ದಾವಣಗೆರೆ: ಚುನಾವಣೆಗೆ ಸಿದ್ಧತೆಯಾಗಿ ಬಿಜೆಪಿ ರಾಜ್ಯದ ನಾಲ್ಕು ಕಡೆಯಿಂದ ಮಾರ್ಚ್ 1ರಂದು ಆರಂಭಿಸಿದ್ದ ‘ವಿಜಯ ಸಂಕಲ್ಪ ಯಾತ್ರೆ’ಯ ಸಮಾರೋಪಕ್ಕೆ ದಾವಣಗೆರೆ ಸಿದ್ಧವಾಗಿದೆ. ಶನಿವಾರ ಮಧ್ಯಾಹ್ನ 3ಕ್ಕೆ ನಡೆವ ‘ಮಹಾಸಂಗಮ’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿ ಹಲವು ಮುಖಂಡರು ಭಾಗವಹಿಸುವರು.
ಇಲ್ಲಿನ ಜಿಎಂಐಟಿ ಸಂಸ್ಥೆ ಬಳಿ 400 ಎಕರೆ ವಿಸ್ತೀರ್ಣದಲ್ಲಿ ಬೃಹತ್ ಪೆಂಡಾಲ್ ಹಾಕಿದ್ದು, ಅಂದಾಜು 2 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ವಿವಿಧೆಡೆಯಿಂದ ಜನರನ್ನು ಕರೆತರಲು ಸಾರಿಗೆ ಸಂಸ್ಥೆಯ 10,000 ಬಸ್ ಹಾಗೂ ಸಾವಿರಾರು ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಕಳೆದ ವರ್ಷದ ಆಗಸ್ಟ್ 3ರಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅದ್ಧೂರಿ ಸಮಾರಂಭ ಇಲ್ಲಿ ನಡೆದಿದ್ದು, ಲಕ್ಷಾಂತರ ಜನ ಸೇರಿದ್ದರು. ಆ ಕಾರ್ಯಕ್ರಮವನ್ನು ಮೀರಿಸುವಂತೆ ಶನಿವಾರದ ‘ಮಹಾಸಂಗಮ’ ಆಯೋಜಿಸುವ ಇರಾದೆಯನ್ನು ಬಿಜೆಪಿ ಮುಖಂಡರು ವ್ಯಕ್ತಪಡಿಸಿದ್ದಾರೆ.
ಪ್ರಧಾನ ವೇದಿಕೆಯಲ್ಲಿ ಮೋದಿ ಅವರ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ, ಎ.ನಾರಾಯಣ ಸ್ವಾಮಿ ಸಹಿತ ಪ್ರಮುಖರು ಆಸೀನರಾಗುವರು.
ವಿಧಾನಸಭೆಯ ಚುನಾವಣೆ ಘೋಷಣೆ ಸಾಧ್ಯತೆ ಹಿನ್ನೆಲೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಸಮಾವೇಶ ಆಯೋಜಿಸಿದ್ದು, ದಾವಣ ಗೆರೆ ನಗರ ಕೇಸರಿಮಯವಾಗಿದೆ.
ಸಭಿಕರ ನಡುವೆ ಮೋದಿ: ಪ್ರಧಾನಿ ಮೋದಿ ‘ರೋಡ್ ಶೋ’ ಬದಲಿಗೆ ಪೆಂಡಾಲ್‌ನಲ್ಲಿ ಜನರ ನಡುವೆಯೇ ತೆರೆದ ವಾಹನದಲ್ಲಿ ಕೈಬೀಸುತ್ತ ವೇದಿಕೆಗೆ ಬರಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.