ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧ: ‍ಮೂಲೆ ಸೇರಿದ ಭದ್ರತಾ ಪರಿಕರ

ಎರಡು ವರ್ಷಗಳಿಂದ ಸ್ಥಗಿತಗೊಂಡ ಬ್ಯಾಗೇಜ್‌ ಸ್ಕ್ಯಾನರ್, ಲೋಹಶೋಧಕ
Last Updated 23 ಡಿಸೆಂಬರ್ 2022, 22:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಅಳವಡಿಸಿದ್ದ ಭದ್ರತಾ ಸಲಕರಣೆಗಳು ಸ್ಥಗಿತಗೊಂಡು ಮೂಲೆ ಸೇರಿದ್ದು, ಎರಡು ವರ್ಷಗಳಿಂದ ದೂಳು ತಿನ್ನುತ್ತಿವೆ. ನಿತ್ಯ ವಿಧಾನಸೌಧಕ್ಕೆ ಬರುವ ನೌಕರರು ಮತ್ತು ಸಾರ್ವಜನಿಕರನ್ನು ತಪಾಸಣೆ ಮಾಡದೇ ಪ್ರವೇಶ ಕಲ್ಪಿಸುತ್ತಿದ್ದಾರೆ.

ವಿಧಾನಸೌಧಕ್ಕೆ ಪ್ರವೇಶ ಕಲ್ಪಿಸುವ ನಾಲ್ಕು ದ್ವಾರಗಳಲ್ಲಿ ಲೋಹ ಶೋಧಕ (ಮೆಟೆಲ್‌ ಡಿಟೇಕ್ಟರ್) ಹಾಗೂ ಬ್ಯಾಗೇಜ್ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿದ್ದು, ಇವುಗಳು ಹಲವು ದಿನಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ವಿಧಾನಸೌಧಕ್ಕೆ ನಿತ್ಯ ಬರುವ ಸಾರ್ವಜನಿಕರ ಲಗೇಜ್ ತಪಾಸಣೆಗೆ ಅಳವಡಿಸಿದ್ದ ಲೋಹ ಶೋಧಕಗಳು, ಸ್ಕ್ಯಾನರ್‌ ಯಂತ್ರಗಳು ಕಣ್ಮರೆಯಾಗಿವೆ. ಬ್ಯಾಗ್‌, ಸೂಟ್‌ಕೇಸ್‌ ಸಮೇತ ಬರುವ ನೌಕರರು ಮತ್ತು ಸಾರ್ವಜನಿಕರಿಗೆ ಯಾವುದೇ ತ‍‍ಪಾಸಣೆಗೆ ಒಳಪಡಿಸದೇ ನೇರವಾಗಿ ವಿಧಾನಸೌಧಕ್ಕೆ ಪ್ರವೇಶ ಕಲ್ಪಿಸುತ್ತಿರುವುದು ಭದ್ರತಾ ವೈಫಲ್ಯವೆಂದು ಸಾರ್ವಜನಿಕರು ದೂರುತ್ತಿದ್ದಾರೆ.

ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನ ಬಂದು ಹೋಗುತ್ತಾರೆ. ಭದ್ರತೆಗೆ ಇರುವ ಪೊಲೀಸರು, ಅಷ್ಟೂ ಜನರ ಮೇಲೆ ನಿಗಾ ಇಡಲು ಸಾಧ್ಯವಿಲ್ಲ. ಪ್ರತಿದಿನ 2,000ಕ್ಕೂ ಹೆಚ್ಚು ವಾಹನಗಳು ವಿಧಾನಸೌಧದ ಆವರಣಕ್ಕೆ ಬಂದು ಹೋಗುತ್ತವೆ. ಅವುಗಳನ್ನೆಲ್ಲ ತಪಾಸಣೆ ನಡೆಸುವುದರಿಂದ ಸಿಬ್ಬಂದಿಯ ಶ್ರಮ ಹೆಚ್ಚಾಗುತ್ತಿದೆ. ಆಧುನಿಕ ಉಪಕರಣಗಳಿದ್ದರೂ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ.

‘ವಿಧಾನಸೌಧದ ನಾಲ್ಕು ಪ್ರವೇಶ ದ್ವಾರಗಳಲ್ಲಿರುವ ಬ್ಯಾಗೇಜ್‌ ಸ್ಕ್ಯಾನರ್‌ ಕಾರ್ಯನಿರ್ವಹಿಸುತ್ತಿಲ್ಲ. ಕೆಲವೊಂದು ಲೋಹ ಶೋಧಕಗಳು ಮಾತ್ರ ಕೆಲಸ ಮಾಡುತ್ತಿವೆ. ಭದ್ರತೆಗೆ 80 ಜನ ಪೊಲೀಸ್‌ ಸಿಬ್ಬಂದಿ ನಾಲ್ಕು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಳೆಯ ಕಾಲದ 20–30 ಸಿ.ಸಿ.ಟಿ.ವಿ ಕ್ಯಾಮೆರಾಗಳಿದ್ದು, ಅವುಗಳೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆಧುನಿ ಉಪಕರಣಗಳ ಬಳಕೆ ಗೊತ್ತಿಲ್ಲದ ನುರಿತ ಸಿಬ್ಬಂದಿ ಕೊರತೆ ಇದೆ’ ಎಂದು ಭದ್ರತಾ ಇಲಾಖೆಯ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಇತ್ತೀಚೆಗೆ ಮಂಗಳೂರಿನಲ್ಲಿ ಪ್ರೆಷರ್‌ ಕುಕ್ಕರ್ ಸ್ಫೋಟದಿಂದ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಸಾರ್ವಜನಿಕ ಪ್ರದೇಶಗಳಾದ ರೈಲು ನಿಲ್ದಾಣ, ಬೆಂಗಳೂರು ಮೆಟ್ರೊ, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿಲ್ದಾಣ, ಉನ್ನತ ಶಿಕ್ಷಣ ಸಂಸ್ಥೆಗಳು, ಮಾಲ್, ಮಾರುಕಟ್ಟೆ ಹಾಗೂ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಭದ್ರತೆಗೆ ಹೆಚ್ಚು ಒತ್ತು ನೀಡಬೇಕು’ ಎಂದು ಸೂಚಿಸಿದ್ದರು. ಆದರೆ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧಕ್ಕೆ ಸರಿಯಾದ ಭದ್ರತೆ ಇಲ್ಲವಾಗಿದೆ.

ಭದ್ರತಾ ಸಲಕರಣೆಗಳ ಸ್ಥಿತಿ ಬಗ್ಗೆ ಪ್ರತಿಕ್ರಿಯೆ ನೀಡಲು ವಿಧಾನಸೌಧದ ಭದ್ರತಾ ವಿಭಾಗದ ಡಿಸಿಪಿ ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT