ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಅಧಿವೇಶನ ಸವಾಲಾಗಿ ಸ್ವೀಕಾರ: ಕಾಗೇರಿ

ಕಲಾಪ ವೀಕ್ಷಣೆಗೆ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ; ಸಾರ್ವಜನಿಕರು ಬರಬಹುದು
Last Updated 2 ಡಿಸೆಂಬರ್ 2021, 11:04 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಡಿ.13ರಿಂದ 24ರವವರೆಗೆ ನಿಗದಿಯಾಗಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನು ಕೋವಿಡ್ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ನಡೆಸಲಾಗುವುದು’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಅಧಿವೇಶನದ ಪೂರ್ವ ಸಿದ್ಧತೆ ಕುರಿತು ಸುವರ್ಣ ವಿಧಾನಸೌಧದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಈ ಬಾರಿ ಅಧಿವೇಶನಕ್ಕೆ ಅನೇಕ ಸವಾಲುಗಳು ಎದುರಾಗಿವೆ. ಅತಿವೃಷ್ಟಿಯಿಂದ ಸಾಕಷ್ಟು ಹಾನಿಯಾಗಿದ್ದು, ಅಧಿಕಾರಿಗಳು ಪರಿಹಾರ ಕಾರ್ಯ ಕೈಗೊಳ್ಳಬೇಕಿದೆ. ಡಿ.14ಕ್ಕೆ ವಿಧಾನಪರಿಷತ್ ಚುನಾವಣೆ ಮತಎಣಿಕೆ ಇದೆ. ಇದೇ ತಿಂಗಳಲ್ಲಿ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಚುನಾವಣೆಯೂ ನಡೆಯಲಿದೆ. ಬೆಳಗಾವಿ ಜಿಲ್ಲಾಡಳಿತದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಇವೆಲ್ಲ ಸವಾಲುಗಳನ್ನು ಅವಕಾಶವಾಗಿ ಸ್ವೀಕರಿಸಿ ಅಧಿವೇಶನ ನಡೆಸಲಾಗುವುದು’ ಎಂದು ಹೇಳಿದರು.

‘2018ರ ನಂತರ ಬೆಳಗಾವಿಯಲ್ಲಿ ಅಧಿವೇಶನ ನಡೆದಿಲ್ಲ. ನಾವು ಸಮಾಲೋಚಿಸಿದಾಗ, ಈ ಬಾರಿ ಅಧಿವೇಶನ ನಡೆಸಲು ಸದ್ಯ ಯಾವುದೇ ಆತಂಕವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ’ ಎಂದರು.

‘ಅಧಿವೇಶನಕ್ಕೆ ಬರುವ ಸಚಿವರು, ಶಾಸಕರು, ಅಧಿಕಾರಿಗಳು-ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಆಹಾರದ ವ್ಯವಸ್ಥೆ ಬಗ್ಗೆಯೂ ಎಚ್ಚರ ವಹಿಸಲಾಗಿದೆ. ವಿವಿಧ ಭಾಗಗಳಿಂದ ಬರುವವರಿಗೆ ಅನುಕೂಲ ಆಗುವಂತೆ ಉತ್ತಮ ಆಹಾರ ವ್ಯವಸ್ಥೆಗೆ ಸೂಚಿಸಲಾಗಿದೆ.‌ ವಾಹನಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಕಲಾಪ ವೀಕ್ಷಣೆಗಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ಬರುತ್ತಿದ್ದರು. ಆದರೆ, ಈ ಬಾರಿ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ. ಸಾರ್ವಜನಿಕರಿಗೆ ಕಲಾಪ ವೀಕ್ಷಿಸಲು ಅನುವು ಮಾಡಿಕೊಡಲಾಗುವುದು’ ಎಂದು ಹೇಳಿದರು.

‘ಸರ್ಕಾರದಿಂದ ಈವರೆಗೆ ಯಾವುದೇ ಮಸೂದೆ ನಮ್ಮ ಮುಂದೆ ಬಂದಿಲ್ಲ. ಮಸೂದೆ ಮಂಡಿಸುವುದಿದ್ದರೆ ವಾರದ ಮುಂಚೆ ಕಳುಹಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ. ಇನ್ನೂ ಕಾಲಾವಕಾಶವಿದೆ’ ಎಂದು ತಿಳಿಸಿದರು.

‘ಹತ್ತು ದಿನಗಳವರೆಗೆ ಎಲ್ಲ ಕಲಾಪಗಳನ್ನು ವ್ಯವಸ್ಥಿತವಾಗಿ ನಡೆಸಲಾಗುವುದು. ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡಲಾಗುವುದು’ ಎಂದು ಉತ್ತರಿಸಿದರು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ರಾಜ್ಯದ 25 ವಿಧಾನಪರಿಷತ್ ಸದಸ್ಯರ ಅಧಿಕಾರದ ಅವಧಿ 2022ರ ಜ.5ರವರೆಗೆ ಇದೆ. ಹೀಗಾಗಿ, ಅವರೆಲ್ಲರೂ ವಿಧಾನಪರಿಷತ್ ಕಲಾಪದಲ್ಲಿ ಭಾಗವಹಿಸಬಹುದು. ಡಿ.10ರಂದು ಮತದಾನ ಪ್ರಕ್ರಿಯೆ ಮುಗಿಯುವುದರಿಂದ ಅಭ್ಯರ್ಥಿಗಳಿಗೂ (ಹಾಲಿ ಸದಸ್ಯರು) ಭಾಗವಹಿಸಲು ಅವಕಾಶವಿದೆ. ಹೊಸದಾಗಿ ಚುನಾಯಿತರಾದ ಸದಸ್ಯರು ಜ.5ರ ನಂತರ ಪ್ರಮಾಣವಚನ ಸ್ವೀಕರಿಸುತ್ತಾರೆ’ ಎಂದು ಹೇಳಿದರು.

‘ಅಧಿವೇಶನ ವೇಳೆ ವಸತಿ ವ್ಯವಸ್ಥೆಗೆ ವ್ಯಯಿಸಿದ್ದನ್ನು ಗಮನಿಸಿದರೆ, ಆ ಹಣದಲ್ಲೆ ಈವರೆಗೆ ಶಾಸಕರ ಭವನ ನಿರ್ಮಾಣವಾಗುತ್ತಿತ್ತು. ಇನ್ನಾದರೂ ಇಲ್ಲಿ ಶಾಸಕರ ಭವನ ಹಾಗೂ ಸಚಿವಾಲಯದ ಕಟ್ಟಡ ನಿರ್ಮಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದೇವೆ. ಮತ್ತೊಮ್ಮೆ ಅವರೊಂದಿಗೆ ಸಮಾಲೋಚನೆ ನಡೆಸುವೆ’ ಎಂದು ಪ್ರತಿಕ್ರಿಯಿಸಿದರು.

ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT