ಬುಧವಾರ, ಏಪ್ರಿಲ್ 21, 2021
23 °C
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ 8ನೇ ಘಟಿಕೋತ್ಸವ

ಸ್ಮಾರ್ಟ್‌ ಆಗಿ ಓದಿ, ರ‍್ಯಾಂಕ್‌ ಗಳಿಸಿದೆ: ವೈ.ಲಾವಣ್ಯ

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಬಳ್ಳಾರಿ: ‘ದಿನಕ್ಕೆ ಇಂತಿಷ್ಟೇ ಗಂಟೆ ಎಂದು ಓದಲಿಲ್ಲ. ಆದರೆ ಸ್ಮಾರ್ಟ್‌ ಆಗಿ ಓದಿದೆ. ಹೇಗೆ ಉತ್ತರ ಬರೆದರೆ ಉತ್ತಮ ಅಂಕ ಪಡೆಯಬಹುದು ಎಂಬುದಷ್ಟೇ ನನ್ನ ಗುರಿಯಾಗಿತ್ತು’ –ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ 8ನೇ ಘಟಿಕೋತ್ಸವದಲ್ಲಿ ಎಂ.ಕಾಂ.ನಲ್ಲಿ ಮೊದಲ ರ‍್ಯಾಂಕ್‌ ಜೊತೆಗೆ ಮೂರು ಚಿನ್ನದ ಪದಕ ಪಡೆದ ವೈ.ಲಾವಣ್ಯ ಅವರ ಮಾತಿದು.

ಅವರ ತಂದೆ ಹೊಸಪೇಟೆಯ ಮಿನರಲ್‌ ಪ್ಲಾಂಟ್‌ ಎಂಜಿನಿಯರ್. ‘ಸಿಎ ಓದಿದ್ದರೆ ಹೆಚ್ಚು ಅವಕಾಶಗಳು ದೊರಕುತ್ತಿದ್ದವು ಎಂಬುದೂ ಗೊತ್ತಿದೆ. ಆದರೆ ಅದಕ್ಕಾಗಿ ಮನೆಯಿಂದ ದೂರವಾಗಲು ಆಗದೇ ಎಂ.ಕಾಂ ಸೇರಿದೆ. ಅಂದುಕೊಂಡಂತೆಯೇ ರ‍್ಯಾಂಕ್‌ ಪಡೆದೆ. ಅದಕ್ಕಾಗಿ ಬಹಳ ಕಷ್ಟಪಟ್ಟೆ. ಆದರೆ ಸ್ಮಾರ್ಟ್‌ ಆಗಿಯೇ ಓದಿದೆ’ ಎಂದರು.

ಕೃಷಿಕ ಕುಟುಂಬ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಕರ್ಲಂ ಗ್ರಾಮದ ಎಚ್‌.ದುರ್ಗಾಪ್ರಸಾದ್‌ ಪೋಷಕರು ಕೃಷಿ ಕೂಲಿಕಾರರು. ಖನಿಜ ಸಂಸ್ಕರಣೆ ಬಗ್ಗೆ ಓದುವ ಆಸಕ್ತಿ ಇದ್ದರೂ ಅವರ ಊರಿನಲ್ಲಿ ಅವಕಾಶವಿರಲಿಲ್ಲ. ಹೀಗಾಗಿ ಅವರು ಬಂದಿದ್ದು ಬಳ್ಳಾರಿಯ ಕಡೆಗೆ. ಸಂಡೂರಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಟೆಕ್‌ಗೆ ಸೇರಿದ ಅವರು ಮೊದಲ ರ‍್ಯಾಂಕ್‌ ಜೊತೆಗೆ ಮೂರು ಚಿನ್ನದ ಪದಕ ಗಳಿಸಿದ್ದಾರೆ.

‘ಬಿಎಸ್‌ಸಿ ಪದವಿ ಪಡೆದ ಬಳಿಕ ಖನಿಜ ಸಂಸ್ಕರಣೆ ವಿಷಯದ ಬಗ್ಗೆಯೇ ಓದಬೇಕು ಎಂದು ಹುಡುಕಾಡಿದಾಗ ಬಳ್ಳಾರಿಯಲ್ಲಷ್ಟೇ ಕೋರ್ಸ್‌ ಇರುವುದು ಗೊತ್ತಾಯಿತು. ಹೀಗಾಗಿ ಇಲ್ಲಿಗೆ ಬಂದೆ. ಬೋಧನೆ, ಸೌಕರ್ಯಗಳು ಉತ್ತಮವಾಗಿ ದೊರಕಿದವು’ ಎಂದು ‘ಪ್ರಜಾವಾಣಿ’ಯೊಂದಿಗೆ ಸಂತಸ ವ್ಯಕ್ತಪಡಿಸಿದರು.

ಎಂಎಸ್‌ಡಬ್ಲ್ಯುನಲ್ಲಿ ಮೊದಲ ರ‍್ಯಾಂಕ್‌ ಜೊತೆಗೆ ಎರಡು ಚಿನ್ನದ ಪದಕ ಗಳಿಸಿದ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಚಿತ್ರಂಪಳ್ಳಿಯ ಬಣಕಾರ ಪಲ್ಲವಿ ಕೃಷಿಕ ದಂಪತಿ ಬಣಕಾರ ಗೋಣಪ್ಪ ಮತ್ತು ಅನ್ನಪೂರ್ಣರ ಮೂರನೇ ಮಗಳು.

‘ಹಳ್ಳಿಯಲ್ಲಿ ಅಪ್ಪ ಮುಖಂಡರಾಗಿ ಸೇವೆ ಸಲ್ಲಿಸುತ್ತಿದ್ದುದನ್ನು ಕಂಡು ಸಮಾಜಕಾರ್ಯವನ್ನೇ ಆಯ್ಕೆಮಾಡಿಕೊಂಡು, ನಂದಿಹಳ್ಳಿ ಕೇಂದ್ರದ ಹಾಸ್ಟೆಲ್‌ನಲ್ಲಿದ್ದುಕೊಂಡೇ ಓದಿದೆ. ಮುಂದೆ ಮಾನವ ಸಂಪನ್ಮೂಲ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆಯುವ ಆಸೆ ಇದೆ’ಎಂದು ಹೇಳಿದರು.


ದುರ್ಗಾಪ್ರಸಾದ್‌

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು