ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೋಹಿಂಗ್ಯಾ ಮುಸ್ಲಿಮರ ಗಡೀಪಾರಿಗೆ ಮಾರ್ಗಸೂಚಿ ಬಂದಿಲ್ಲ’:  ಆರಗ ಜ್ಞಾನೇಂದ್ರ

Last Updated 16 ಸೆಪ್ಟೆಂಬರ್ 2021, 16:44 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಆರು ನಿರಾಶ್ರಿತರ ಶಿಬಿರಗಳಲ್ಲಿ 191 ಮಂದಿ ರೋಹಿಂಗ್ಯಾ ಮುಸ್ಲಿಮರು ಆಶ್ರಯ ಪಡೆದಿದ್ದು, ಅವರ ಗಡೀಪಾರಿಗೆ ಸಂಬಂಧಿಸಿ ಕೇಂದ್ರ ನಿರ್ದಿಷ್ಟ ಮಾರ್ಗಸೂಚಿ ನೀಡಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಗುರುವಾರ ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಮುನಿರಾಜು ಗೌಡ ಪಿ.ಎಂ. ಅವರ ಪ್ರಶ್ನೆಗೆ ಅವರು, ‘ಶಿಬಿರಗಳಲ್ಲಿ ಇರುವ ರೋಹಿಂಗ್ಯಾ ಮುಸ್ಲಿಮರನ್ನು ಹೊರಕ್ಕೆ ಕಳುಹಿಸಲು ಕೇಂದ್ರದ ಮಾರ್ಗಸೂಚಿಗೆ ಕಾಯುತ್ತಿದ್ದೇವೆ’ ಎಂದರು.

ವಿದೇಶಗಳ ಜನರು ಅಕ್ರಮವಾಗಿ ರಾಜ್ಯದಲ್ಲಿ ನೆಲೆಸದಂತೆ ಕ್ರಮಕೈಗೊಳ್ಳಲಾಗುತ್ತಿದೆ. ವಿದೇಶಿ ಪ್ರಜೆಗಳ ಮೇಲೆ ನಿಗಾ ಇರಿಸಲಾಗಿದೆ. ವೀಸಾ ಅವಧಿ ಮುಗಿದಿದ್ದರೂ ಇಲ್ಲಿಯೇ ನೆಲೆಸಿರುವವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ಕೆಲವು ವಿದೇಶಿ ಪ್ರಜೆಗಳ ವಿರುದ್ಧ ಕ್ರಿಮಿನಲ್‌ ಅಪರಾಧ ಪ್ರಕರಣಗಳು ಬಾಕಿ ಇವೆ. ಇತ್ಯರ್ಥವಾಗದೇ ಗಡೀಪಾರು ಸಾಧ್ಯವಿಲ್ಲ ಎಂದರು.

ಅಕ್ರಮ ವಲಸಿಗರ ಪತ್ತೆಗೆ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಅಕ್ರಮ ವಲಸಿಗರಿಗೆ ಆಧಾರ್‌ ಕಾರ್ಡ್‌ ಕೊಡಿಸುತ್ತಿದ್ದ ಆರೋಪದಡಿ ಬೆಂಗಳೂರಿನ ಒಬ್ಬ ವೈದ್ಯಾಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ ಆರೋಪದಡಿ ಮೇಲೆ ಬೆಂಗಳೂರು ನಗರ ಮತ್ತು ಕೆಜಿಎಫ್‌ನಲ್ಲಿ ತಲಾ ಒಬ್ಬರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.

‘ರಾಜ್ಯದಲ್ಲಿ ಬೃಹತ್‌ ಸಂಖ್ಯೆಯಲ್ಲಿ ಬಾಂಗ್ಲಾದೇಶದ ವಲಸಿಗರು ಇದ್ದಾರೆ. ಅವರನ್ನು ಗುರುತಿಸಿ ಹೊರಹಾಕುವ ಕೆಲಸ ಆಗಿಲ್ಲ. ನಾವು ಸುಮ್ಮನೆ ಕುಳಿತರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಮುನಿರಾಜು ಗೌಡ ಹೇಳಿದರು.

ನಾಲ್ಕು ವರ್ಷಗಳಲ್ಲಿ 27 ಲಾಕಪ್‌ ಸಾವು

ಬೆಂಗಳೂರು: ನಾಲ್ಕು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 27 ಮಂದಿ ಪೊಲೀಸ್‌ ವಶದಲ್ಲಿರುವಾಗ (ಲಾಕಪ್‌) ಮೃತಪಟ್ಟಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗುರುವಾರ ವಿಧಾನ ಪರಿಷತ್‌ಗೆ ತಿಳಿಸಿದರು.

ಕಾಂಗ್ರೆಸ್‌ನ ಕೆ. ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಅವರು, ‘2018ರಲ್ಲಿ ಎಂಟು, 2019ರಲ್ಲಿ ಮೂರು, 2020ರಲ್ಲಿ ಆರು ಮತ್ತು 2021ರಲ್ಲಿ 10 ಮಂದಿ ಲಾಕಪ್‌ನಲ್ಲಿ ಸಾವಿಗೀಡಾಗಿದ್ದಾರೆ. ಆದರೆ, ಈ ಎಲ್ಲರೂ ಪೊಲೀಸ್‌ ದೌರ್ಜನ್ಯದಿಂದ ಸತ್ತಿದ್ದಾರೆ ಎಂದು ಹೇಳಲಾಗದು. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಪೊಲೀಸ್‌ ವಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಮೃತರಾದವರೂ ಇದ್ದಾರೆ’ ಎಂದರು.

‘ಸಿಂದಗಿಯಲ್ಲಿ ಅತ್ಯಾಚಾರ ಪ್ರಕರಣದ ಆರೋಪಿ ಪೊಲೀಸ್‌ ದೌರ್ಜನ್ಯಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದನ್ನು ಕೇವಲ ಆತ್ಮಹತ್ಯೆ ಎನ್ನಲಾಗದು’ ಎಂದು ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಹೇಳಿದರು.

ಗೋವಿಂದರಾಜು ಮಾತನಾಡಿ, ‘ಬೆಂಗಳೂರಿನ ಸಂಜಯನಗರ ಠಾಣೆ ಪೊಲೀಸರು ವೈದ್ಯರೊಬ್ಬರನ್ನು ಕರೆದೊಯ್ದು ಮೂರು ದಿನ ಕೂಡಿಹಾಕಿ ಹಿಂಸಿಸಿದ್ದಾರೆ. ಲಕ್ಷಾಂತರ ರೂಪಾಯಿಯನ್ನೂ ಸುಲಿಗೆ ಮಾಡಿದ್ದಾರೆ. ಅದೇ ವ್ಯಾಪ್ತಿಯ ಎಸಿಪಿಗೆ ತನಿಖೆ ಜವಾಬ್ದಾರಿ ನೀಡಲಾಗಿದೆ. ಇದರಿಂದ ಸತ್ಯ ಹೊರ ಬರುವುದೆ’ ಎಂದು ಪ್ರಶ್ನಿಸಿದರು.

ಎರಡೂ ಪ್ರಕರಣಗಳ ಕುರಿತು ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು. ಲಾಕಪ್‌ ಸಾವಿನ ಎಲ್ಲ ಪ್ರಕರಣಗಳನ್ನೂ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ನಿರ್ದೇಶನದಂತೆ ಸಿಐಡಿ ತನಿಖೆಗೆ ಒಪ್ಪಿಸಲಾಗುತ್ತಿದೆ ಎಂದು ಗೃಹ ಸಚಿವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT