ಶನಿವಾರ, ಏಪ್ರಿಲ್ 1, 2023
28 °C
ಕಾರ್ಯನಿರ್ವಹಣಾ ವ್ಯವಸ್ಥೆ ಹೆಸರಲ್ಲಿ ನಿಯಮ ಉಲ್ಲಂಘನೆ

ಆರ್‌ಟಿಒ: ಸಿಬ್ಬಂದಿಯನ್ನು ಬೇರೆ ಕಡೆಗಳಿಗೆ ನಿಯೋಜಿಸುವ ‘ವ್ಯವಹಾರ’ ಮತ್ತೆ ಶುರು

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾರ್ವತ್ರಿಕ ವರ್ಗಾವಣೆಯ ಮಾರ್ಗಸೂಚಿ ಇಲ್ಲದಿದ್ದರೂ, ಕಾರ್ಯನಿರ್ವಹಣಾ ವ್ಯವಸ್ಥೆಯ ಹೆಸರಿನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಗಳ ಸಿಬ್ಬಂದಿಯನ್ನು ಬೇರೆ ಕಡೆಗಳಿಗೆ ನಿಯೋಜಿಸುವ ‘ವ್ಯವಹಾರ’ ಮತ್ತೆ ಶುರುವಾಗಿದೆ.

ಸರ್ಕಾರದ ವರ್ಗಾವಣೆ ನೀತಿ ಅನ್ವಯ ಯಾವುದೇ ಇಲಾಖೆಯ ಅಧಿಕಾರೇತರ ಸಿಬ್ಬಂದಿ 3 ರಿಂದ 5ವರ್ಷ ಸೇವಾವಧಿ ಪೂರೈಸಿದ್ದರೆ ಮಾತ್ರ ವರ್ಗಾವಣೆ ಮಾಡಲು ಅವಕಾಶವಿದೆ. ಸಾರಿಗೆ ಇಲಾಖೆಯು ಕಾರ್ಯನಿರ್ವಹಣಾ ವ್ಯವಸ್ಥೆ ಹೆಸರಲ್ಲಿ ನಿಗದಿತ ಅವಧಿ ಪೂರೈಸದ ಕಚೇರಿ ಅಧೀಕ್ಷಕರು, ಪ್ರಥಮದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರನ್ನು ಒಂದು
ಕಚೇರಿಯಿಂದ ಮತ್ತೊಂದು ಕಚೇರಿಗೆ, ಒಂದು ಜಿಲ್ಲೆಯಿಂದ ಬೇರೊಂದು ಜಿಲ್ಲೆಗೆ ನಿಯೋಜನೆ ಮಾಡುವ ಪರಿಪಾಟವನ್ನು ಮತ್ತೆ ಆರಂಭಿಸಿದೆ.

ಈ ವರ್ಷದ ಮಾರ್ಚ್‌, ಏಪ್ರಿಲ್‌ನಲ್ಲೇ ಸಿಬ್ಬಂದಿ ನಿಯೋಜನೆಯ ದೊಡ್ಡಪಟ್ಟಿ ತಯಾರಾಗಿತ್ತು. ಆ ಹೊತ್ತಿನಲ್ಲಿ ಸಾರಿಗೆ ಇಲಾಖೆಯ ಕೆಲ ನೌಕರರು, ‘ಕೆಲವು ಮೋಟಾರು ವಾಹನ ನಿರೀಕ್ಷಕರು ಸಿಬ್ಬಂದಿಯಿಂದ ಹಣ ಸಂಗ್ರಹ ಮಾಡುತ್ತಿದ್ದಾರೆ. ಹಣ ನೀಡಲು ಒಪ್ಪದವರನ್ನು ದೂರದ ಪ್ರದೇಶಗಳಿಗೆ ನಿಯೋಜನೆ ಮಾಡಲಾಗುತ್ತಿದೆ. ಆ ಮೂಲಕ ನೂರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದಾರೆ’ ಎಂದು ಅಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜೇಂದ್ರಕುಮಾರ್ ಕಟಾರಿಯಾ ಅವರಿಗೆ ದೂರು ಸಲ್ಲಿಸಿದ್ದರು. 

ದೂರು ಪರಿಶೀಲನೆ ನಡೆಸಿದ್ದ ಅವರು, ‘ಸಾರ್ವಜನಿಕರಿಗೆ ಉತ್ತಮ ಸೇವೆ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಸರ್ಕಾರದ ಮಾರ್ಗಸೂಚಿ ಅನ್ವಯ ಅಧಿಕಾರಿ, ಸಿಬ್ಬಂದಿಗೆ ಕನಿಷ್ಠ ಅವಧಿ ನಿಗದಿ ಮಾಡಲಾಗಿದೆ. ಆದರೆ, ಸಾರಿಗೆ ಆಯುಕ್ತರ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾರ್ಗಸೂಚಿಗೆ ವಿರುದ್ಧವಾಗಿ ನಿರ್ವಹಣಾ ವ್ಯವಸ್ಥೆಯ ಹೆಸರಲ್ಲಿ ನಿಯೋಜನೆ ಮಾಡುತ್ತಿರುವುದು ನಿಯಮ ಬಾಹಿರ. ಕೂಡಲೇ ಈ ಪ್ರಕ್ರಿಯೆ ಸ್ಥಗಿತಗೊಳಿಸಬೇಕು’ ಎಂದು ಲಿಖಿತ ಸೂಚನೆ
ನೀಡಿದ್ದರು.

ಕೆಲವು ದಿನಗಳ ಹಿಂದೆ ಕಟಾರಿಯಾ ಅವರು ವರ್ಗಾವಣೆಯಾದರು. ಅದಾದ ಬಳಿಕ ಸಾರಿಗೆ ಮತ್ತು ಸುರಕ್ಷತಾ ಆಯುಕ್ತರು ನಿಯೋಜನೆಯ ಆದೇಶಕ್ಕೆ ಸಹಿ ಮಾಡಿದ್ದಾರೆ. ಡಿಸೆಂಬರ್‌ ಮೊದಲ ವಾರದಲ್ಲೇ ಮೂರು ಆದೇಶಗಳನ್ನು ಹೊರಡಿಸಲಾಗಿದೆ. 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ಅವಧಿಪೂರ್ವದಲ್ಲಿ ಬೇರೆಡೆಗೆ ನಿಯೋಜನೆ ಮಾಡಲಾಗಿದೆ. ಪ್ರತಿ ಆದೇಶದಲ್ಲಿ ‘ಸಾರಿಗೆ ಸಚಿವರಿಂದ ಅನುಮೋದಿತ’ ಎಂಬ ಉಲ್ಲೇಖವಿದೆ.

‘4ಜಿ ಹೆಡ್’ ಕೊಟ್ಟ ಪಟ್ಟಿಗಷ್ಟೇ ಅನುಮೋದನೆ!

‘ಹಣ ನೀಡಿದವರಿಗೆ ನಿಯೋಜನೆ ಹೆಸರಲ್ಲಿ ಆಯಕಟ್ಟಿನ ಜಾಗ ನೀಡಲಾಗುತ್ತಿದೆ. ಹಣ ಕೊಡದವರಿಗೆ ದೂರದ ಪ್ರದೇಶಗಳಿಗೆ ನಿಯೋಜನೆ ಮಾಡಲಾಗಿದೆ. ‘4ಜಿ’ ಹೆಸರಲ್ಲಿ ಇಲಾಖೆಯ ಅಧಿಕಾರಿಯೊಬ್ಬರು ಹಣ ಸಂಗ್ರಹಿಸುತ್ತಿದ್ದಾರೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಬಯಸದ ನೌಕರರೊಬ್ಬರು.

‘ಸಾಕ್ಷ್ಯ ಸಮೇತ ಮೇಲಧಿಕಾರಿಗಳಿಗೆ ದೂರು ನೀಡಿದ್ದೆವು. ಹಾಗಾಗಿ, ನಿಯೋಜನೆ ಸ್ಥಗಿತವಾಗಿತ್ತು. ಈಗ ಮತ್ತೆ ಆರಂಭಿಸಿದ್ದಾರೆ. ಹಿಂದೆ ಪ್ರಧಾನ ಕಾರ್ಯದರ್ಶಿಗೆ ದೂರು ನೀಡಿದ್ದ ಸಿಬ್ಬಂದಿಯನ್ನು ಉತ್ತರ ಕರ್ನಾಟಕ ಜಿಲ್ಲೆಗಳ ಕಚೇರಿಗಳಿಗೆ ಹಾಕಿದ್ದಾರೆ’ ಎಂದು ಅವರು ಹೇಳಿದರು.

‘ಮೋಟಾರು ವಾಹನ ನಿರೀಕ್ಷಕರು ಸೇರಿದಂತೆ ಮೇಲಿನ ಅಧಿಕಾರಿಗಳು ಸಿಂಡಿಕೇಟ್‌ ಮಾಡಿಕೊಂಡಿದ್ದು, ವರ್ಗಾವಣೆ ಅವಧಿಯಲ್ಲಿ ಅನುಕೂಲಕರ ಸ್ಥಳಗಳಿಗೆ ತೆರಳುತ್ತಾರೆ. ಈ ಸಿಂಡಿಕೇಟ್‌ಗೆ ‘4ಜಿ’ ಎಂದು, ಅದರ ಮುಖ್ಯಸ್ಥನನ್ನು ‘4ಜಿ ಹೆಡ್‌’ ಎಂದು ಕರೆಯಲಾಗುತ್ತದೆ. ‘4ಜಿ’ ನೀಡಿದ ಪಟ್ಟಿಗೆ ಸಚಿವರು, ಆಯುಕ್ತರು ಅನುಮೋದನೆ ನೀಡುತ್ತಾರೆ. ಆದರೆ, ಆರ್‌ಟಿಒ ಕಚೇರಿಯ ಇತರೆ ಸಿಬ್ಬಂದಿಯನ್ನು ವರ್ಷ, ಎರಡು ವರ್ಷಕ್ಕೆ ವರ್ಗಾವಣೆ ಮಾಡಲು ಅವಕಾಶ ಇಲ್ಲ. ಹಾಗಾಗಿ, ಹಣದ ವ್ಯವಹಾರಕ್ಕಾಗಿಯೇ ನಿಯೋಜನೆ ಮಾರ್ಗ ಕಂಡುಕೊಂಡಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಆರ್‌ಟಿಒ ಅಧೀಕ್ಷಕರೊಬ್ಬರು ವಿವರಿಸಿದರು. ಹಣ ನೀಡದ ಸಿಬ್ಬಂದಿಯನ್ನು ಇತರೆ ಆದಾಯವಿಲ್ಲದ ರಸ್ತೆ ಸುರಕ್ಷತಾ ಪ್ರಾಧಿಕಾರ, ಕರ್ನಾಟಕ ಸಾರಿಗೆ ನ್ಯಾಯಾಧೀಕರಣ, ಮೇಲ್ಮನವಿ ಪ್ರಾಧಿಕಾರ, ಆಟೊರಿಕ್ಷಾ ಪರವಾನಗಿ ವಿತರಣಾ ಕೇಂದ್ರಗಳಿಗೆ ನಿಯೋಜಿಸಲಾಗುತ್ತಿದೆ ಎಂದರು.

ಸಚಿವರ ಒಪ್ಪಿಗೆ ಮೇರೆಗೆ ಆದೇಶ: ಸಿದ್ದರಾಮಪ್ಪ

ಮಾರ್ಚ್‌ನಲ್ಲಿ ಸರ್ಕಾರ ನಿಯೋಜನೆ ಸ್ಥಗಿತಕ್ಕೆ ಸೂಚಿಸಿತ್ತು. ಈಗ ಸಚಿವರ ಅನುಮತಿ ಪಡೆದು ಆದೇಶ ಮಾಡಲಾಗಿದೆ ಎಂದು ಇಲಾಖೆ ಆಯುಕ್ತ ಎಸ್‌.ಎನ್.ಸಿದ್ದರಾಮಪ್ಪ ಹೇಳಿದರು.

ನಿಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇಲಾಖೆಯಲ್ಲಿ ಶೇ 50ಕ್ಕೂ ಹೆಚ್ಚು ಸಿಬ್ಬಂದಿ ಕೊರತೆ ಇದೆ. ಹಾಗಾಗಿ, ಹುದ್ದೆ ಭರ್ತಿಯಾಗದ ಕೆಲವು ಕಚೇರಿಗಳಲ್ಲಿ ಸಿಬ್ಬಂದಿ ತುರ್ತು ಅಗತ್ಯ ಇರುತ್ತದೆ. ಅಂತಹ ಸ್ಥಳಗಳಿಗೆ ನಿಯೋಜನೆ  ಮಾಡುವುದು ಅನಿವಾರ್ಯವಾಗಿದೆ’ ಎಂದು ಪ್ರತಿಪಾದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು