ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗ ಮೀಸಲಾತಿ ಕಾವು | ಶೀಘ್ರವೇ ವರದಿ ಸಲ್ಲಿಕೆಗೆ ಸಿ.ಎಂ ಸೂಚನೆ

Last Updated 23 ಡಿಸೆಂಬರ್ 2022, 22:15 IST
ಅಕ್ಷರ ಗಾತ್ರ

ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ
ದಿಂದ ಸಕಾರಾತ್ಮಕ ಸಂದೇಶ ರವಾನೆಯಾದ ಬೆನ್ನಲ್ಲೇ ಒಕ್ಕಲಿಗ ಸಮುದಾಯವೂ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕೆಂದು ಒತ್ತಡ ಹೇರಿದ್ದು, ಈ ಸಂಬಂಧ ತ್ವರಿತವಾಗಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ ನೀಡಿದ್ದಾರೆ.

ಒಕ್ಕಲಿಗ ಸಮುದಾಯದ ಸಚಿವರು ಗುರುವಾರ ರಾತ್ರಿ ಇಲ್ಲಿ ಸಭೆ ಸೇರಿ ಚರ್ಚೆ ನಡೆಸಿದ ಬಳಿಕ ಶುಕ್ರವಾರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ 12ಕ್ಕೆ ಹೆಚ್ಚಳ ಮಾಡಲು ಬೇಡಿಕೆ ಮುಂದಿಟ್ಟರು.

ಅಲ್ಲದೇ, ಆರ್ಥಿಕ ದುರ್ಬಲ ವರ್ಗಕ್ಕೆ (ಇಡ್ಲ್ಯೂಎಸ್‌) ನೀಡುವ ಶೇ 10ರಷ್ಟು ಮೀಸಲಾತಿಯಲ್ಲಿ ನಗರ ಪ್ರದೇಶದ ಒಕ್ಕಲಿಗರನ್ನೂ ಸೇರಿಸಬೇಕು ಎಂದು ಸಚಿವರು ಪ್ರತಿಪಾದಿಸಿದರು.

ಒಕ್ಕಲಿಗ ಸಮುದಾಯಕ್ಕೆ ಶಿಕ್ಷಣಮತ್ತು ಉದ್ಯೋಗದಲ್ಲಿ ಹೆಚ್ಚು ಅವಕಾಶ ಸಿಗಬೇಕು. ಸಮುದಾಯದ ಜನಸಂಖ್ಯೆಯೂ ಹೆಚ್ಚಾಗಿದ್ದು, ಅದಕ್ಕೆ ಸರಿಯಾಗಿಮೀಸಲಾತಿ ಪ್ರಮಾಣವೂ ಹೆಚ್ಚಳವಾಗಬೇಕು. ಅಲ್ಲದೇ, ಒಕ್ಕಲಿಗ ಸಮುದಾಯಕ್ಕೆ ಹೊಂದಿಕೊಂಡಿರುವ ರೆಡ್ಡಿ, ಬಂಟ ಸಮುದಾಯಗಳಿಗೆ ಮೀಸಲಾತಿ ಅಗತ್ಯವಿದೆ. ಕುಂಚಿಟಿಗ ಸಮುದಾಯ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ಆ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಸಚಿವರು ಪ್ರತ್ಯೇಕ ಮನವಿ ಸಲ್ಲಿಸಿದರು.

ಜನವರಿ 23 ಗಡುವು: ಒಕ್ಕಲಿಗರ ಹೋರಾಟ ಸಮಿತಿಯ ವತಿಯಿಂದ ನವೆಂಬರ್‌ನಲ್ಲಿ ಸಭೆಯೊಂದನ್ನು ನಡೆಸಿ, ಒಕ್ಕಲಿಗ ಉಪ ಪಂಗಡಗಳನ್ನು ಒಳಗೊಂಡ ರಾಜ್ಯದ ಇತರ ಹಿಂದುಳಿದ ವರ್ಗಗಳ ‘ಪ್ರವರ್ಗ–3ಎ’ಗೆ ನೀಡಲಾಗಿರುವ ಮೀಸಲಾತಿ ಪ್ರಮಾಣವನ್ನು ಜನವರಿ 23ರ ಒಳಗೆ ಶೇ 4ರಿಂದ ಶೇ 12ಕ್ಕೆ ಹೆಚ್ಚಿಸಬೇಕು. ಇಲ್ಲವಾದರೆ ಹೋರಾಟದ ಹಾದಿ ಹಿಡಿಯುವುದಾಗಿ ಎಚ್ಚರಿಕೆ ನೀಡಿತ್ತು.

ಈ ಸಭೆಯಲ್ಲಿಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಭಾಗವಹಿಸಿದ್ದರು. ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರು ಭಾಗವಹಿಸಿದ್ದರು.

ಇದಕ್ಕೂ ಮುನ್ನ ಫೆಬ್ರುವರಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ನ್ಯಾ.ಚಂದ್ರಶೇಖರಯ್ಯ ನೇತೃತ್ವದಲ್ಲಿ ಮೀಸಲಾತಿ ಹೆಚ್ಚಳ ಬೇಡಿಕೆ ಕುರಿತು ಹಂತ ಹಂತವಾದ ಹೋರಾಟದ ರೂಪುರೇಷೆಯನ್ನು ರೂಪಿಸಲಾಗಿತ್ತು.

ಬೆಳಗಾವಿಯಲ್ಲಿ ಕಾಂಗ್ರೆಸ್‌ ಪಕ್ಷದ ಒಕ್ಕಲಿಗ ಶಾಸಕರೂ ಪ್ರತ್ಯೇಕ ಸಭೆ ನಡೆಸಿ, ಜ.23ರೊಳಗೆ ಮೀಸಲಾತಿ ಬೇಡಿಕೆ ಈಡೇರದಿದ್ದರೆ, ಒಕ್ಕಲಿಗ ಸಮುದಾಯ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಒಬಿಸಿ ಪಟ್ಟಿಗೆ ಒಕ್ಕಲಿಗರನ್ನು ಸೇರಿಸಿರುವುದರಿಂದ ಅಧ್ಯಯನ ನಡೆಸುವ ಅವಶ್ಯಕತೆ ಇಲ್ಲ ಎಂದೂ ಹೇಳಿದ್ದಾರೆ.

‘ಆಯೋಗದ ಪರಿಶೀಲನೆಯಲ್ಲಿ ಮನವಿ’

ಸಚಿವರ ಜತೆಗಿನ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಸಭೆ ನಡೆಸಿದ ಒಕ್ಕಲಿಗ ಸಮುದಾಯದ ಮುಖಂಡರು ಮನವಿಯನ್ನು ಕೊಟ್ಟಿದ್ದಾರೆ. ಆ ಮನವಿಯನ್ನು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳುಹಿಸಲಾಗಿದೆ’ ಎಂದರು. ‘ಮನವಿಯ ಪರಿಶೀಲನೆ ನಡೆಯುತ್ತಿದೆ. ಯಾವುದೇ ಕ್ರಮ ತೆಗೆದುಕೊಳ್ಳಲುಸಂವಿಧಾನದತ್ತವಾದ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸು ಅಗತ್ಯ. ಹೀಗಾಗಿ ನವೆಂಬರ್‌ 29ರಂದೇ ಮನವಿಯನ್ನು ಕಳುಹಿಸಲಾಗಿದೆ. ಇದರ ಅಂಶಗಳನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸುವುದಾಗಿ ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ. ಈಗಿನ ಮನವಿಯನ್ನೂ ಆಯೋಗಕ್ಕೆ ಕಳುಹಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಧಮ್ಕಿ ಹಾಕಲ್ಲ: ಸಚಿವ ಅಶೋಕ

‘ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು ಎಂಬುದು ಒಕ್ಕಲಿಗ ಸಮುದಾಯದ ನ್ಯಾಯಯುತ ಬೇಡಿಕೆ. ನಮ್ಮ ಬೇಡಿಕೆಯನ್ನು ಶಾಂತಿಯುತವಾಗಿ ಈಡೇರಿಸಿಕೊಳ್ಳುತ್ತೇವೆ. ನಾವು ಗಲಾಟೆ ಮಾಡಲ್ಲ, ಧಮ್ಕಿ ಹಾಕುವುದಿಲ್ಲ‘ ಎಂದು ಕಂದಾಯ ಸಚಿವ ಆರ್.ಅಶೋಕ ಅವರು ಮುಖ್ಯಮಂತ್ರಿ ಭೇಟಿ ನಂತರ ಸುದ್ದಿಗಾರರಿಗೆ ತಿಳಿಸಿದರು.

‘ಜನಸಂಖ್ಯೆ ಆಧಾರದಲ್ಲಿ ನಾವೂ ರಾಜ್ಯದಲ್ಲಿ ಶೇ 16ರಷ್ಟು ಇದ್ದೇವೆ. ನಮ್ಮಲ್ಲೂ ತುಂಬಾ ಬಡವರು ಇದ್ದಾರೆ. ಜಮೀನನ್ನು ಕಳೆದುಕೊಂಡವರಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಅಭದ್ರತೆ ಕಾಡಬಾರದು. ಇಡೀ ಒಕ್ಕಲಿಗ ಸಮುದಾಯ ಒಟ್ಟಿಗೆ ಸೇರಬೇಕು. ಪರಿಹಾರ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ’ ಎಂದರು.

‘ಜ. 4ರಂದು ಸಮುದಾಯದ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಗಿರುವ ಎಲ್ಲ ಬೆಳವಣಿಗೆಗಳನ್ನು ಚರ್ಚೆ ಮಾಡುತ್ತೇವೆ. ನಾವೆಲ್ಲರೂ ಒಟ್ಟಿಗೆ ಹೆಜ್ಜೆ ಹಾಕಿ, ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ’ ಎಂದೂ ಅಶೋಕ ಹೇಳಿದರು.

ಮೀಸಲಾತಿ ಅರ್ಥ ಕಳೆದುಕೊಳ್ಳುತ್ತಿದೆ...
ರಾಮನಗರ: ಸದ್ಯ ದೇಶದ ಶೇ 90ರಷ್ಟು ಜನರಿಗೆ ಈಗಾಗಲೇ ಮೀಸಲಾತಿ ಸಿಕ್ಕಿದ್ದು, ಅದು ಕಾಲಕ್ರಮೇಣ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತಿದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಕರ್ತರ ಜೊತೆ ಮಾತನಾಡಿ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ಕುರಿತು ಪ್ರತಿಕ್ರಿಯಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಅನೇಕ ಸ್ವಾಮೀಜಿಗಳನ್ನೂ ಒಳಗೊಂಡಂತೆ ಕೆಲವರು ಮೀಸಲಾತಿ ಪದದ ಅರ್ಥಕ್ಕೆ ಮಸಿ ಬಳಿಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT