ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ‘ದನಗಳಿಗೆ ಹಾಕುತ್ತಿದ್ದ ಅನ್ನ ತಿಂದು ಬದುಕು ಕಟ್ಟಿಕೊಂಡೆ’

ನೋವು ಸಹಿಸಿ ಛಲದ ಬದುಕು ಕಟ್ಟಿಕೊಂಡವರ ಮನದಾಳದ ಮಾತು
Last Updated 19 ಏಪ್ರಿಲ್ 2022, 7:46 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಡಾಡಿ ದನಗಳಿಗಾಗಿ ರಸ್ತೆ ಬದಿ ಹಾಗೂ ಮನೆಗಳ ಎದುರು ಹಾಕಿರುತ್ತಿದ್ದ ಆಹಾರ ಸಂಗ್ರಹಿಸಿಕೊಂಡು ಬಂದು ಸೇವಿಸುತ್ತಿದ್ದೆ. ಬುದ್ದಿ ಭ್ರಮಣೆಯಿಂದ ಬಳಲುತ್ತಿದ್ದ ಇಬ್ಬರು ಎಳೆಯ ಮಕ್ಕಳಿಗೂ ಅದನ್ನೇ ತಿನ್ನಿಸುತ್ತಿದೆ. ಆದರೆ ಈಗ ನಾನೇ ನೂರಾರು ಮಂದಿಗೆ ಊಟ ಹಾಕುವ ಮಟ್ಟಿಗೆ ಬೆಳೆದಿದ್ದೇನೆ’

ಒಣ ತ್ಯಾಜ್ಯ ಸಂಗ್ರಹ ಕೇಂದ್ರದ ನಿರ್ವಾಹಕಿ ಇಂದುಮತಿ ಅವರ ನೋವು ಹಾಗೂ ಆತ್ಮವಿಶ್ವಾಸ ಭರಿತ ಮಾತುಗಳಿವು.

ಭಾರತೀಯ ಮಾನವ ವಸಾಹತುಗಳ ಸಂಸ್ಥೆ (ಐಐಎಚ್‌ಎಸ್‌), ಅಲಯನ್ಸ್‌ ಆಫ್‌ ಇಂಡಿಯನ್‌ ವೇಸ್ಟ್‌ಪಿಕರ್ಸ್‌, ಹಸಿರು ದಳ, ಸಿಡಿಡಿ ಹಾಗೂ ಸೆಂಟರ್‌ ಫಾರ್‌ ಅಡ್ವೊಕಸಿ ಆ್ಯಂಡ್‌ ರೀಸರ್ಚ್‌ ಸಂಸ್ಥೆಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ‘ವಿ ಸ್ಪೀಕ್ ಟೂ’ (ನಾವೂ ಮಾತನಾಡಬಲ್ಲೆವು) ಸಂವಾದ ಕಾರ್ಯಕ್ರಮದಲ್ಲಿ ಅಂತರಂಗದ ಭಾವನೆಗಳನ್ನು ಬಿಚ್ಚಿಟ್ಟರು.

‘ಎಂಟನೇ ವಯಸ್ಸಿನಲ್ಲೇ ಅಮ್ಮ ತೀರಿಕೊಂಡರು. ಮತ್ತೊಂದು ಮದುವೆಯಾದ ಅಪ್ಪ ನಮ್ಮಿಂದ ದೂರ ಹೋದರು. ಬದುಕು ಕಟ್ಟಿಕೊಳ್ಳಲು ಅಜ್ಜಿಯ ಜೊತೆ ಅನಿವಾರ್ಯವಾಗಿ ತಮಿಳುನಾಡಿನಿಂದ ಬೆಂಗಳೂರಿಗೆ ಬಂದೆ. 17ನೇ ವಯಸ್ಸಿನಲ್ಲಿ ಮದುವೆಯಾದೆ. ಜನಿಸಿದ ಇಬ್ಬರು ಮಕ್ಕಳುಬುದ್ದಿ ಭ್ರಮಣೆಯಿಂದ ಬಳಲುತ್ತಿದ್ದರು. ಅವರ ಚಿಕಿತ್ಸೆ, ಜೀವನ ನಿರ್ವಹಣೆಗಾಗಿ ಸಾಲ ಮಾಡುವುದು ಅನಿವಾರ್ಯವಾಯಿತು. ಸಾಲಕ್ಕೆ ಹೆದರಿ ಪತಿ ಆತ್ಮಹತ್ಯೆ ಮಾಡಿಕೊಂಡರು. ಅದರ ಬೆನ್ನಲ್ಲೇ ಮಕ್ಕಳೂ ತೀರಿಕೊಂಡರು. ಹೀಗಿದ್ದರೂ ಎದೆಗುಂದದೆ ‘ಸ್ಕ್ರಾಪ್‌’ ಅಂಗಡಿ ಹಾಕಿಕೊಂಡೆ. ಹಸಿರು ದಳದವರು ಒಣ ತ್ಯಾಜ್ಯ ಸಂಗ್ರಹಣೆಯ ಪರವಾನಗಿ ನೀಡಿದರು. ಬಳಿಕ ನನ್ನ ಬದುಕೇ ಬದಲಾಯಿತು’ ಎಂದು ಭಾವುಕರಾದರು.

ಚಿಂದಿ ಆಯುವ ಇಂದಿರಾ, ‘ಲಾಕ್‌ಡೌನ್‌ ಸಮಯದಲ್ಲಿ ಕೆಲಸವೇ ಇಲ್ಲದೆ ಮನೆಯಲ್ಲಿ ಕೂರಬೇಕಾಯಿತು. ಆಗ ಹೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು. ಮನೆ ಬಾಡಿಗೆ ಕಟ್ಟಲಾಗದೆ ಪರಿತಪಿಸುವಂತಾಗಿತ್ತು. ಇಂತಹ ಸಾಕಷ್ಟು ನೋವುಗಳನ್ನು ಸಹಿಸಿಕೊಂಡು ಮೂರು ಮಕ್ಕಳಿಗೂ ಶಿಕ್ಷಣ ಕೊಡಿಸಿದ್ದೇನೆ. ದೊಡ್ಡ ಮಗಳು ಪಿ.ಎಚ್‌ಡಿ ವ್ಯಾಸಂಗ ಮಾಡುತ್ತಿದ್ದಾಳೆ. ಮಗ ಪದವಿ ಪೂರೈಸಿದ್ದಾನೆ. ಸರ್ಕಾರ ನಮ್ಮಂತಹ ಕೊಳೆಗೇರಿ ನಿವಾಸಿಗಳು, ಬಡವರಿಗೆ ಉದ್ಯೋಗದ ಭದ್ರತೆ ಒದಗಿಸಬೇಕು. ವಸತಿ ಸೌಕರ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ಎಫ್‌ಎಸ್‌ಟಿಪಿ ಆಪರೇಟರ್‌ ರಾಜಕುಮಾರ್‌, ‘ಮಾನವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಮನೆಯವರು ವಿರೋಧಿಸಿದರು. ಸ್ನೇಹಿತರು ಹೀಯಾಳಿಸಿದರು. ಆ ನೋವುಗಳನ್ನೆಲ್ಲಾ ಸಹಿಸಿಕೊಂಡು ಗೌರವಯುತ ಬದುಕು ಕಟ್ಟಿಕೊಂಡಿದ್ದೇನೆ.ನೀನು ನಮ್ಮ ಪಾಲಿಗೆ ಸತ್ತೇ ಹೋದೆ ಎಂದು ಹೇಳಿದ್ದ ಅಪ್ಪ, ಅಮ್ಮ ಈಗ ಪ್ರೀತಿಯಿಂದ ಮಾತನಾಡಿಸುತ್ತಾರೆ’ ಎಂದು ಸಂತಸ ವ್ಯಕ್ತಪಡಿಸಿದರು.

ಸಾರ್ವಜನಿಕ ಶೌಚಾಲಯ ನಿರ್ವಹಣೆ ಮಾಡುವ ಚಿತ್ರಾ, ‘ಕೋವಿಡ್‌ ಸಮಯದಲ್ಲಿ ಸಹೋದರರಿಬ್ಬರು ಮರಣ ಹೊಂದಿದ್ದರು. ಅವರ ಶವ ಹಸ್ತಾಂತರಿಸಲೂ ಆಸ್ಪತ್ರೆಯವರು ಹಣ ಕೇಳಿದ್ದರು’ ಎಂದು ಬೇಸರ ವ್ಯಕ್ತಪಡಿಸಿದರು.

ಪೌರ ಕಾರ್ಮಿಕೆ ವಲ್ಲಿ, ‘ಕೋವಿಡ್‌ ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದೆವು. ಕುಡಿಯಲು ನೀರು ಕೊಡಲು ಜನ ಹಿಂದೇಟು ಹಾಕುತ್ತಿದ್ದರು. ನೀರು ತುಂಬಿದ ಬಾಟಲಿಯನ್ನು ದೂರದಿಂದಲೇ ನಮ್ಮತ್ತ ಬಿಸಾಕುತ್ತಿದ್ದರು. ಇಂತಹ ಸಾಕಷ್ಟು ಅವಮಾನಗಳನ್ನು ಸಹಿಸಿಕೊಂಡೇ ಜೀವನ ನಡೆಸುತ್ತಿದ್ದೇವೆ. ಬಿಬಿಎಂಪಿಯವರು ನೀಡುವ ವೇತನದಿಂದ ಬದುಕು ಕಟ್ಟಿಕೊಳ್ಳುವುದು ಕಷ್ಟ. ವೇತನ ಹೆಚ್ಚಿಸಿದರೆ ಹೆಚ್ಚು ಅನುಕೂಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT