ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕವನ್ನು ತಾಲಿಬಾನ್‌ ಮಾಡಲು ಬಿಡಲ್ಲ: ಸುನಿಲ್ ಕುಮಾರ್

Last Updated 4 ಫೆಬ್ರುವರಿ 2022, 11:06 IST
ಅಕ್ಷರ ಗಾತ್ರ

ಬೆಂಗಳೂರು: ಸಿದ್ದರಾಮಯ್ಯ ಬಿತ್ತಿದ ಜಾತಿ ವಿಷ ಬೀಜದ ಮುಂದುವರಿದ ಭಾಗವೇ ಹಿಜಬ್ ಘರ್ಷಣೆ. ಕರ್ನಾಟಕವನ್ನು ತಾಲೀಬಾನ್ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜನ ಮಾನಸದಲ್ಲಿ ಶಾಲಾ-ಕಾಲೇಜುಗಳಿಗೆ ಸಮವಸ್ತ್ರ ಬೇಕು ಎಂಬ ಅಭಿಪ್ರಾಯವಿದೆ. ಖುಷಿ ಬಂದಾಗ ಒಬ್ಬೊಬ್ಬರು ಒಂದೊಂದು ವಸ್ತ್ರ ಹಾಕಿಕೊಂಡು ಬರೋದಕ್ಕೆ ಅಲ್ಲ. ನಿಯಮಗಳು ಅನ್ನೋದಕ್ಕಿಂತ ಇದೊಂದು ಸಂಪ್ರದಾಯವಾಗಿದೆ ಎಂದರು.

ಮತೀಯವಾದದ ಕಾರಣಕ್ಕೆ ಹೀಗೆ ವಸ್ತ್ರ ಹಾಕಿಕೊಂಡು ಬರೋದನ್ನ ಸಹಿಸಲು ಆಗೋದಿಲ್ಲ. ಉಡುಪಿ, ಮಂಗಳೂರು ಜಿಲ್ಲೆಯನ್ನು ತಾಲಿಬಾನ್ ಮಾಡಲು ಬಿಡೋದಿಲ್ಲ ಎಂದು ಹೇಳಿದರು.

ಸಮವಸ್ತ್ರ ನಿಯಮಕ್ಕೆ ಸಮಿತಿ ರಚನೆ ಮಾಡೋದಾಗಿ ಶಿಕ್ಷಣ ‌ಇಲಾಖೆ ಈಗಾಗಲೇ ಸ್ಪಷ್ಟ ಮಾಡಿದೆ. ಶೀಘ್ರವಾಗಿ ಸುತ್ತೋಲೆ ನೀಡುವುದಾಗಿ ಹೇಳಿದೆ. ಸರ್ಕಾರಿ ಶಾಲೆಗೆ ಶುಲ್ಕ ಕಟ್ಟೋಕೆ ಕಷ್ಟ ಅನ್ನುವ ಒಂದು ವಲಯದವರು ನ್ಯಾಯಾಲಯಕ್ಕೆ ಹೋಗುತ್ತಾರೆ ಅಂದರೆ ಇದರಲ್ಲಿ ಯಾರ ಕೈವಾಡ ಇದೆ ? ಮತೀಯ ಸಂಗತಿಗಳನ್ನ ವಿಜೃಂಭಿಸುವ ಕೆಲಸವನ್ನು ಶಾಲಾ ಕ್ಯಾಂಪಸ್ ನಲ್ಲಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣದ ಮಧ್ಯೆ, ಯುವಕರ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡಬಾರದು. ಸಿದ್ದರಾಮಯ್ಯ, ಯು.ಟಿ. ಖಾದರ್ ಅವರು ಯಾವಾಗಲು ಮತೀಯವಾಗಿಯೇ ಆಲೋಚನೆ ಮಾಡುತ್ತಾರೆ. ಜಾತಿ– ಜಾತಿಗಳ ನಡುವೆ ಎತ್ತಿಕಟ್ಟುವ ಕೆಲಸ ಈ ರಾಜ್ಯದಲ್ಲಿ ಮಾಡಿದ್ದೆ ಸಿದ್ದರಾಮಯ್ಯ ಎಂದು ಆರೋಪಿಸಿದರು.

ಪ್ರವಾಸ ಭಾಗ್ಯ, ಶಾದಿ ಭಾಗ್ಯ ಯೋಜನೆಗಳನ್ನು ಮಾಡಿ ಧರ್ಮ ಮತ್ತು ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿದವರು ಸಿದ್ದರಾಮಯ್ಯ. ಅ ವಿಷ ಬೀಜದ ಮುಂದುವರೆದ ಭಾಗವೇ ಇದು ಹಿಜಾಬ್ ವಿವಾದ. ಮೊದಲು ಇಸ್ಲಾಂ ಸಂಘಟನೆಗಳು ಇದರ ಹಿಂದೆ ಅಂತ ಅನ್ನಿಸುತ್ತಿತ್ತು.ಈಗ ಸಿದ್ದರಾಮಯ್ಯ, ಖಾದರ್ ಅವರ ಹೇಳಿಕೆಗಳನ್ನು ನೋಡಿದ್ರೆ ಇದರ ಹಿಂದೆ ಇವರೇ ಇದ್ದಂತೆ ಕಾಣಿಸುತ್ತಿದೆ ಎಂದು ಆರೋಪಿಸಿದರು.

ಕ್ಯಾಂಪಸ್‌ಗಳಲ್ಲಿ ಶಿಕ್ಷಣದ ಸರಸ್ವತಿ ಆರಾಧನೆ ನಡೆಯಬೇಕು. ಹಿಜಾಬ್ ಹಿಂದೆ ದೊಡ್ಡ ಹುನ್ನಾರ ಇದೆ. ಇಲ್ಲಿ ಆದ ಘಟನೆಗೆ ಕಾಶ್ಮೀರದಲ್ಲಿ ಇರೋರು ಮಾತನಾಡುತ್ತಾರೆ ಎಂದರೆ ಇದರ ಜಾಲ ದೊಡ್ಡದಿದೆ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಅಭಿಪ್ರಾಯಪಟ್ಟರು.

ಇದರಿಂದ ಇನ್ನೇನನ್ನೋ ಕರ್ನಾಟಕದಲ್ಲಿ ಮಾಡುವ ಹುನ್ನಾರ ಇದೆ. ಇದಕ್ಕೆ ಕಾಂಗ್ರೆಸ್‌ ಪರೋಕ್ಷವಾಗಿ ನೆರಳು ನೀಡುತ್ತಿದೆ. ಇದನ್ನು ಸರ್ಕಾರ ಮಟ್ಟ ಹಾಕುತ್ತದೆ. ಕಾನೂನು ಚೌಕಟ್ಟಿನಲ್ಲಿ ಆದಷ್ಟು ಬೇಗ ಸುತ್ತೋಲೆ ಹೊರಡಿಸುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT