲ್ಲಿ ನಿರ್ಮಾಣ ಕೆಲಸಗಳ ಕುರಿತು ನಿರ್ಣಯ ಕೈಗೊಳ್ಳುವ ಅಧಿಕಾರ ಸಭಾಪತಿ ಅವರಿಗಿದೆ. ಸಭಾನಾಯಕರಿಗೆ ಇದು ಅನ್ವಯವಾಗುವುದಿಲ್ಲ. ಈ ವಿಷಯದ ಚರ್ಚೆ ಬೇಡ’ ಎಂದರು.

ಆದರೆ, ಕಾಂಗ್ರೆಸ್‌ ಸದಸ್ಯರು ಪಟ್ಟು ಸಡಿಲಿಸಲಿಲ್ಲ. ಸಭಾಪತಿ ವಿರುದ್ಧವೇ ಏರುಧ್ವನಿಯಲ್ಲಿ ಮಾತನಾಡಿದ ಶೆಟ್ಟಿ, ‘ಇದು ಅತಿರೇಕದ ತೀರ್ಮಾನ. ಸದಸ್ಯ
ರಿಗೆ ತೋರಿದ ಅಗೌರವ’ ಎಂದರು.

ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ‘ಪ್ರತಾಪಚಂದ್ರ ಶೆಟ್ಟಿ ಸಭಾಪತಿ ಆಗಿದ್ದಾಗ ಉಪಾಹಾರ ಗೃಹ ಬದಲಿಸಿ ಶೌಚಾಲಯ ಮರು ನಿರ್ಮಾಣ ಮಾಡುವಂತೆ ಸೂಚಿಸಿದ್ದರು. ಆಗ ಸರ್ಕಾರದ ಪರವಾಗಿ ಉತ್ತರಿಸಿದ್ದ ನಾನು, ಮುಂದಿನ ಅಧಿವೇಶನ ವೇಳೆಗೆ ಕ್ರಮಕೈಗೊಳ್ಳುವುದಾಗಿ ಹೇಳಿದ್ದೆ. ನಾನು ಉತ್ತರ ಕೊಟ್ಟಿದ್ದರೂ, ಸದನದ ಆವರಣದ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಪರಮಾಧಿಕಾರ ಸಭಾಪತಿ ವ್ಯಾಪ್ತಿಗೆ ಬರಲಿದೆ. ಪ್ರತಾಪಚಂದ್ರ ಶೆಟ್ಟಿಯವರು ನನ್ನನ್ನು ಕಂಡಿದ್ದಾರೆ. ಆದರೆ, ತಪ್ಪು ಮಾಹಿತಿ ಮೇಲೆ ಸಣ್ಣ ವಿಷಯಕ್ಕೆ ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವುದು ನೋವು ತಂದಿದೆ’ ಎಂದರು.

ಆಗ ಮಾತನಾಡಿದ ಪ್ರತಾಪಚಂದ್ರ ಶೆಟ್ಟಿ, ‘ಆರೋಪ ನಿಮ್ಮ ಮೇಲಲ್ಲ. ಸಭಾನಾಯಕ ಸ್ಥಾನದ ಮೇಲೆ’ ಎಂದು ಸ್ಪಷ್ಟನೆ ನೀಡಿದರು. ‘ಇದು ಸೂಕ್ಷ್ಮ ವಿಷಯ. ಅಧಿವೇಶನದ ನಂತರ ಎಲ್ಲರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಸಭಾಪತಿ ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT