ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಕರ್ಫ್ಯೂ ಅಲ್ಲ; ಬಿಜೆಪಿ ಕರ್ಫ್ಯೂ – ಡಿ.ಕೆ. ಶಿವಕುಮಾರ್‌

Last Updated 7 ಜನವರಿ 2022, 18:02 IST
ಅಕ್ಷರ ಗಾತ್ರ

ಬೆಂಗಳೂರು: ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕೋವಿಡ್‌ ದೃಢಪ್ರಮಾಣ ದರ ಗಮನಾರ್ಹವಾಗಿ ಏರಿದ್ದ ವೇಳೆ ಲಾಕ್‌ಡೌನ್‌ ಮಾಡಲಾಗಿತ್ತು. ಈಗ ಶೇ 3ಕ್ಕೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದು ಕೋವಿಡ್‌ ಕರ್ಫ್ಯೂ ಅಲ್ಲ; ಬಿಜೆಪಿ ಕರ್ಫ್ಯೂ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಿಡಿಕಾರಿದರು.

ಪಕ್ಷದ ಶಾಸಕರು ಮತ್ತು ಮುಖಂಡರ ಜತೆ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೆ ಲಾಕ್‌ಡೌನ್‌ ಮಾಡಿದ್ದಾಗ ಆಸ್ಪತ್ರೆಗಳ ಶೇ 40ರಷ್ಟು ಹಾಸಿಗೆಗಳು ಭರ್ತಿಯಾಗಿದ್ದವು. ನಿತ್ಯ 800 ಟನ್‌ ಆಮ್ಲಜನಕದ ಬೇಡಿಕೆ ಇತ್ತು. ಈಗ ಆಸ್ಪತ್ರೆಗೆ ದಾಖಲಾಗುವವರೇ ಕಡಿಮೆ. ಸಾವಿನ ಸಂಖ್ಯೆಯೂ ಇಲ್ಲ. ಕಾಂಗ್ರೆಸ್‌ ಮೇಲಿನ ರಾಜಕೀಯ ದ್ವೇಷದಿಂದ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲಾಗಿದೆ’ ಎಂದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಎಷ್ಟು ಮಂದಿ ಕೋವಿಡ್‌ ಸೋಂಕಿತರಿದ್ದಾರೆ? ಎಷ್ಟು ಮಂದಿ ಆಸ್ಪತ್ರೆಯಲ್ಲಿದ್ದಾರೆ? ಎಷ್ಟು ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ? ಎಂಬ ಮಾಹಿತಿಯನ್ನು ಕಾಂಗ್ರೆಸ್‌ ಸಂಗ್ರಹಿಸಿದೆ. ಸರ್ಕಾರ ಸುಳ್ಳು ಲೆಕ್ಕ ತೋರಿಸಿ, ಕರ್ಫ್ಯೂ ಜಾರಿ ಮಾಡಿರುವುದು ಸ್ಪಷ್ಟ ಎಂದು ಆರೋಪಿಸಿದರು.

ರಾಮನಗರ ಜಿಲ್ಲೆಯಲ್ಲಿ ಸೋಂಕಿನ ತೀವ್ರತೆಯ ಇಲ್ಲ. ಕೋವಿಡ್‌ ಸಾವು ಕೂಡ ಇಲ್ಲ. ಆದರೆ, ಎಲ್ಲ ಪ್ರವಾಸಿ ತಾಣಗಳನ್ನು ಬಂದ್‌ ಮಾಡಲಾಗಿದೆ. ಬಿಜೆಪಿ ಸರ್ಕಾರ ವಿಜ್ಞಾನ ಮತ್ತು ತಾಂತ್ರಿಕತೆ ಆಧಾರದಲ್ಲಿ ಮಾತನಾಡುತ್ತಿಲ್ಲ. ಕೇವಲ ರಾಜಕೀಯವಾಗಿ ಮಾತನಾಡುತ್ತಿದೆ ಎಂದು ಹೇಳಿದರು.

ಸರ್ಕಾರದ ನಿರ್ಧಾರವನ್ನು ಆರು ಸಚಿವರು ಸಂಪುಟ ಸಭೆಯಲ್ಲೇ ವಿರೋಧಿಸಿದ್ದಾರೆ. ಕೋವಿಡ್‌ ಕುರಿತು ಸರ್ಕಾರ ಸುಳ್ಳು ಅಂಕಿಅಂಶ ನೀಡುತ್ತಿದೆ. ಉದ್ದೇಶಪೂರ್ವಕವಾಗಿ ಹೆಚ್ಚಿನ ಪ್ರಕರಣಗಳನ್ನು ತೋರಿಸಲಾಗಿದೆ. ಈ ಕುರಿತು ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಇಬ್ಬರೇ ನಡೆಯಲು ಸಿದ್ಧ: ‘ಪಾದಯಾತ್ರೆಗೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿಗಳ ಮೂಲಕ ನಮಗೆ ಪತ್ರ ಕಳುಹಿಸಿದ್ದಾರೆ. ಸಾವಿರಾರು ಜನರು ಸೇರುತ್ತೇವೆ ಎಂದು ಭಾವಿಸಿ ಅನುಮತಿ ನಿರಾಕರಿಸಿದ್ದಾರೆ. ನಾವು ಇಬ್ಬರೇ ನಡೆಯಲು ಸಿದ್ಧ’ ಎಂದು ಶಿವಕುಮಾರ್‌ ಹೇಳಿದರು.

ವಾರಾಂತ್ಯದ ಕರ್ಫ್ಯೂ ಹೆಸರಿನಲ್ಲಿ ಸರ್ಕಾರವೇ ದುಡಿಯುವ ವರ್ಗದ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ಎಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದರು ಎಂಬುದು ಸರ್ಕಾರಕ್ಕೆ ಗೊತ್ತಿದೆ. ಒಟ್ಟು ಆರ್ಥಿಕ ನಷ್ಟದ ಬಗ್ಗೆಯೂ ತಿಳಿದಿದೆ. ಕಾಂಗ್ರೆಸ್‌ ಪಕ್ಷದ ಮೇಲಿನ ದ್ವೇಷವನ್ನು ಜನರ ಮೇಲೆ ತೀರಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

ತಜ್ಞರ ವರದಿ ಬಹಿರಂಗಕ್ಕೆ ಆಗ್ರಹ:ಶಾಸಕ ಯು.ಟಿ. ಖಾದರ್‌ ಮಾತನಾಡಿ, ‘ರಾಜ್ಯ ಸರ್ಕಾರ ಕೋವಿಡ್‌ ನಿಯಂತ್ರಣದ ಹೆಸರಿನಲ್ಲಿ ಜಾರಿಗೊಳಿಸಿರುವ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಹಿಂದೆ ವೈಜ್ಞಾನಿಕ ಚಿಂತನೆ ಇಲ್ಲ. ತಜ್ಞರ ವರದಿ ಹೆಸರಿನಲ್ಲಿ ಈ ರೀತಿ ಮಾಡಲಾಗುತ್ತಿದೆ. ತಜ್ಞರು ನೀಡಿರುವ ವರದಿಯನ್ನು ಏಕೆ ಬಹಿರಂಗಪಡಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಶಾಸಕರಾದ ಅಜಯ್‌ ಸಿಂಗ್‌, ಶರತ್‌ ಬಚ್ಚೇಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ. ನಾರಾಯಣ ಸ್ವಾಮಿ, ರಾಷ್ಟ್ರೀಯ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್‌. ಪೊನ್ನಣ್ಣ ಉಪಸ್ಥಿತರಿದ್ದರು.

‘ನಾವೇನೂ ಓಮೈಕ್ರಾನ್ ತಳಿ ಹಿಡಿದು ತಂದಿಲ್ಲ’: ‘ಇವರು ಪಾದಯಾತ್ರೆ ಮಾಡುತ್ತಾರೆ ಎಂದು ನಾವು ಓಮೈಕ್ರಾನ್‌ ತಳಿ ಹಿಡಿದುಕೊಂಡು ಬಂದಿಲ್ಲ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಶುಕ್ರವಾರ ಉತ್ತರಿಸಿದ ಅವರು, ‘ಪಾದಯಾತ್ರೆನಾದರೂ ಮಾಡಲಿ, ಮ್ಯಾರಥಾನ್ ಆದರೂ ಮಾಡಲಿ. ನಮ್ಮ ವಿರೋಧವಿಲ್ಲ. ಆದರೆ ಪಾದಯಾತ್ರೆ ಸಮಯ ಮಾತ್ರ ಸರಿಯಿಲ್ಲ’ ಎಂದರು.

‘ಅವರ ಪಾದಯಾತ್ರೆ ಮಾಡಲು ನಮ್ಮ ವಿರೋಧವಿಲ್ಲ. ಎರಡು–ಮೂರು ತಿಂಗಳು ಬಿಟ್ಟು ಮಾಡಲಿ. ಮುಖ್ಯಮಂತ್ರಿಯಾಗಿ ಮತ್ತು ಸಚಿವರಾಗಿ ಕೆಲಸ ಮಾಡಿದವರಿಗೆ ಇದು ತಿಳಿಯದ ಸಂಗತಿಯಲ್ಲ’ ಎಂದು ಹೇಳಿದರು.

ಡಿಕೆಶಿ ನಿವಾಸದಲ್ಲಿ ಸಭೆ ಇಂದು

ಮೇಕೆದಾಟುವಿನಿಂದ ಭಾನುವಾರ ಆರಂಭವಾಗುವ ಪಾದಯಾತ್ರೆಗೆ ಪೂರ್ವಭಾವಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಕನಕಪುರದ ಮನೆಯಲ್ಲಿ ಶನಿವಾರ ಸಂಜೆ ಕಾಂಗ್ರೆಸ್‌ ಶಾಸಕರು ಮತ್ತು ಹಿರಿಯ ಮುಖಂಡರ ಸಭೆ ನಡೆಯಲಿದೆ. ಸಭೆಗೆ ಬರುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಈ.ತುಕಾರಾಮ್‌ ಎಲ್ಲ ಶಾಸಕರಿಗೂ ಶುಕ್ರವಾರ ಪತ್ರ ಕಳುಹಿಸಿದ್ದಾರೆ. ಶನಿವಾರ ಮಧ್ಯಾಹ್ನ 3 ಗಂಟೆಯೊಳಗೆ ಕನಕಪುರ ತಲುಪಬೇಕು, ಎಲ್ಲ ಶಾಸಕರೂ ಲಗ್ಗೇಜಿನ ಸಮೇತ ಬರಬೇಕು ಎಂಬ ಸೂಚನೆ ಪತ್ರದಲ್ಲಿದೆ. ಭಾನುವಾರ ಬೆಳಿಗ್ಗೆ 9ಕ್ಕೆ ಮೇಕೆದಾಟುವಿನಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭವಾಗಲಿದೆ. ಶನಿವಾರ ಸಂಜೆ ಕನಕಪುರದಲ್ಲಿ ಸಮಾಲೋಚನೆ ನಡೆಯಲಿದೆ. ಶಾಸಕರು, ಮುಖಂಡರಿಗೆ ಅಲ್ಲಿಯೇ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT